2026-03-07 06:14:20

Lets bring BJP back to power on its own strength | ಸ್ವಂತ ಶಕ್ತಿಯ ಮೇಲೆ ಮತ್ತೆ ಬಿಜೆಪಿ ಅಧಿಕಾರಕ್ಕೆ ತರೋಣ ಬಿ ಎಸ್ ಯಡಿಯೂರಪ್ಪ ಕರೆ | Speed News Kannada

Lets bring BJP back to power on its own strength | ಸ್ವಂತ ಶಕ್ತಿಯ ಮೇಲೆ ಮತ್ತೆ ಬಿಜೆಪಿ ಅಧಿಕಾರಕ್ಕೆ ತರೋಣ ಬಿ ಎಸ್ ಯಡಿಯೂರಪ್ಪ ಕರೆ | Speed News Kannada

ಬೆಂಗಳೂರು: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ವಂತ ಶಕ್ತಿಯ ಮೇಲೆ ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವ ಹಾಗೂ ಭ್ರಷ್ಟ ಕಾಂಗ್ರೆಸ್ ಸರಕಾರವನ್ನು ಕಿತ್ತೊಗೆಯುವ ಸಂಕಲ್ಪ ಮಾಡಬೇಕಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ತಿಳಿಸಿದ್ದಾರೆ.
ನಗರದ ಅರಮನೆ ಮೈದಾನದ ಗೇಟ್ ನಂ.4, ಗಾಯತ್ರಿ ಗ್ರ್ಯಾಂಡ್ ನಲ್ಲಿ ಇಂದು ನಡೆದ ರಾಜ್ಯ ಕಾರ್ಯಕಾರಿಣಿಯ ಸಂದರ್ಭದಲ್ಲಿ 50 ವರ್ಷ ಸಕ್ರಿಯ ರಾಜಕಾರಣದಲ್ಲಿ ನಡೆದು ಬಂದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಅಭಿನಂದಿಸಲಾಯಿತು. ಬಳಿಕ ಅಭಿನಂದನೆಗೆ ಉತ್ತರವಾಗಿ ಯಡಿಯೂರಪ್ಪ ಅವರು ಮಾತನಾಡಿ, ಮುಂದಿನ ದಿನಗಳಲ್ಲಿ ಭ್ರಷ್ಟ ಕಾಂಗ್ರೆಸ್‌ ಸರಕಾರವನ್ನು ಕಿತ್ತೊಗೆದು ಅಭಿವೃದ್ಧಿಪರ ಬಿಜೆಪಿ ಸರಕಾರವನ್ನು ತರಲು ನೀವೆಲ್ಲರೂ ಸಿದ್ಧರಾಗಿದ್ದೀರಿ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರು ಮಾತನಾಡಿ, ಯಡಿಯೂರಪ್ಪ ಅವರು ನಮ್ಮ ಪಕ್ಷವನ್ನು ಕರ್ನಾಟಕದಲ್ಲಿ ಉತ್ತುಂಗಕ್ಕೆ ಏರಿಸಿದವರು ಎಂದು ಅಭಿಪ್ರಾಯಪಟ್ಟರು..
ದಕ್ಷಿಣ ಭಾರತದಲ್ಲಿ ಕರ್ನಾಟಕವನ್ನು ಪ್ರಥಮ ರಾಜ್ಯವಾಗಿ ಬಿಜೆಪಿ ಆಡಳಿತಕ್ಕೆ ತಂದವರು ಯಡಿಯೂರಪ್ಪ. ದೂರದೃಷ್ಟಿ ಚಿಂತನೆಯ ಮನೋಭಾವ, ಸಮರ್ಪಕ ಯೋಚನೆ, ಯೋಜನೆ ಅನುಷ್ಠಾನದ ತಾಕತ್ತು, ಜೀವನದ ಒಳಿತು ಕೆಡುಕುಗಳನ್ನು ಸ್ಥಿತಪ್ರಜ್ಞನಂತೆ ಕರ್ತವ್ಯ ನಿರ್ವಹಿಸಿದ ಸಮರ್ಥ ರಾಜಕೀಯ ನಾಯಕ ಅವರು ಎಂದು ವಿಶ್ಲೇಷಿಸಿದರು.
ಬೂಕನಕೆರೆಯಿಂದ ಹೊರಟು ಶಿಕಾರಿಪುರಕ್ಕೆ ಹೋಗಿ ಅಲ್ಲಿಂದ ಬೆಂಗಳೂರು, ದೆಹಲಿವರೆಗೆ ತೆರಳುವ ಎಲ್ಲ ಸಂದರ್ಭದಲ್ಲೂ ದೊಡ್ಡ ಸಂಘರ್ಷವನ್ನು ಅವರು ಎದುರಿಸಿದ್ದರು ಎಂದು ತಿಳಿಸಿದರು. ಸಂಘರ್ಷದ, ಸಂಘಟನೆಯ ಅದ್ಭುತ ಹಾದಿಯಲ್ಲಿ ಅವರು ನಡೆದು ಬಂದಿದ್ದಾರೆ. ಕಾರ್ಯಕರ್ತರು, ಮುಖಂಡರ ಬೆನ್ನು ತಟ್ಟಿ ಅವರು ಸಂಘಟನೆಯಲ್ಲಿ ತೊಡಗಿಸಿಕೊಳ್ಳುವಂತೆ ನೋಡಿಕೊಳ್ಳುತ್ತಿದ್ದುದನ್ನು ಉದಾಹರಣೆಗಳ ಜೊತೆ ತಿಳಿಸಿದರು. 
ಇದೇವೇಳೆ ಯಡಿಯೂರಪ್ಪನವರು ನಡೆದುಬಂದ ದಾರಿಯ ಕುರಿತ ವಿಡಿಯೋ ಪ್ರದರ್ಶಿಸಲಾಯಿತು.
ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ, ಕೇಂದ್ರ ಸಚಿವರಾದ ಗಜೇಂದ್ರ ಸಿಂಗ್ ಶೇಖಾವತ್, ಪ್ರಲ್ಹಾದ್ ಜೋಶಿ, ಕು.ಶೋಭಾ ಕರಂದ್ಲಾಜೆ, ವಿ. ಸೋಮಣ್ಣ, ವಿರೋಧ ಪಕ್ಷದ ನಾಯಕ ಆರ್.ಅಶೋಕ್, ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ಕರ್ನಾಟಕ ರಾಜ್ಯ ಉಸ್ತುವಾರಿ ರಾಧಾಮೋಹನ್ ದಾಸ್ ಅಗ್ರವಾಲ್, ರಾಜ್ಯ ಸಹ ಉಸ್ತುವಾರಿ ಪಿ.ಸುಧಾಕರ್ ರೆಡ್ಡಿ, ಜಗದೀಶ್ ಶೆಟ್ಟರ್, ಗೋವಿಂದ ಕಾರಜೋಳ, ಡಾ.ಸಿ.ಎನ್ .ಅಶ್ವತ್ಥನಾರಾಯಣ್, ಸಂಸದರು, ಶಾಸಕರು, ವಿಧಾನಪರಿಷತ್ ಸದಸ್ಯರು, ಮಾಜಿ ಸಚಿವರು ಉಪಸ್ಥಿತರಿದ್ದರು.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.