ಚಿಕ್ಕಬಳ್ಳಾಪುರ: ಮದುವೆಯಾಗಿ ಇಬ್ಬರು ಮಕ್ಕಳಿರುವ ಮಹಿಳೆಯೊಂದಿಗೆ ಯುವಕನೊಬ್ಬ ಪ್ರೇಮ ಸಂಬಂಧ ಇಟ್ಟುಕೊಂಡು, ಕುಡಿದ ಅಮಲಿನಲ್ಲಿ ಚಾಕು ಬೀಸಿ ಆಕೆಯನ್ನು ಹತ್ಯೆ ಮಾಡಿರುವ ಶಾಕಿಂಗ್ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ. - ತಾಯಿಯನ್ನು ಕಳೆದುಕೊಂಡಿರುವ ಪುಟ್ಟ ಮಕ್ಕಳಿಬ್ಬರು ಈಗ ಅನಾಥರಾಗಿದ್ದಾರೆ. ಚಿಕ್ಕಬಳ್ಳಾಪುರ ನಗರದ ತೇಜಸ್ವಿನಿ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಗಂಡನನ್ನು ಬಿಟ್ಟು ಇಬ್ಬರು ಪುಟ್ಟ ಮಕ್ಕಳೊಂದಿಗೆ ಏಕಾಂಗಿಯಾಗಿ ಜೀವನ ನಡೆಸುತಿದ್ದಳು. ಹೋಟೆಲ್ ವೊಂದರಲ್ಲಿ ಕೆಲಸ ಮಾಡಿಕೊಂಡಿದ್ದ ಮಹಿಳೆ ಹೋಟೆಲ್‌ನವರೇ ಕೊಟ್ಟಿದ್ದ ರೂಮಿನಲ್ಲಿ ಮಕ್ಕಳೊಂದಿಗೆ ಜೀವನ ಸಾಗಿಸುತ್ತಿದ್ದಳು.
ಈ ನಡುವೆ ಮಹಿಳೆಗೆ ಸಂದೀಪ್ ಎಂಬ ಯುವಕನ ಪರಿಚಯವಾಗಿದ್ದು, ಇಬ್ಬರು ಅಕ್ರಮ ಸಂಬಂಧ ಬೆಳೆಸಿದ್ದರು. ಕಳೆದ 1 ತಿಂಗಳ ಹಿಂದೆ ತೇಜಸ್ವಿನಿ ಹಾಗೂ ಸಂದೀಪ್ ಇಬ್ಬರು ಸೇರಿ ಬೇರೆ ಮನೆ ಮಾಡಿ ಹೊಸ ಜೀವನ ಶುರು ಮಾಡಿದ್ದರು. ಆದರೆ ಎರಡು ದಿನಗಳ ಹಿಂದೆ ಇವರಿಬ್ಬರ ನಡುವೆ ನಡೆದ ಜಗಳದಿಂದ ಮಹಿಳೆ ಪ್ರಾಣ ಕಳೆದುಕೊಂಡಿದ್ದಾಳೆ. ಕಳೆದ 2 ದಿನಗಳ ಹಿಂದೆ ತೇಜಸೀನಿ ಸ್ನೇಹಿತ ಅರುಣಾ ಅವರ ಮನೆಯಲ್ಲಿ ಉಳಿದುಕೊಂಡಿದ್ದಾಗ ಅಲ್ಲಿ ಸಂದೀಪ್ ಕುಡಿದು ಗಲಾಟೆ ಮಾಡಿದ್ದ. ಕುಡಿದ ಅಮಲಿನಲ್ಲಿ ಪ್ರಿಯಕರ ಸಂದೀಪ್ ಮೇಲೆ ತೇಜಸ್ವಿನಿ ಹಲ್ಲೆ ಮಾಡಿದ್ದಳು. ಆಗ ಸಿಟ್ಟಾದ ಸಂದೀಪ್ ಮದ್ಯದ ಪಾಕೆಟ್ ಕಟ್ ಮಾಡಲು ಇಟ್ಟುಕೊಂಡಿದ್ದ ಚಾಕುವಿನಿಂದ ತೇಜಸ್ವಿನಿ ಹೊಟ್ಟೆ ಕಡೆ ಬೀಸಿದ್ದಾನೆ. ಆಗ ತೇಜಸ್ವಿನಿ ತೀವ್ರ ಗಾಯಗೊಂಡು ರಕ್ತಸ್ರಾವವಾಗಿದೆ.
ತಕ್ಷಣ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿ ಹೊಟ್ಟೆಗೆ ಆಗಿದ್ದ ಗಾಯಕ್ಕೆ ಹೊಲಿಗೆಯನ್ನು ಹಾಕಿ ಔಷಧಿ ಮಾತ್ರಯನ್ನು ಕೊಟ್ಟು ಮನೆಗೆ ಕಳುಹಿಸಲಾಗಿತ್ತು. ಆದರೆ ತೇಜಸ್ವಿನಿ ಔಷಧಿ ತೆಗೆದುಕೊಳ್ಳುವ ಬದಲು ಮದ್ಯಪಾನ ಮಾಡಿ ಮಲಗಿದ್ದಳು. ಇದರಿಂದ ಗಾಯ ಗುಣವಾಗದೆ ಆಕೆಯ ಆರೋಗ್ಯ ಸ್ಥಿತಿ ಇನ್ನಷ್ಟು ಹದಗೆಟ್ಟಿದೆ. ಆಕೆಯನ್ನು ಮತ್ತೆ ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗದೆ ತೇಜಸ್ವಿನಿ ಮೃತಪಟ್ಟಿದ್ದಾಳೆ.
ಪ್ರಕರಣ ಸಂಬಂಧ ಚಿಕ್ಕಬಳ್ಳಾಪುರ ಪೊಲೀಸರು ಸಂದೀಪ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ವಿಚಾರಣೆ ವೇಳೆ ನಡೆದ ಘಟನೆಯನ್ನು ಆತ ಬಾಯಿಟ್ಟಿದ್ದಾನೆ. ತೇಜಸ್ವಿನಿ ಹಣ ಹಾಗೂ ಮದ್ಯಕ್ಕಾಗಿ ಪೀಡಿಸುತ್ತಿದ್ದಳು. ಇದೇ ವಿಚಾರಕ್ಕೆ ಗಲಾಟೆಯಾಗಿ ಆಕಸ್ಮಿಕವಾಗಿ ಚಾಕು ತಗುಲಿದೆ ಎಂದು ಪೊಲೀಸರ ಮುಂದೆ ಹೇಳಿಕೊಂಡಿದ್ದಾನೆ. ಆದರೆ ಇದೀಗ ತೇಜಸ್ವಿನಿಯ ಇಬ್ಬರು ಪುಟ್ಟ ಮಕ್ಕಳು ಅನಾಥರಾಗಿದ್ದಾರೆ.