ನವದೆಹಲಿ: ನಾಗರಿಕರಿಗೆ ಮೂಲಸೌಕರ್ಯ ಒದಗಿಸಬೇಕಾದ 24ಕ್ಕೂ ಹೆಚ್ಚು ನಿವೇಶನಗಳನ್ನು ಕಾಂಗ್ರೆಸ್ ಕಚೇರಿಗಳಿಗೆ ಬಳಸಲು ಅದೇನು ಕಾಂಗ್ರೆಸ್ ಪಿತ್ರಾರ್ಜಿತ ಆಸ್ತಿಯೇ? ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ ಜೋಶಿ ಕೆಂಡ ಕಾರಿದ್ದಾರೆ. ಈ ಸಂಬಂಧ ಅವರು ಮಾಧ್ಯಮ ಪ್ರಕಟಣೆ ನೀಡಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.
ರಾಜ್ಯದಲ್ಲಿ ನಾಗರಿಕ ಸೌಲಭ್ಯದ (CA) ನಿವೇಶನಗಳನ್ನು ಕಡಿಮೆ ಬೆಲೆಗೆ, ಕಾಂಗ್ರೆಸ್ ಪಕ್ಷದ ಕಚೇರಿಗಳ ನಿರ್ಮಾಣಕ್ಕೆ ಹಂಚಿಕೆ ಮಾಡಿರುವುದು ರಾಜ್ಯ ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರದ ಪರಮಾವಧಿ ಎಂದು ಕಿಡಿ ಕಾರಿದ್ದಾರೆ.
ಸಾರ್ವಜನಿಕ ಉದ್ಯಾನವನ, ಗ್ರಂಥಾಲಯ, ಆಸ್ಪತ್ರೆಗಳಿಗೆ ಬಳಕೆ ಆಗಬೇಕಿದ್ದ ಕೋಟ್ಯಂತರ ರೂಪಾಯಿ ಮೌಲ್ಯದ ಭೂಮಿಯನ್ನು 'ಕಾಂಗ್ರೆಸ್ ಭವನ'ಗಳಿಗೆ ಮೀಸಲಿಟ್ಟಿರುವುದು ರಾಜ್ಯದ ಜನತೆಗೆ ಮಾಡಿದ ದ್ರೋಹ ಎಂದು ಖಂಡಿಸಿದ್ದಾರೆ.
ಒಂದೆಡೆ ಬಡವರಿಗೆ ನಿವೇಶನ ನೀಡಲು ಜಾಗವಿಲ್ಲ ಎನ್ನುವ ಈ ಕಾಂಗ್ರೆಸ್ ಸರ್ಕಾರ, ಇನ್ನೊಂದೆಡೆ ತನ್ನ ಪಕ್ಷದ ಕಚೇರಿಗಳಿಗೆ ಬಳಸಿಕೊಳ್ಳುತ್ತಿದೆ. ಈ ಮೂಲಕ ಸಾರ್ವಜನಿಕ ಆಸ್ತಿಯನ್ನು ಕಬಳಿಸುತ್ತಿದೆ. ರಾಜ್ಯದ ಸಾರ್ವಜನಿಕ ಆಸ್ತಿಯನ್ನು ಕಾಂಗ್ರೆಸ್ ಪಕ್ಷ ತನ್ನ ಪಿತ್ರಾರ್ಜಿತ ಆಸ್ತಿ ಎಂಬಂತೆ ಬಳಸಿಕೊಳ್ಳುತ್ತಿದೆ. ಬಡವರ ಹಿತ ಕಾಯುವ ಬದಲು ಕಾಂಗ್ರೆಸ್ ತನ್ನ 'ಪಕ್ಷದ ಹಿತ'ಕ್ಕೆ ಸಾರ್ವಜನಿಕ ಆಸ್ತಿಯನ್ನು ಲೂಟಿ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.
ನಿವೇಶನ ವಾಪಸ್ ಗೆ ಆಗ್ರಹ:
ಲೂಟಿ ಹೊಡೆಯುವುದೇ ಕಾಂಗ್ರೆಸ್‌ನ ಮೂಲ ಸಿದ್ಧಾಂತ ಎಂಬುದು ಮತ್ತೊಮ್ಮೆ ಸಾಬೀತಾಗಿದೆ ಎಂದಿರುವ ಜೋಶಿ, ಪಕ್ಷದ ಕಚೇರಿಗಳಿಗೆ ಮಾಡಿರುವ ಈ ಅಕ್ರಮ ಹಂಚಿಕೆಯನ್ನು ಕೂಡಲೇ ಹಿಂಪಡೆಯಬೇಕೆಂದು ಆಗ್ರಹಿಸಿದ್ದಾರೆ.
ರಾಜ್ಯ ಕಾಂಗ್ರೆಸ್ ಸರ್ಕಾರ ಇದನ್ನು ವಾಪಸ್ ಪಡೆಯದಿದ್ದರೆ ಬಿಜೆಪಿ ಬೃಹತ್ ಹೋರಾಟ ಹಮ್ಮಿಕೊಳ್ಳಲಿದೆ ಎಂದು ಸಚಿವ ಪ್ರಲ್ಹಾದ ಜೋಶಿ ಎಚ್ಚರಿಸಿದ್ದಾರೆ.