2026-03-07 02:13:57

Minister Satish Jarkiholi Promises Funding For Scientific Conference in Bajaj | ವೈಜ್ಞಾನಿಕ ಸಮ್ಮೇಳನಕ್ಕೆ ಬಜೆ ನಲ್ಲಿ ಅನುದಾನ: ಸಚಿವ ಸತೀಶ್ ಜಾರಕಿಹೊಳಿ ಭರವಸೆ | Speed News Kannada

Minister Satish Jarkiholi Promises Funding For Scientific Conference in Bajaj | ವೈಜ್ಞಾನಿಕ ಸಮ್ಮೇಳನಕ್ಕೆ ಬಜೆ ನಲ್ಲಿ ಅನುದಾನ: ಸಚಿವ ಸತೀಶ್ ಜಾರಕಿಹೊಳಿ ಭರವಸೆ | Speed News Kannada

ಬೆಂಗಳೂರು: ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತಿನಿಂದ ಪ್ರತಿ ವರ್ಷದ ವೈಜ್ಞಾನಿಕ ಸಮ್ಮೇಳನ, ವೈಚಾರಿಕ ಕಾರ್ಯಕ್ರಮಗಳಿಗಾಗಿ ಬಜೆಟ್ ನಲ್ಲಿ ಅನುದಾನವನ್ನು ಮೀಸಲಿಡಲು ಕ್ರಮ ಕೈಗೊಳ್ಳಲಾಗುವುದು  ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಭರವಸೆ ನೀಡಿದ್ದಾರೆ.  
ಇತ್ತೀಚೆಗೆ ಯಾದಗಿರಿಯಲ್ಲಿ ನಡೆದ ರಾಜ್ಯ ಮಟ್ಟದ 5ನೇ ವೈಜ್ಞಾನಿಕ ಸಮ್ಮೇಳನದಲ್ಲೂ ವೈಚಾರಿಕ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಕೆಲಸಗಳಿಗೆ ಬಜೆಟ್ ನಲ್ಲಿ ಅನುದಾನ ನೀಡುವುದಾಗಿ ಭರವಸೆ ಸಚಿವರು ಭರವಸೆ ನೀಡಿದ್ದರು. ಸಚಿವರ ಗೃಹ ಕಚೇರಿಯಲ್ಲಿ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತಿನ ಪದಾಧಿಕಾರಿಗಳಿಂದ ಕ್ರಿಯಾ ಯೋಜನೆಯ ಮನವಿ ಸ್ವೀಕರಿಸಿದ ಬಳಿಕ ಮಾತನಾಡಿದ ಅವರು, ವೈಜ್ಞಾನಿಕ ಸಮ್ಮೇಳನಗಳಿಗೆ ಖಂಡಿತವಾಗಿಯೂ ಬಜೆಟ್ ನಲ್ಲಿ ಅನುದಾನ ನೀಡಲಾಗುವುದು ಎಂದರು.  
ವೈಜ್ಞಾನಿಕ ವಿಚಾರಗಳು ಜನರಲ್ಲಿ ಸದಾ ಜಾಗೃತವಾಗುವಂತೆ ಮಾಡಬೇಕು. ವರ್ಷಂಪೂರ್ತಿ ನಡೆಯುವಂತಹ ಕಾರ್ಯಕ್ರಮಗಳನ್ನು ರೂಪಿಸಬೇಕು; ಕೇವಲ ವರ್ಷಕ್ಕೊಂದು  ಕಾರ್ಯಕ್ರಮಕ್ಕೆ ಸೀಮಿತಗೊಳಿಸಬಾರದು. ವೈಜ್ಞಾನಿಕ ಸಮ್ಮೇಳನಕ್ಕೆ ಬಜೆಟ್ ನಲ್ಲಿ ಖಂಡಿತವಾಗಿಯೂ ದೊರಕಿಸಲಾಗುವುದು. ಆದರೆ, ವೈಜ್ಞಾನಿಕ ಕಾರ್ಯಕ್ರಮಗಳು ನಿರಂತರವಾಗಿರಬೇಕು. ವಿಜ್ಞಾನ ತರಬೇತಿಗಳು, ನಾಟಕಗಳು, ಹಾಡುಗಳ ಮೂಲಕ ಜನರಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸುವ ಕೆಲಸ ಆಗಬೇಕೆಂದು ಒತ್ತಿ ಹೇಳಿದರು.  
ಬೆಳಗಾವಿ ಸಮ್ಮೇಳನ ಯಶಸ್ವಿಗೊಳಿಸಿ:
ರಾಜ್ಯದಲ್ಲಿ ವೈಜ್ಞಾನಿಕ ಸಂಶೋಧನಾ ಪರಿಷತ್ತಿನಿಂದ ನಡೆದಂತಹ ಎಲ್ಲ ವೈಜ್ಞಾನಿಕ ಸಮ್ಮೇಳನಗಳು ಯಶಸ್ವಿಯಾಗಿ ನಡೆದಿವೆ. ಕಳೆದ ಡಿಸೆಂಬರ್ ನಲ್ಲಿ  ಯಾದಗಿರಿ ಸಮ್ಮೇಳನವೂ ತುಂಬಾ ಯಶಸ್ವಿಯಾಗಿದೆ. ಹಾಗೆಯೇ,  ಪರಿಷತ್ ತೀರ್ಮಾನಿಸಿರುವಂತೆ ಬೆಳೆಗಾವಿಯಲ್ಲಿ ನಡೆಯುವ 6ನೇ ಸಮ್ಮೇಳನವೂ ಅತ್ಯಂತ ಯಶಸ್ವಿ ಆಗಬೇಕು.  ಅದಕ್ಕಾಗಿ ಎಲ್ಲ ಸಿದ್ದತೆಗಳನ್ನು ಈಗಿನಿಂದಲೇ ಮಾಡಿಕೊಳ್ಳಬೇಕು. ಅಲ್ಲಿನ ಯಾರನ್ನೂ ಸಮ್ಮೇಳನಾಧ್ಯಕ್ಷರನ್ನಾಗಿ ಮಾಡಬೇಕೆನ್ನುವುದನ್ನು ಚರ್ಚಿಸಿ ತೀರ್ಮಾನಿಸಬೇಕು. ಸೂಕ್ತವಾಗಿರುವ ವ್ಯಕ್ತಿಯನ್ನು ಆಯ್ಕೆ ಮಾಡಬೇಕೆಂದರು.  

