ಬೆಂಗಳೂರು: ಮಾದಾವರ-ತುಮಕೂರು ಮೆಟ್ರೋ (Madavara -Tumakuru Metro) ರೈಲು ಯೋಜನೆಗೆ ಸಂಬಂಧಿಸಿದಂತೆ ಸರ್ಕಾರಕ್ಕೆ ವಿಸ್ತೃತ ಯೋಜನಾ ವರದಿ (ಡಿಪಿಆರ್) ಸಲ್ಲಿಸಲಾಗಿದೆ. ಗೃಹ ಸಚಿವ ಡಾ. ಜಿ.ಪರಮೇಶ್ವರ್ ಅವರು ಡಿಪಿಆರ್ ವರದಿ ಸ್ವೀಕರಿಸಿದ್ದಾರೆ. ಡಿಪಿಆರ್ ಅನ್ನು ಬಿಎಮ್‌ಆರ್‌ಸಿಎಲ್ ಸಿದ್ಧಪಡಿಸಿ ಸಲ್ಲಿಸಿದೆ.
ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಮಾದವಾರ-ತುಮಕೂರು ಮೆಟ್ರೋ ರೈಲು ಯೋಜನೆ ಕುರಿತು ಚರ್ಚೆ ನಡೆಯುವ ಸಾಧ್ಯತೆಯಿದೆ.
ಮತ್ತೊಂದು ಸಮಾರಂಭದಲ್ಲಿ ಮಾತನಾಡಿದ ಸಚಿವ ಪರಮೇಶ್ವರ್, ತುಮಕೂರಿಗೆ ಮೆಟ್ರೋ ರೈಲು ಬೇಕು ಎನ್ನುವುದು ಹತ್ತು ವರ್ಷಗಳ ಬೇಡಿಕೆಯಾಗಿತ್ತು. ಕಳೆದ ಬಜೆಟ್‌ನಲ್ಲಿ ಸಾಧ್ಯತಾ ವರದಿ ಅಧ್ಯಯನ ಮಾಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದರು.
ನಂತರ ಡಿಪಿಆರ್ ವರದಿಗೆ ಟೆಂಡರ್ ಕೊಡಲಾಗಿತ್ತು. ಬಿಎಂಆರ್ ಸಿಎಲ್ ಬೇರೊಂದು ಸಂಸ್ಥೆ ಮೂಲಕ ಡಿಪಿಆರ್ ವರದಿ ಸಿದ್ಧಪಡಿಸಿ ಕೊಟ್ಟಿದೆ. ಮೆಟ್ರೋ ಯೋಜನೆಯನ್ನು ಪಿಪಿಪಿ ಮಾಡೆಲ್‌ನಲ್ಲಿ ಮಾಡಲಾಗುತ್ತದೆ. ವರದಿಯಲ್ಲಿ ಅಂದಾಜು ರೂ. 20 ಸಾವಿರ ಕೋಟಿ ಬೇಕಾಗಬಹುದು ಎಂದು ಹೇಳಲಾಗಿದೆ. ಸಂಪುಟ ಸಭೆಯಲ್ಲಿ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.