2026-03-07 08:11:02

Minister Prahlad Joshi | AI ಶೃಂಗಸಭೆಯಲ್ಲಿ ಕಾಂಗ್ರೆಸ್ ನಡೆಗೆ ಸ್ವಪಕ್ಷದವರಿಂದಲೇ ಟೀಕೆ ಸಚಿವ ಪ್ರಹ್ಲಾದ ಜೋಶಿ | Speed News Kannada

Minister Prahlad Joshi | AI ಶೃಂಗಸಭೆಯಲ್ಲಿ ಕಾಂಗ್ರೆಸ್ ನಡೆಗೆ ಸ್ವಪಕ್ಷದವರಿಂದಲೇ ಟೀಕೆ ಸಚಿವ ಪ್ರಹ್ಲಾದ ಜೋಶಿ | Speed News Kannada

ಬೆಂಗಳೂರು: AI ಶೃಂಗಸಭೆಯಲ್ಲಿ ಕಾಂಗ್ರೆಸ್ ವರ್ತನೆ ತೀವ್ರ ಆಘಾತಕಾರಿ ಮತ್ತು ಖೇದಕರವಾಗಿದೆ. ಸ್ವಪಕ್ಷದವರೇ ಆ ನಡೆಯನ್ನು ಟೀಕಿಸಿದ್ದಾರೆ. ಇದಕ್ಕಾಗಿ ಕಾಂಗ್ರೆಸ್ ನಾಯಕರು ದೇಶದ ಕ್ಷಮೆ ಕೇಳಬೇಕು ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಹ್ಲಾದ ಜೋಶಿ ಆಗ್ರಹಿಸಿದ್ದಾರೆ.
ಬೆಂಗಳೂರಿನಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವರು, ಕಾಂಗ್ರೆಸ್ ನ ಈ ನಡೆಗೆ ಅವರ ಪಕ್ಷದವರೇ ಅಸಮಾಧಾನ ಹೊರ ಹಾಕಿದ್ದಾರೆ. ಮಾರ್ಗರೇಟ್ ಆಳ್ವಾ ಅವರು 'ಡಿಸಿಪ್ಲೇನ್, ಡಿಗ್ನೆಟಿ ಮತ್ತು ಸೆನ್ಸ್ ' ಇರಬೇಕಿತ್ತು ಎಂದಿದ್ದಾರೆ. ಅಖಿಲೇಶ್ ಯಾದವ್ ಸಹ ಇದನ್ನೇ ವಿಭಿನ್ನವಾಗಿ ಹೇಳಿದ್ದಾರೆ. ಕಾಂಗ್ರೆಸ್ಸಿಗರು ಇನ್ನಾದರೂ ಸೌಜನ್ಯದಿಂದ ನಡೆದುಕೊಳ್ಳಲಿ ಎಂದು ಜೋಶಿ ಕಿವಿಮಾತು ಹೇಳಿದರು.
AI ಶೃಂಗ ಸಭೆಯಲ್ಲಿ 29 ವಿವಿಧ ದೇಶಗಳ ಪ್ರಮುಖರು, 45 ಮಂತ್ರಿಗಳು, ದೇಶದ ಉದ್ಯಮ ಪ್ರಮುಖರು, AI ಪ್ರಮುಖರು ಇದ್ದರು. ಇದ್ಯಾವುದನ್ನೂ ಲೆಕ್ಕಿಸದ ರೀತಿ ಕಾಂಗ್ರೆಸ್ ತೀರಾ ತೀರಾ ಅನುಚಿತ ವರ್ತನೆ ತೋರಿದೆ ಎಂದು ಜೋಶಿ ಕಿಡಿ ಕಾರಿದರು. 
ರಾಜ್ಯ ಕಾಂಗ್ರೆಸ್ ಪಕ್ಷದಲ್ಲಿ ಆಂತರಿಕ ಭಿನ್ನಮತ ಭುಗಿಲೆದ್ದಿದೆ. ಸಿಎಂ ಹುದ್ದೆ ಕಾಳಗದಲ್ಲಿ ರಾಜ್ಯದ ಹಿತವನ್ನು ಸಂಪೂರ್ಣ ಕಡೆಗಣಿಸಲಾಗಿದೆ. 'ಸಿಎಂ ಯಾರಾಗಬೇಕು?' ಎಂಬುದು ಆ ಪಕ್ಷದವರಿಗೇ ಬಿಟ್ಟ ವಿಚಾರ. ಆದರೆ, ಮುಖ್ಯಮಂತ್ರಿ ಪಟ್ಟದ ಕಾಳಗದಿಂದ ರಾಜ್ಯದಲ್ಲಿ ಆಡಳಿತ ಸಂಪೂರ್ಣ ಕುಸಿದಿರುವುದಂತೂ ಸ್ಪಷ್ಟ. ಅವೈಜ್ಞಾನಿಕ ಗ್ಯಾರೆಂಟಿ ಯೋಜನೆಗಳು, ಎಲ್ಲೇ ಮೀರಿದ ಭ್ರಷ್ಟಾಚಾರ, ಆಂತರಿಕ ಭಿನ್ನಮತದ ಕಾರಣ ರಾಜ್ಯದ ಸ್ಥಿತಿ ಅಧೋಗತಿ ತಲುಪಿದೆ ಎಂದು ದೂರಿದರು.
