ಚೆನ್ನೈ : ಕರ್ನಾಟಕ ಸರ್ಕಾರದ ಬಹುನಿರೀಕ್ಷಿತ ಮೇಕೆದಾಟು ಸಮತೋಲನ ಜಲಾಶಯ ಯೋಜನೆ ಕುರಿತಂತೆ ನೆರೆ ರಾಜ್ಯ ತಮಿಳುನಾಡು ಮತ್ತು ಕರ್ನಾಟಕದ ನಡುವೆ ಜಟಾಪಟಿ ಮತ್ತೆ ತೀವ್ರಗೊಂಡಿದೆ. ಒಂದೆಡೆ ತಮಿಳುನಾಡು ಮುಖ್ಯಮಂತ್ರಿ ವಿಜಯ್ ಅವರು ಯೋಜನೆಯನ್ನು ಕಾನೂನುಬದ್ಧವಾಗಿ ತಡೆಯಲು ಸಭೆ ನಡೆಸಿದ್ದಾರೆ. ತಮಿಳುನಾಡಿನ ಚೆನ್ನೈನ ಸಚಿವಾಲಯದಲ್ಲಿ ಸೋಮವಾರ ಮುಖ್ಯಮಂತ್ರಿ ವಿಜಯ್ ಅಧ್ಯಕ್ಷತೆಯಲ್ಲಿ ಕಾನೂನು ತಜ್ಞರು ಹಾಗೂ ಉನ್ನತ ಅಧಿಕಾರಿಗಳ ತರ್ತು ಸಮಾಲೋಚನಾ ಸಭೆ ನಡೆಯಿತು. ಮೇಕೆದಾಟು ಬಳಿ ಕರ್ನಾಟಕ ಜಲಾಶಯ ನಿರ್ಮಿಸಿದರೆ ತಮಿಳುನಾಡಿನ ಹಿತಾಸಕ್ತಿಗೆ ತೀವ್ರ ಧಕ್ಕೆಯಾಗಲಿದೆ ಎಂದು ಕಳವಳ ವ್ಯಕ್ತಪಡಿಸಿದ ಅವರು, ಈ ಯೋಜನೆಯನ್ನು ತಡೆಯಲು ಮತ್ತು ಕಾವೇರಿ ನೀರನ್ನು ಪಡೆಯಲು ತೆಗೆದುಕೊಳ್ಳಬೇಕಾದ ಮುಂದಿನ ಕಾನೂನು ಕ್ರಮಗಳ ಬಗ್ಗೆ ಚರ್ಚಿಸಿದರು.
ಮತ್ತೊಂದೆಡೆ, ದೆಹಲಿಯಲ್ಲಿ ನಡೆದ ಸಂಸತ್ತಿನ ಕಾರ್ಯಕಲಾಪಗಳ ಸಲಹಾ ಸಮಿತಿ (BAC) ಸಭೆಯಲ್ಲಿ ಡಿಎಂಕೆ ಪಕ್ಷವು ಈ ವಿಷಯವನ್ನು ಪ್ರಸ್ತಾಪಿಸಿದೆ. ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರ ಸೂಚನೆಯಂತೆ, ಮೇಕೆದಾಟು ಯೋಜನೆಗೆ ಸಂಬಂಧಿಸಿದಂತೆ ನ್ಯಾಯಾಧಿಕರಣ ರಚಿಸುವಂತೆ ತಮಿಳುನಾಡು ಮಾಡಿರುವ ಮನವಿಯ ಬಗ್ಗೆ ಸಂಸತ್ತಿನಲ್ಲಿ ಚರ್ಚಿಸಲು ಸಮಯ ನಿಗದಿಪಡಿಸಬೇಕು ಎಂದು ಡಿಎಂಕೆ ರಾಜ್ಯಸಭಾ ಸದಸ್ಯ ಪಿ. ವಿಲ್ಸನ್ ಒತ್ತಾಯಿಸಿದ್ದಾರೆ. ತಮಿಳುನಾಡಿನ ಈ ಸಾಲು ಸಾಲು ನಡೆಯನ್ನು ಖಂಡಿಸಿರುವ ಕರ್ನಾಟಕದ ಅರಣ್ಯ ಹಾಗೂ ಜೀವಿಶಾಸ್ತ್ರ ಸಚಿವ ಈಶ್ವರ ಖಂಡ್ರೆ, ಮೇಕೆದಾಟು ಕೇವಲ ಕುಡಿಯುವ ನೀರು ಮತ್ತು ವಿದ್ಯುತ್ ಉತ್ಪಾದನೆಯ ಉದ್ದೇಶಿತ ಯೋಜನೆಯಾಗಿದೆ ಎಂದಿದ್ದಾರೆ.
ಬೆಂಗಳೂರಿನ ವಿಕಾಸಸೌಧದಲ್ಲಿ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಒಂದು ಕೋಟಿಗೂ ಹೆಚ್ಚು ಜನರಿಗೆ ಕುಡಿಯುವ ನೀರು ಒದಗಿಸಲು ಹಾಗೂ ಜಲವಿದ್ಯುತ್ ಉತ್ಪಾದಿಸಲು ರಾಜ್ಯ ಸರ್ಕಾರ ಈ ಯೋಜನೆ ರೂಪಿಸಿದೆ. ಕುಡಿಯುವ ನೀರು ಪ್ರತಿಯೊಬ್ಬರ ಮೂಲಭೂತ ಹಕ್ಕಾಗಿದ್ದು, ರಾಜಕೀಯ ಕಾರಣಕ್ಕಾಗಿ ತಮಿಳುನಾಡು ವಿರೋಧಿಸುವುದು ಸಮರ್ಥನೀಯವಲ್ಲ ಎಂದು ಸ್ಪಷ್ಟಪಡಿಸಿದರು. ಈ ಯೋಜನೆಯಿಂದ ತಮಿಳುನಾಡಿಗೂ ಅನುಕೂಲವಾಗಲಿದ್ದು, ನೆರೆ ರಾಜ್ಯ ಬೆಂಬಲ ನೀಡಬೇಕೇ ಹೊರತು ವಿರೋಧಿಸಬಾರದು ಎಂದು ಮನವಿ ಮಾಡಿದರು.