ಕೊಳ್ಳೇಗಾಲ: ಬೆಂಗಳೂರಿಗೆ ನೀರುಣಿಸುವ ಮೇಕೆದಾಟು ಯೋಜನೆಗೆ ಕಾರ್ಯ ಯೋಜನಾ ವರದಿ(ಡಿಪಿಆರ್) ಸಿದ್ಧಪಡಿಸಲಾಗಿದ್ದು ಶೀಘ್ರವೇ ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಇಲ್ಲಿನ ಜೀರ್ಣೋದ್ಧಾರಗೊಂಡಿರುವ ಮಧ್ಯರಂಗನಾಥ ಸ್ವಾಮಿ ದೇಗುಲ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ್ದ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ಮೇಕೆದಾಟು ಯೋಜನೆಗೆ ಕೇಂದ್ರದ ಅನುಮತಿ ದೊರೆತ ಬಳಿಕ ಭೂಮಿ ಪೂಜೆ ಮಾಡಲಾಗುತ್ತದೆ. ಮುಳುಗಡೆಯಾಗುವ ಅರಣ್ಯ ಪ್ರದೇಶಕ್ಕೆ ಪರ್ಯಾಯ ಜಮೀನು ನೀಡಲಾಗುತ್ತದೆ. ಮೇಕೆದಾಟು ಯೋಜನೆಗೆ ಆಕ್ಷೇಪ ಸಲ್ಲಿಸಲು ತಮಿಳುನಾಡಿಗೆ ಯಾವುದೇ ಹಕ್ಕಿಲ್ಲ, ಕೇಂದ್ರದ ಜಲ ಆಯೋಗ ಅಂತಿಮವಾಗಿ ತೀರ್ಮಾನಿಸಬೇಕು ಎಂದು ಸುಪ್ರೀಂ ಕೋರ್ಟ್ ಆದೇಶ ನೀಡಿದೆ, ತಮಿಳುನಾಡಿಗೆ 177 ಟಿಎಂಸಿ ಕಾವೇರಿ ನೀರು ಬಿಡಬೇಕು ಎಂಬ ಸ್ಪಷ್ಟ ಆದೇಶ ಇದೆ ಎಂದರು.
ಕಾಂಗ್ರೆಸ್ ಸರ್ಕಾರಕ್ಕೆ ಮೂರು ವರ್ಷ ತುಂಬಿದ್ದು ಕೊಟ್ಟ ಭರವಸೆಗಳನ್ನು ಈಡೇರಿಸಿದ್ದೇವೆ. 6ನೇ ಗ್ಯಾರಂಟಿಯಾಗಿ ಭೂ ಗ್ಯಾರಂಟಿ ನೀಡಿದ್ದೇವೆ. ಆಸ್ತಿಯ ದಾಖಲೆಗಳಲ್ಲಿ ಮಾಲೀಕರ ಹಾಗೂ ಸ್ವತ್ತಿನ ಫೋಟೋ ಹಾಕಿ ಪ್ರತಿ ಮನೆಗೆ ಖಾತೆ ನೀಡುತ್ತಿದ್ದೇವೆ. ಯಾವ ಸರ್ಕಾರವೂ ಮಾಡದ ಕೆಲಸವನ್ನು ಕಾಂಗ್ರೆಸ್ ಸರ್ಕಾರ ಮಾಡುತ್ತಿದ್ದು, ರಾಜ್ಯದ ಜನತೆಯ ಋಣ ತೀರಿಸುತ್ತಿದ್ದೇವೆ. ಬಾಕಿ ಉಳಿದಿರುವ ಭರವಸೆಗಳನ್ನು ಮುಂದಿನ ಎರಡು ವರ್ಷಗಳಲ್ಲಿ ಈಡೇರಿಸುತ್ತೇವೆ ಎಂದು ವಿವರಿಸಿದರು.
ಕಳೆದ ಎರಡು ವರ್ಷ ಉತ್ತಮ ಮಳೆಯಾಗಿತ್ತು, ಈ ವರ್ಷ ಮಳೆ ಕೊರತೆಯಾಗಬಹುದು ಎಂದು ಹೇಳಲಾಗುತ್ತಿದೆ. ಹಾಗಾಗಿ ರೈತರ ನೆರವಿಗೆ ಹಾಗೂ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವ ಕುರಿತು ಚರ್ಚೆ ಮಾಡುತ್ತಿದ್ದೇವೆ ಎಂದರು.
ಚಾಮರಾಜನಗರ ಜಿಲ್ಲೆಗೆ ಭೇಟಿನೀಡಿದರೆ ಅಧಿಕಾರ ಕಳೆದುಕೊಳ್ಳುತ್ತಾರೆ ಎನ್ನವುದು ಕೇವಲ ಮೂಢನಂಬಿಕೆ. ಐತಿಹಾಸಿಕ, ಧಾರ್ಮಿಕ, ಪ್ರಾಕೃತಿಕ ಸಂಪತ್ತು ಹೊಂದಿರುವ ಕಾವೇರಿ ನದಿ ತೀರದಲ್ಲಿರುವ ಪುಣ್ಯಭೂಮಿಯಲ್ಲಿ ಭಕ್ತಿ ಹಾಗೂ ಭಗವಂತ ನೆಲೆಸಿದ್ದಾನೆ, ಮಲೆ ಮಹದೇಶ್ವರ, ಮಧ್ಯರಂಗನಾಥ, ಸಿದ್ದಪ್ಪಾಜಿ, ಹಿಮವದ್ ಗೋಪಾಲಸ್ವಾಮಿ ಪುಣ್ಯಕ್ಷೇತ್ರಗಳಿಗೆ ನಾಡಿನ ಜನರು ಭೇಟಿನೀಡಿ ನೆಮ್ಮದಿ ಕಂಡುಕೊಳ್ಳುತ್ತಿದ್ದಾರೆ ಎಂದರು.
ಜಿಲ್ಲೆಯಲ್ಲಿ ಸಚಿವ ಸಂಪುಟ ಸಭೆ ನಡೆಸಿ ಈ ಭಾಗದ ಅಭಿವೃದ್ಧಿಗೆ ಯೋನೆಗಳನ್ನು ರೂಪಿಸಲಾಗಿದೆ. ಕೈಗಾರಿಕೆಗಳನ್ನು ಸ್ಥಾಪಿಸಿ ಅಭಿವೃದ್ಧಿಗೆ ಒತ್ತು ನೀಡಲಾಗಿದೆ. ಆಕ್ಸಿಜನ್ ದುರಂತದಲ್ಲಿ ಮೃತಪಟ್ಟವರ ಕುಟುಂಬ ಸದಸ್ಯರಿಗೆ ಸರ್ಕಾರಿ ಕೆಲಸ ಕೊಟ್ಟ ಮಾತು ಉಳಿಸಿಕೊಂಡಿದ್ದೇವೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.