2026-06-25 03:51:41

ಮದುವೆಗೆ ಒಲ್ಲೆ ಎಂದ ಪ್ರೇಯಸಿ ; ಹೈಟೆನ್ಷನ್‌ ಕಂಬ ಏರಿ ಆತ್ಮಹತ್ಯೆಗೆ ಯತ್ನಿಸಿದ ಯುವಕ|Speed News Kannada

ಮದುವೆಗೆ ಒಲ್ಲೆ ಎಂದ ಪ್ರೇಯಸಿ ; ಹೈಟೆನ್ಷನ್‌ ಕಂಬ ಏರಿ ಆತ್ಮಹತ್ಯೆಗೆ ಯತ್ನಿಸಿದ ಯುವಕ|Speed News Kannada

ಆನೇಕಲ್: ಪ್ರೀತಿಸುತ್ತಿದ್ದ ಯುವತಿ ಜತೆ ಮದುವೆ ಮಾಡಿಸಲು ಪೋಷಕರು ಒಪ್ಪದ ಕಾರಣ ನೊಂದ ಯುವಕನೊಬ್ಬ ಮದ್ಯದ ಅಮಲಿನಲ್ಲಿ ಹೈಟೆನ್ಷನ್‌ ಕಂಬ ಏರಿ ಆತ್ಮಹತ್ಯೆಗೆ ಯತ್ನಿಸಿದ ಪ್ರಕರಣ ಆನೇಕಲ್‌ ಇಂಡ್ಲವಾಡಿ ಸಮೀಪದ ಸಿದ್ದನಪಾಳ್ಯದಲ್ಲಿ ವರದಿಯಾಗಿದೆ. ಆದರೆ ಅಗ್ನಿಶಾಮಕ ಠಾಣೆಯ ಸಿಬ್ಬಂದಿ ಆತನನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಆನೇಕಲ್ ತಾಲ್ಲೂಕಿನ ಸಿದ್ದನಪಾಳ್ಯದ ನಿವಾಸಿ ಸೋಮಶೇಖರ್(23) ಎರಡು ವರ್ಷಗಳಿಂದ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ. ಈಕೆಯ ಜತೆಯೇ ಮದುವೆ ಮಾಡಿಸುವಂತೆ ಪೋಷಕರ ಮೇಲೆ ಒತ್ತಡ ಹಾಕಿದ್ದಾನೆ. ಆದರೆ ಪೋಷಕರು ಮೊದಲು ಕುಡಿಯುವುದನ್ನು ಬಿಡು ಎಂದು ಬುದ್ದಿ ಮಾತು ಹೇಳಿದ್ದಾರೆ. ಇದರಿಂದ ಕೆರಳಿದ ಸೋಮಶೇಖರ್ ವಿದ್ಯುತ್‌ ಕಂಬ ಏರಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ.

ಇದಕ್ಕೂ ಮೊದಲು ಮನೆಯಲ್ಲಿ ದಾಂಧಲೆ ನಡೆಸಿದ್ದ. ಪೋಷಕರು ಪೊಲೀಸ್‌ ಠಾಣೆಯಲ್ಲಿ ದೂರು ನೀಡುವುದಾಗಿ ಹೆದರಿಸಿದ್ದರಿಂದ ಸುಮ್ಮನಾಗಿದ್ದ. ನಂತರ ಹೈ ಟೆನ್ಷನ್‌ ವಿದ್ಯುತ್ ಕಂಬ ಏರಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾನೆ. ಪ್ರೀತಿಸಿದ ಯುವತಿ ಬಂದರೆ ಮಾತ್ರ ಕೆಳಗಡೆ ಇಳಿಯುವುದಾಗಿ ಹಟ ಹಿಡಿದಿದ್ದ. ಆದರೆ ಯುವತಿಯೂ ಮದುವೆಗೆ ನಿರಾಕರಿಸಿದ್ದಳು ಎಂದು ತಿಳಿದು ಬಂದಿದೆ.

ಸ್ಥಳೀಯರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಬಂದ ಪೊಲೀಸ್‌ ಇಲಾಖೆ ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಸತತ ನಾಲ್ಕು ತಾಸು ಯುವಕನ ಮನವೊಲಿಸಿದರು. ಕೊನೆಗೂ ಯುವಕನ ಮನವೊಲಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಆತನನ್ನು ಕಂಬದಿಂದ ಕೆಳಗೆ ಕರೆತರುವಲ್ಲಿ ಯಶಸ್ವಿಯಾದರು.

ಈ ನಾಟಕ ನೋಡಲು ಸುತ್ತಮುತ್ತಲಿನ ಗ್ರಾಮಸ್ಥರು ಹೆಚಚಿನ ಸಂಖ್ಯೆಯಲ್ಲಿ ಸೇರಿದ್ದರು.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.