ಬೆಂಗಳೂರು: ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿದ ಪ್ರಕರಣದಲ್ಲಿ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ (ಕ್ರೈಸ್) ಸೂಪರಿಂಟೆಂಡಿಂಗ್ ಎಂಜಿನಿಯರ್ ಎಚ್.ಎಂ. ಜನಾರ್ಧನ್ ಅವರ ಮನೆಯ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ.
ಈ ದಾಳಿ ನಡೆದ ಸಂದರ್ಭದಲ್ಲಿ ಜನಾರ್ಧನ್ ಸ್ನೇಹಿತನ ಮನೆಯಲ್ಲಿ ಸುಮಾರು ರೂ. 1.70 ಕೋಟಿ ನಗದು ಪತ್ತೆಯಾಗಿದೆ. ಈ ಪ್ರಮಾಣದ ನಗದು ನೋಡಿ ಲೋಕಾಯುಕ್ತ ಅಧಿಕಾರಿಗಳೇ ಬೆಚ್ಚಿ ಬಿದ್ದಿದ್ದಾರೆ.
ಎಚ್.ಎಂ. ಜನಾರ್ಧನ್ ತಮ್ಮ ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಸಿದ್ದಾರೆ ಎಂಬ ಖಚಿತ ಮಾಹಿತಿ ಆಧರಿಸಿ ಲೋಕಾಯುಕ್ತ ಎಸ್ ಪಿ ನೇತೃತ್ವದ ತಂಡಗಳು ಬೆಂಗಳೂರು ಸೇರಿದಂತೆ ಒಟ್ಟು ಆರು ಕಡೆಗಳಲ್ಲಿ ಏಕಕಾಲಕ್ಕೆ ಶೋಧ ಕಾರ್ಯ ನಡೆಸಿದ್ದವು.
ಸ್ನೇಹಿತನ ಅಪಾರ್ಟ್ ಮೆಂಟ್ ನಲ್ಲಿ ಕೋಟಿ ಕೋಟಿ ನಗದು:
ಪೊಲೀಸರು ಎಚ್.ಎಂ ಜನಾರ್ಧನ್ ಆಪ್ತ ಸ್ನೇಹಿತ ಸುಜಯ್ ಶೆಟ್ಟಿ ಎಂಬುವವರಿಗೆ ಸೇರಿದ ಅಪಾರ್ಟ್ ಮೆಂಟ್ ಮೇಲೆ ದಾಳಿ ನಡೆಸಿದ್ದರು. ಈ ವೇಳೆ ಅವರ ಮನೆಯಲ್ಲಿ ಅಡಗಿಸಿಟ್ಟಿದ್ದ ರೂ.1 ಕೋಟಿ 70 ಲಕ್ಷ ನಗದು ಹಣ ಪತ್ತೆಯಾಗಿದೆ. ಜನಾರ್ಧನ್ ಅವರ ನಿವಾಸದಲ್ಲಿ ಪ್ರಮುಖ ಆಸ್ತಿ ದಾಖಲೆಗಳು, ಬ್ಯಾಂಕ್ ಪಾಸ್ ಬುಕ್ ಗಳು, ಚಿನ್ನಾಭರಣ ಮತ್ತು ಐಷಾರಾಮಿ ಕಾರುಗಳ ಲೆಕ್ಕ ಹಾಕುತ್ತಿದ್ದಾರೆ.