ಪುಸ್ತಕಮನೆ ಅಂಕೇಗೌಡರಿಗೆ ಸನ್ಮಾನ 
ಇದೇ ಸಂದರ್ಭದಲ್ಲಿ ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆಯಾಗಿರುವ  ಪಾಂಡವಪುರದ ಪುಸ್ತಕಮನೆಯ ಅಂಕೇಗೌಡ ಅವರನ್ನು ಸನ್ಮಾನಿಸಲಾಯಿತು. ಯಾದಗಿರಿ 5ನೇ ವೈಜ್ಞಾನಿಕ ಸಮ್ಮೇಳನದ ಯಶಸ್ವಿಗೆ ಶ್ರಮಿಸಿದ ಗುರುಮಠಕಲ್ ಖಾಸಮಠದ ಶ್ರೀ ಶಾಂತವೀರ ಗುರು ಮುರುಘಾರಾಜೇಂದ್ರ ಸ್ವಾಮೀಜಿ, ಸಮ್ಮೇಳನ ಸರ್ವಾಧ್ಯಕ್ಷ ವಿಶ್ವಾರಾಧ್ಯ ಸತ್ಯಂಪೇಟೆ, ಪರಿಷತ್ತಿನ ಗೌರವ ಮಾರ್ಗದರ್ಶಕ ಡಾ. ಸಿ. ಸೋಮಶೇಖರ್, ಜಿಲ್ಲಾಧ್ಯಕ್ಷ ಗುಂಡಪ್ಪ ಕಲಬುರಗಿ, ಕಾಂಗ್ರೆಸ್ ಮುಖಂಡ ಡಾ. ಭೀಮಣ್ಣ ಮೇಟಿ ಸೇರಿದಂತೆ ಮತ್ತಿತರ ಮಹನೀಯರನ್ನು ಸಚಿವ ಸತೀಶ್ ಜಾರಕಿಹೊಳಿಯವರು ಗೌರವಿಸಿದರು.
ಪರಿಷತ್ತಿನ ಸಂಸ್ಥಾಪಕ ಅಧ್ಯಕ್ಷ ಡಾ. ಹುಲಿಕಲ್ ನಟರಾಜ್, ಪದಾಧಿಕಾರಿಗಳಾದ ರಾಮಚಂದ್ರ, ರವಿಕುಮಾರ್ ಗೌಡ, ಡಾ. ಉಷಾದೇವಿ ಹಿರೇಮಠ್, ಪ್ರೊ. ಸುಧಾ ಹುಚ್ಚಣ್ಣವರ, ಪಿ.ವಿ. ಸಿದ್ದಲಿಂಗಮ್ಮ ನಟರಾಜ್ ಸೇರಿದಂತೆ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರು ಹಾಗೂ ಎಲ್ಲ ಜಿಲ್ಲೆಗಳ ಜಿಲ್ಲಾಧ್ಯಕ್ಷರು ಉಪಸ್ಥಿತರಿದ್ದರು.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.