2026-03-07 06:45:33

Menaka Guruswamy from the LGBTQ community to Rajya Sabha | ರಾಜ್ಯಸಭೆಗೆ ಎಲ್‌ಜಿಬಿಟಿಕ್ಯೂ ಸಮುದಾಯದ ಮೇನಕಾ ಗುರುಸ್ವಾಮಿ ಇವರ ಹಿನ್ನೆಲೆ ಏನು | Speed News Kannada

Menaka Guruswamy from the LGBTQ community to Rajya Sabha | ರಾಜ್ಯಸಭೆಗೆ ಎಲ್‌ಜಿಬಿಟಿಕ್ಯೂ ಸಮುದಾಯದ ಮೇನಕಾ ಗುರುಸ್ವಾಮಿ ಇವರ ಹಿನ್ನೆಲೆ ಏನು | Speed News Kannada

ಕೊಲ್ಕತ್ತಾ: ರಾಜ್ಯಸಭಾ ಚುನಾವಣೆಗೆ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿದೆ. ವಕೀಲೆ ಮೇನಕಾ ಗುರುಸ್ವಾಮಿ, ಪಶ್ಚಿಮ ಬಂಗಾಳದ ಮಾಜಿ ಪೊಲೀಸ್ ಮುಖ್ಯಸ್ಥ ರಾಜೀವ್ ಕುಮಾರ್, ರಾಜ್ಯ ಸಂಪುಟ ಸಚಿವ ಬಾಬುಲ್ ಸುಪ್ರಿಯೋ ಮತ್ತು ನಟಿ ಕೋಯೆಲ್ ಮಲ್ಲಿಕ್ ಅವರನ್ನು ನಾಮನಿರ್ದೇಶನ ಮಾಡಿದೆ.
ವಿಶೇಷ ಎಂದರೆ ಮೇನಕಾ ಗುರುಸ್ವಾಮಿ ಅವರು ಎಲ್‌ಜಿಬಿಟಿಕ್ಯೂ ಸಮುದಾಯದ ಮೊಟ್ಟಮೊದಲ ಸದಸ್ಯೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. ಈ ಆಯ್ಕೆಯು ಭಾರತೀಯ ಸಂಸತ್ತಿನಲ್ಲಿ ಲೈಂಗಿಕ ಅಲ್ಪಸಂಖ್ಯಾತರ ಪ್ರಾತಿನಿಧ್ಯದ ದೃಷ್ಟಿಯಿಂದ ಅತ್ಯಂತ ಮಹತ್ವದ ಹೆಜ್ಜೆಯೆಂದು ಗುರುತಿಸಲಾಗಿದೆ.
 ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲರಾದ ಮೇನಕಾ ಅವರು, ಭಾರತದಲ್ಲಿ ಸಲಿಂಗಕಾಮವನ್ನು ಅಪರಾಧ ಮುಕ್ತಗೊಳಿಸಿದ 'ಸೆಕ್ಷನ್ 377' ರದ್ದತಿ ಹೋರಾಟದ ಪ್ರಮುಖ ರೂವಾರಿಯಾಗಿದ್ದಾರೆ. 2018ರಲ್ಲಿ ಸುಪ್ರೀಂ ಕೋರ್ಟ್ ನೀಡಿದ ಐತಿಹಾಸಿಕ ತೀರ್ಪಿನ ಹಿಂದೆ ಇವರ ಶ್ರಮವಿದೆ. ಈ ತೀರ್ಪಿನ ನಂತರ ಇವರು ತಮ್ಮ ಸಹೋದ್ಯೋಗಿ ಅರುಂಧತಿ ಕಾಟ್ಜು ಅವರೊಂದಿಗಿನ ತಮ್ಮ ಸಂಬಂಧವನ್ನು ಬಹಿರಂಗಪಡಿಸುವ ಮೂಲಕ ಸಮಾನತೆಗಾಗಿ ಧ್ವನಿ ಎತ್ತಿದ್ದರು.
ವಿಧಾನಸಭೆಯ ಸಂಖ್ಯಾಬಲದ ಆಧಾರದ ಮೇಲೆ, ಐದು ಸ್ಥಾನಗಳಲ್ಲಿ ನಾಲ್ಕರಲ್ಲಿ ಟಿಎಂಸಿ ಅವಿರೋಧವಾಗಿ ಆಯ್ಕೆಯಾಗುವ ಸಾಧ್ಯತೆಯಿದೆ. ಮಾರ್ಚ್ 16ರಂದು ಮತದಾನ ನಡೆಯಲಿದೆ.
2024ರಲ್ಲಿ ನಡೆದ ಕೋಲ್ಕತ್ತಾ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನಲ್ಲಿ ಪಶ್ಚಿಮ ಬಂಗಾಳ ಸರ್ಕಾರದ ಪರವಾಗಿ ವಾದ ಮಂಡಿಸಿದ ವಕೀಲರ ತಂಡದಲ್ಲಿ ಮೇನಕಾ ಒಬ್ಬರಾಗಿದ್ದರು.
ಪಶ್ಚಿಮ ಬಂಗಾಳ ಸರ್ಕಾರದ ಪರವಾಗಿ ಸುಪ್ರೀಂ ಕೋರ್ಟ್‌ನಲ್ಲಿ ವಾದ ಮಂಡಿಸಲು ಕಪಿಲ್ ಸಿಬಲ್ ಅವರ ನೇತೃತ್ವದ 21 ವಕೀಲರ ತಂಡದಲ್ಲಿ ಮೇನಕಾ ಅವರು ಪ್ರಮುಖ ಸದಸ್ಯರಾಗಿದ್ದಾರೆ.
ಸಂತ್ರಸ್ತೆಯ ಗುರುತನ್ನು ರಕ್ಷಿಸುವ ವಿಚಾರದಲ್ಲಿ ಇವರು ನ್ಯಾಯಾಲಯಕ್ಕೆ ಮಾಹಿತಿ ನೀಡಿದ್ದರು. ಆಸ್ಪತ್ರೆಗಳಲ್ಲಿ ವೈದ್ಯರ ಸುರಕ್ಷತೆಗೆ ಸರ್ಕಾರ ಕೈಗೊಂಡಿರುವ ಕ್ರಮಗಳು ಮತ್ತು ವಿಳಂಬಕ್ಕೆ ಕಾರಣವಾದ ಅಂಶಗಳ (ಉದಾಹರಣೆಗೆ ಪ್ರವಾಹ) ಬಗ್ಗೆ ಸರ್ಕಾರದ ಪರವಾಗಿ ವಾದ ಮಂಡಿಸಿದ್ದರು.
ಕಳೆದ ಜನವರಿಯಲ್ಲಿ ಕಲ್ಕತ್ತಾ ಹೈಕೋರ್ಟ್‌ನಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಜಾರಿ ನಿರ್ದೇಶನಾಲಯದ (ಇಡಿ) ನಡುವಿನ ಸಂಘರ್ಷದ ಸಂದರ್ಭದಲ್ಲಿಯೂ ಟಿಎಂಸಿ ಪರವಾಗಿ ಮೇನಕಾ ವಾದ ಮಂಡಿಸಿದ್ದರು.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.