ಧಾರವಾಡ: ಸರ್ಕಾರಿ ಹುದ್ದೆಗಳ ನೇಮಕಾತಿ ವಿಳಂಬ ಖಂಡಿಸಿ ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿಗಳ ಸಂಘಟನೆ (ಅಕ್ಸಾ) ಸಂಘಟನೆ ಮತ್ತು ಬಿಜೆಪಿ ಇಂದು ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿದವು. ಸಾವಿರಾರು ಉದ್ಯೋಗಾಕಾಂಕ್ಷಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಜಯನಗರ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಮುಖ್ಯ ಮಂತ್ರಿ ಸಿದ್ದರಾಮಯ್ಯ ಮತ್ತು ಅನೇಕ ಸಚಿವರ ಭಾವಚಿತ್ರ ಸುಟ್ಟು ಆಕ್ರೋಶ ಹೊರಹಾಕಿದರು.
ವಿಧಾನ ಸಭೆ ವಿರೋಧ ಪಕ್ಷದ ನಾಯಕ ಆರ್, ಅಶೋಕ, ಉಪ ನಾಯಕ ಅರವಿಂದ ಬೆಲ್ಲದ, ವಿಧಾನ ಪರಿಷತ್ತಿನ ಸದಸ್ಯ ಎಸ್. ವಿ.ಸಂಕನೂರ, ಛಲವಾದಿ ನಾರಾಯಣಸ್ವಾಮಿ, ಅಕ್ಸಾ ಅಧ್ಯಕ್ಷ ಕಾಂತ ಕುಮಾರ್ ಅವರೂ ಭಾಗಿಯಾಗಿದ್ದರು.
ಜಯನಗರ ವೃತ್ತದಲ್ಲಿ ಅಳವಡಿಸಿದ್ದ ಬಿಜೆಪಿ ಬ್ಯಾನರ್ ಗಳನ್ನು ಪ್ರತಿಭಟನಾನಿರತ ವಿದ್ಯಾರ್ಥಿಗಳು ಹರಿದು ಆಕ್ರೋಶ ವ್ಯಕ್ತಪಡಿಸಿದರು. ಆರ್.ಅಶೋಕ್ ಅವರು ಭಾಷಣ ಮಾಡುವುದಕ್ಕೆ ಪ್ರತಿಭಟನಾಕಾರರು ಒಪ್ಪಲಿಲ್ಲ. ಬಿಜೆಪಿ ಮುಖಂಡರು ಪ್ರತಿಭಟನಾ ಸ್ಥಳದಿಂದ ತೆರಳಿದರು.
ಪ್ರತಿಭಟನೆ ಹಮ್ಮಿಕೊಂಡಿರುವ ನಿಮಿತ್ತ ಶ್ರೀನಗರ ವೃತ್ತ, ಸಪ್ತಾಪುರ ಭಾಗದಲ್ಲಿ ಬಿಗಿ ಬಂದೋಬಸ್ತ್ ಮಾಡಲಾಗಿತ್ತು. ಹು-ಧಾ ಮಹಾನಗರ ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದರು. ಶ್ರೀನಗರ ವೃತ್ತ ಭಾಗದಲ್ಲಿ ಹೆಚ್ಚು ಪೋಲೀಸ್ ತಂಡಗಳನ್ನು ನಿಯೋಜಿಸಲಾಗಿತ್ತು.
ವಿದ್ಯಾರ್ಥಿಗಳನ್ನು ನಿಯಂತ್ರಿಸಲು ಪೊಲೀಸರ ಹರಸಾಹಸ ಪಡಬೇಕಾಯಿತು. ಪ್ರತಿಭಟನೆಯಲ್ಲಿ ವಿದ್ಯಾನಗರ ಠಾಣೆಯ PSIಗೆ ಗಾಯವಾಗಿದೆ. ವಿದ್ಯಾರ್ಥಿ ಸಂಘಟನೆ ಅಧ್ಯಕ್ಷನನ್ನು ವಶಕ್ಕೆ ಪಡೆಯುವ ವೇಳೆ ಶಶಿಕುಮಾರ್ ಅವರ ಎದೆಗೆ ಗುದ್ದಿ ಈತ ಓಡಿಹೋಗಿದ್ದಾನೆ. ಅವರಿಗೂ ಸಣ್ಣ ಪ್ರಮಾಣದ ಗಾಯವಾಗಿದೆ ಎಂದು ತಿಳಿದು ಬಂದಿದೆ.
ಬಿಜೆಪಿ ವಿರುದ್ಧ ಸಚಿವ ಸಂತೋಷ್ ಲಾಡ್ ಆರೋಪ:
ನಮ್ಮ ಸರಕಾರ 40 ಸಾವಿರ ಹುದ್ದೆಗಳನ್ನು ಭರ್ತಿ ಮಾಡಿದೆ. 50 ಸಾವಿರ ಹುದ್ದೆ ಭರ್ತಿಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಮುಖ್ಯಮಂತ್ರಿಗಳು ನೇಮಕಾತಿ ಕುರಿತು ಬಜೆಟ್ ನಲ್ಲಿ ಘೋಷಣೆ ಮಾಡಲಿದ್ದಾರೆ. ಇದನ್ನು ತಿಳಿದು ಧಾರವಾಡದಲ್ಲಿ ಬಿಜೆಪಿ ಹೋರಾಟಕ್ಕೆ ಮುಂದಾಗಿದೆ. ಹೋರಾಟ ಮಾಡೋದಿದ್ದರೆ ಕೇಂದ್ರದ ವಿರುದ್ಧ ಮಾಡಲಿ. ಪ್ರತಿವರ್ಷ 2 ಕೋಟಿ ನೇಮಕಾತಿ ಆಶ್ವಾಸನೆ ನೀಡಿದ್ರು. ಕೊಟ್ಟ ಮಾತಿನಂತೆ ಕೇಂದ್ರ ಸರ್ಕಾರ ನಡೆಯಲಿಲ್ಲ ಎಂದು ಸಚಿವ ಸಂತೋಷ್ ಲಾಡ್ ಕಿಡಿ ಕಾರಿದ್ದಾರೆ.