ಶಿವಮೊಗ್ಗ: ಹುಟ್ಟುಹಬ್ಬವನ್ನು ಸಮಾಜಮುಖಿ ಕಾರ್ಯಕ್ರಮದ ಮೂಲಕ ಆಚರಿಸುವ ನಿರ್ಧಾರ ಕೈಗೊಂಡಿರುವ ಶಿಕ್ಷಣ ಸಚಿವ ಮಧು ಬಂಗಾರಪ್ಪ ಸೊರಬ ಕ್ಷೇತ್ರದ ಪೌರಕಾರ್ಮಿಕರು ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉಚಿತ ವಿಮಾನಯಾನ ಸೌಲಭ್ಯ ಒದಗಿಸಿದ್ದಾರೆ.
ಸೊರಬ ಪುರಸಭೆ ಮತ್ತು ಆನವಟ್ಟಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುವ 36 ಪೌರಕಾರ್ಮಿಕರು, ಜೊತೆಗೆ ಸೊರಬ ತಾಲೂಕಿನ ಸರ್ಕಾರಿ ಶಾಲೆಗಳಲ್ಲಿ ಕಳೆದ ಸಾಲಿನಲ್ಲಿ ಶೇ.97 ಕ್ಕಿಂತ ಹೆಚ್ಚು ಅಂಕ ಪಡೆದ 30 ವಿದ್ಯಾರ್ಥಿಗಳು ಹಾಗೂ ಅವರ ಪೋಷಕರು ಸೇರಿದಂತೆ ಒಟ್ಟು 100ಕ್ಕೂ ಹೆಚ್ಚು ಮಂದಿ ಶಿವಮೊಗ್ಗ ವಿಮಾನ ನಿಲ್ದಾಣದಿಂದ ಬೆಂಗಳೂರಿಗೆ ವಿಮಾನದಲ್ಲಿ ಪ್ರಯಾಣಿಸಿದರು.
ಈ ಹಿಂದೆ ರೈಲು ಮತ್ತು ಬಸ್‌ಗಳ ಮೂಲಕವೇ ಸಂಚಾರ ಮಾಡುತ್ತಿದ್ದ ಹಲವರಿಗೆ ಇದು ಮೊದಲ ವಿಮಾನ ಪ್ರಯಾಣವಾಗಿದ್ದು, ಅಪಾರ ಸಂತಸ ವ್ಯಕ್ತವಾಯಿತು. ವಿಶೇಷವಾಗಿ ಪೌರಕಾರ್ಮಿಕರು ತಮ್ಮ ಜೀವನದ ಹೊಸ ಅನುಭವವನ್ನು ಹಂಚಿಕೊಂಡರು. ಸಚಿವ ಮಧು ಬಂಗಾರಪ್ಪ ಸ್ವತಃ ಅವರೊಂದಿಗೆ ಪ್ರಯಾಣಿಸಿ, ಕಾರ್ಯಕ್ರಮಕ್ಕೆ ಮತ್ತಷ್ಟು ವೈಶಿಷ್ಟ್ಯ ತುಂಬಿದರು. ತಮ್ಮ ಹುಟ್ಟುಹಬ್ಬವನ್ನು ಶ್ರಮಜೀವಿಗಳು ಮತ್ತು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡ ಈ ಉಪಕ್ರಮ ಗಮನ ಸೆಳೆಯುತ್ತಿದೆ.