ದಲಿತ ಸಿಎಂ ಮಾಡುವ ನೈಜ ಕಾಳಜಿ ಕಾಂಗ್ರೆಸ್ಸಿಗಿಲ್ಲ: ರಾಜ್ಯದಲ್ಲಿ ಮುಖ್ಯಮಂತ್ರಿ ಕುರ್ಚಿಗೆ ಸಿಎಂ-ಡಿಸಿಎಂ ಕಾದಾಟದ ಕಾರಣ ಕಾಂಗ್ರೆಸ್ ಪಕ್ಷದಲ್ಲಿ ಈಗದಕ್ಕೆ 'ದಲಿತ ಸಿಎಂ' ಎಂಬ ಹೊಸ ಆಯಾಮ ಕೊಡುತ್ತಿದ್ದಾರೆ ಅಷ್ಟೇ, ಆದರೆ, ದಲಿತ ಸಿಎಂ ಮಾಡುವ ನೈಜ ಕಳಕಳಿ ಕಾಂಗ್ರೆಸ್ ನಾಯಕರಿಗೆ ಇಲ್ಲವೆಂದು ಪ್ರಹ್ಲಾದ ಜೋಶಿ ಚಾಟಿ ಬೀಸಿದರು.
ಸತೀಶ ಜಾರಕಿಹೊಳಿ, 'ಸರ್ಕಾರದಲ್ಲಿ ಭ್ರಷ್ಟಾಚಾರ ಈ ಮೊದಲೂ ಇತ್ತು' ಎಂದಿದ್ದಾರೆ. ಅದನ್ನು ಋಜುವಾತು ಪಡಿಸುವಲ್ಲಿ ಇವರು ವಿಫಲರಾಗಿದ್ದಾರೆ. ಆದರೆ, ಇವರ ಸರ್ಕಾರದಲ್ಲಿ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ ಎಂದು ಜೋಶಿ ಕಿಡಿ ಕಾರಿದರು.
ರಾಜ್ಯದೆಲ್ಲೆಡೆ ನೀರಿನ ಕ್ಷಾಮ: ರಾಜ್ಯದಲ್ಲಿ ಆಗಲೇ ಕುಡಿಯುವ ನೀರಿನ ತೀವ್ರ ಸಮಸ್ಯೆ ಎದುರಾಗಿದೆ. ಇನ್ನೂ ಫೆಬ್ರವರಿ ತಿಂಗಳಲ್ಲೇ ನೀರಿನ ಕ್ಷಾಮ ಉಂಟಾಗಿದೆ. ಉತ್ತರ ಕರ್ನಾಟಕ ಭಾಗದಲ್ಲಿ ನೀರಿನ ಬವಣೆ ಹೇಳ ತೀರದು. ರಸ್ತೆಗಳೂ ಅಧೋಗತಿ ಸ್ಥಿತಿ ತಲುಪಿವೆ. ಆದರೆ, ಇವರು ಈ ಮೂಲಭೂತ ಸೌಲಭ್ಯದ ಕಡೆ ಗಮನಹರಿಸೋದು ಬಿಟ್ಟು ಸಿಎಂ ಕುರ್ಚಿ ಗುದ್ದಾಟದಲ್ಲಿ ತೊಡಗಿದ್ದಾರೆ ಎಂದು ಆಕ್ರೋಶ ಹೊರ ಹಾಕಿದರು ಜೋಶಿ.
ಶಾಸಕ ಚಂದ್ರು ಲಮಾಣಿ ಪ್ರಕರಣ ತನಿಖೆಯಾಗಲಿ. ಸ್ವಾಮೀಜಿ ಅಡಿಯೋ ಕ್ಲಿಪ್ ಹೊರ ಬಂದಿದೆ. ಬೇಕಂತಲೇ ಯಾರೋ ಟ್ರ್ಯಾಪ್ ಮಾಡಿಸಿದ್ದಾರೆಯೇ? ಹೇಗೆ? ಇದರ ಬಗ್ಗೆಯೂ ತನಿಖೆ ಆಗಬೇಕು ಎಂದರು.
ಬೇಸಿಕ್ ಕಲ್ಚರ್ ಇರುವ ಪರಿಣಾಮ ರಾಜ್ಯದಲ್ಲಿ ಕೈಗಾರಿಕೆ, ಅಭಿವೃದ್ಧಿ, ಸಂಪತ್ತು ಎಲ್ಲಾ ಸುಸೂತ್ರವಾಗಿತ್ತು. ಆದರೆ, ಕಾಂಗ್ರೆಸ್ ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ ಇದನ್ನು ಹಾಳು ಮಾಡುತ್ತಿದೆ. ಅಭಿವೃದ್ಧಿ ಎಂಬುದು ಮರೀಚಿಕೆಯಾಗಿದೆ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಹರಿಹಾಯ್ದರು.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.