ಸಂಸತ್ತಿನ ಬಜೆಟ್ ಅಧಿವೇಶನದ ನಂತರ ಲೋಕಸಭೆ ಮತ್ತು ರಾಜ್ಯಸಭೆಗಳೆರೆಡರಲ್ಲೂ ಪ್ರತಿಪಕ್ಷಗಳು ತೀವೃ ಆಕ್ರೋಶ ವ್ಯಕ್ತಪಡಿಸಿವೆ. ನಿನ್ನೆ (ಬುಧವಾರ) ಲೋಕಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣಕ್ಕೆ ವಂದನಾ ನಿರ್ಣಯದ ಮೇಲಿನ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಭಾಷಣ ರದ್ದುಗೊಳಸಿದ್ದನ್ನು, ಇಂದು (ಗುರುವಾರ) ರಾಜ್ಯಸಭೆಯಲ್ಲಿ ಪ್ರತಿಪಕ್ಷಗಳು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿವೆ.
ಇಂದು ಸದನ ಆರಂಭವಾಗುತ್ತಿದ್ದಂತೇ, ಪ್ರಧಾನಿ ಮೋದಿ ಅವರ ಲೋಕಸಭಾ ಭಾಷಣ ರದ್ದುಗೊಳಿಸಿದ್ದನ್ನು ಪ್ರಶ್ನಿಸಿದ ವಿರೋಧ ಪಕ್ಷದ ಸದಸ್ಯರು, ಗದ್ದಲದ ನೆಪ ಹೇಳಿ ಪ್ರಧಾನಿ ಮೋದಿ ಭಾಷಣದಿಂದ ತಪ್ಪಿಸಿಕೊಂಡಿರುವುದು ಸದನದ ಸಂಪ್ರದಾಯಕ್ಕೆ ಮಾಡಿದ ಅವಮಾನ ಎಂದು ಗುಡುಗಿದರು.
ಇನ್ನೊಂದೆಡೆ ಲೋಕಸಭೆಯಲ್ಲಿಯೂ ವಿರೋಧ ಪಕ್ಷದ ಸದಸ್ಯರು ಪ್ರತಿಭಟನೆ ನಡೆಸಿದ್ದು, ಸದನದ ಬಾವಿಗಳಿದು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಇಂದು ರಾಜ್ಯಸಭೆಯಲ್ಲಿ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು, ಲೋಕಸಭೆಯಲ್ಲಿ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಅವರಿಗೆ ಭಾಷಣ ಮಾಡಲು ಬಿಡದಿರುವುದನ್ನು ಪ್ರಶ್ನಿಸಿದ್ದಾರೆ.
ರಾಜ್ಯಸಭೆ ಕಲಾಪ ಆರಂಭವಾಗುತ್ತಿದ್ದಂತೇ ಮಾತನಾಡಿದ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ, "ಲೋಕಸಭೆಯಲ್ಲಿ ಪ್ರಧಾನಿ ಮೋದಿ ಭಾಷಣ ಮಾಡುವುದಿಲ್ಲ, ವಿಪಕ್ಷ ನಾಯಕ ಮಾತನಾಡುತ್ತೇನೆ ಎಂದರೆ ಮಾತನಾಡಲು ಬಿಡುವುದಿಲ್ಲ. ಈ ರೀತಿಯಾಗಿ ಸದನ ನಡೆಸುತ್ತಿರುವುದು ಸಂವಿಧಾನ ಮತ್ತು ಪ್ರಜಾಪ್ರಭುತ್ವಕ್ಕೆ ಮಾಡುತ್ತಿರುವ ಅಪಚಾರ" ಎಂದು ತೀವ್ರ ವಾಗ್ದಾಳಿ ನಡೆಸಿದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಬಿಜೆಪಿ ನಾಯಕ ಜೆ.ಪಿ. ನಡ್ಡಾ, "ಪ್ರಧಾನಿ ನರೇಂದ್ರ ಮೋದಿ ಲೋಕಸಭೆಯನ್ನು ಉದ್ದೇಶಿಸಿ ಮಾತನಾಡಲು ಸಿದ್ಧರಿದ್ದರು ಆದರೆ ಪ್ರತಿಭಟನೆಗಳಿಂದಾಗಿ ಸಾಧ್ಯವಾಗಲಿಲ್ಲ" ಎಂದು ಪ್ರತಿಪಕ್ಷಗಳ ವಿರುದ್ಧ ಆರೋಪ ಮಾಡಿದರು.
ಜೆಪಿ ನಡ್ಡಾ ಅವರ ಮಾತಿನಿಂದ ಕೆರಳಿದ ಪ್ರತಿಪಕ್ಷ ಸದಸ್ಯರು, ಆಡಳಿತ ಪಕ್ಷದ ವಿರುದ್ಧ ದಿಕ್ಕಾರದ ಘೋಷಣೆಗಳನ್ನು ಕೂಗುತ್ತಾ ತಮ್ಮ ಪ್ರತಿಭಟನೆಯನ್ನು ತೀವ್ರಗೊಳಿಸಿದರು. ಸಭಾಪತಿಗಳು ಗದ್ದಲವನ್ನು ತಣಿಸುವ ಪ್ರಯತ್ನ ನಡೆಸಿದರು.