ಹೈದರಾಬಾದ್: ಮಹಿಳೆಯರ ಸುರಕ್ಷತೆ ಕುರಿತು ಖಾತ್ರಿಪಡಿಸಿಕೊಳ್ಳಲು ಹೈದರಾಬಾದ್ ಪಾಲಿಕೆ ವ್ಯಾಪ್ತಿಯ ಮಲಕಾಜ್‌ಗಿರಿಯ ನೂತನ ಪೊಲೀಸ್ ಕಮಿಷನರ್ ಬಿ. ಸುಮತಿ ಅವರು ವೇಷ ಮರೆಸಿಕೊಂಡು ರಾತ್ರಿ ಹೊತ್ತು ಒಬ್ಬಂಟಿಯಾಗಿ ಫೀಲ್ಡ್ ಗೆ ಇಳಿದಿದ್ದರು. ಮಧ್ಯರಾತ್ರಿ 12ರ ವೇಳೆಗೆ ಮಲಕಾಜ್‌ಗಿರಿ ವ್ಯಾಪ್ತಿಯ ದಿಲ್‌ಸುಖ್‌ನಗರದಲ್ಲಿ ಕಾನೂನು-ಸುವ್ಯವಸ್ಥೆ ಹೇಗಿದೆ? ಎಂದು ಪರಿಶೀಲನೆ ನಡೆಸಲು ಸಾಮಾನ್ಯ ಮಹಿಳೆಯಂತೆ ಸಂಚಾರ ನಡೆಸಿದ್ದರು.
ಈ ಸಂದರ್ಭದಲ್ಲಿ ತಮಗಾದ ಅನುಭವಗಳನ್ನು ಅವರು ಮಾಧ್ಯಮಗಳ ಮುಂದೆ ಬಿಚ್ಚಿಟ್ಟಿದ್ದಾರೆ.
ಸುಮಾರು 2 ಗಂಟೆ ನಗರದಲ್ಲಿ ತಾವೊಬ್ಬರೇ ಸಾಮಾನ್ಯ ಮಹಿಳೆಯ ರೀತಿ ಸಂಚರಿಸಿದ್ದಾರೆ. ಆದರೆ, ಈ ವೇಳೆ ಸುಮತಿ ಅವರಿಗಾದ ಅನುಭವದಿಂದ ಹೈದರಾಬಾದ್ ಮಹಿಳೆಯರು ಬೆಚ್ಚಿಬಿದ್ದಿದ್ದಾರೆ.
ಒಬ್ಬಂಟಿಯಾಗಿ ಸುತ್ತಾಟ ನಡೆಸುತ್ತಿದ್ದಾಗ ಸುಮತಿ ಅವರನ್ನು ಕಂಡು ಕೆಲವು ಯುವಕರು, ಮಧ್ಯವಯಸ್ಕ ವ್ಯಕ್ತಿಗಳು ಅಸಭ್ಯವಾಗಿ ನಡೆದುಕೊಂಡಿದ್ದಾರೆ. ಅಷ್ಟೇ ಏಕೆ ವೃದ್ಧರೂ ಸಹ ಸುಮತಿ ಅವರೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆ. ಕೆಲವು ಯುವಕರು ದ್ವಿಕ್ರ ವಾಹನಗಳಲ್ಲಿ ಹೋಗುವಾಗ ಬೈಕ್ ನಿಲ್ಲಿಸಿ ಬರ್ತಿಯಾ ಎಂದು ಕೇಳಿದ್ದಾರೆ. ಈ ಎಲ್ಲ ಅನುಭವಗಳನ್ನು ಅವರು ತೆರಿದಿಟ್ಟಿದ್ದಾರೆ.
ಇವರ ವರ್ತನೆಯಿಂದ ಬೇಸತ್ತ ಸುಮತಿ ಅವರು ತಮ್ಮ ಕಿರಿಯ ಪೊಲೀಸ್ ಅಧಿಕಾರಿಗಳಿಗೆ ಸ್ಥಳಕ್ಕೆ ದೌಡಾಯಿಸಲು ಎಚ್ಚರಿಕೆ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಧಾವಿಸಿದ ಪೊಲೀಸರು ತಮ್ಮ ಅಧಿಕಾರಿ ಸುಮತಿ ಅವರನ್ನು ಕಂಡು ಬೆಚ್ಚಿದ್ದಾರೆ.
ಸುಮತಿ ಅವರು ರಸ್ತೆಯಲ್ಲಿಯೇ ಪೊಲೀಸರ ಜತೆ ಸಭೆ ನಡೆಸಿ, ಮಹಿಳೆಯರ ಸುರಕ್ಷತೆ ಕುರಿತು ಕ್ರಮಗಳನ್ನು ತೆಗೆದುಕೊಳ್ಳುವ ಬಗ್ಗೆ ಪಾಠ ಮಾಡಿದ್ದಾರೆ.
ಮರುದಿನ ನಡೆದ ಸುದ್ದಿಗೋಷ್ಟಿಯಲ್ಲಿ ಕಮಿಷನರ್ ತಮ್ಮ ಕಾರ್ಯಾಚರಣೆ ಕುರಿತು ಸುದ್ದಿಗೋಷ್ಠಿ ನಡೆಸಿದ್ದಾರೆ.
ತಮ್ಮ ಜತೆ ಅಸಭ್ಯವಾಗಿ ವರ್ತಿಸಿದ ಯುವಕರನ್ನು ಗುರುತಿಸಿ ಕ್ರಮ ಕೈಗೊಳ್ಳಲು ಸೂಚನೆ ನೀಡಿದ್ದಾರೆ.
ಇನ್ನು ಮುಂದೆ ರಾತ್ರಿವೇಳೆ ಪೊಲೀಸ್ ಗಸ್ತನ್ನು ಹೆಚ್ಚಿಸಲಾಗುವುದು ಹಾಗೂ ಮಹಿಳೆಯರು ಮಕ್ಕಳ ಸುರಕ್ಷತೆ ಬಗ್ಗೆ ನಿರಂತರ ಮೇಲ್ವಿಚಾರಣೆ ಮಾಡಲಾಗುವುದು ಎಂದು ಸುಮತಿ ಅವರು ಭರವಸೆ ನೀಡಿದ್ದಾರೆ.
ತೆಲಂಗಾಣದಲ್ಲಿ ನಕ್ಸಲ್ ನಿಗ್ರಹ ಪಡೆಯಲ್ಲಿ ಸೇವೆ ಸಲ್ಲಿಸಿದ ನಂತರ ಸುಮತಿ ಅವರನ್ನು ಮಲಕಾಜ್‌ಗಿರಿ ಪೊಲೀಸ್ ಕಮಿಷನರ್ ಆಗಿ ನೇಮಕ ಮಾಡಲಾಗಿತ್ತು. ನೇಮಕವಾದ ದಿನವೇ ಅವರು ಈ ಕಾರ್ಯಾಚರಣೆ ನಡೆಸಿ ಸುದ್ದಿಯಾಗಿದ್ದಾರೆ.