2026-03-07 06:26:18

KR Nagar Victim Kidnapping Case | ಕೆ ಆರ್‌ ನಗರ ಸಂತ್ರಸ್ತೆ ಅಪಹರಣ ಪ್ರಕರಣ ಶಾಸಕ ಎಚ್‌ ಡಿ ರೇವಣ್ಣಗೆ ಹಿನ್ನಡೆ ತಡೆಯಾಜ್ಞೆ ತೆರವುಗೊಳಿಸಿದ ಹೈಕೋರ್ಟ್ | Speed News Kannada

KR Nagar Victim Kidnapping Case | ಕೆ ಆರ್‌ ನಗರ ಸಂತ್ರಸ್ತೆ ಅಪಹರಣ ಪ್ರಕರಣ ಶಾಸಕ ಎಚ್‌ ಡಿ ರೇವಣ್ಣಗೆ ಹಿನ್ನಡೆ ತಡೆಯಾಜ್ಞೆ ತೆರವುಗೊಳಿಸಿದ ಹೈಕೋರ್ಟ್ | Speed News Kannada

ಬೆಂಗಳೂರು: ಕೆ.ಆರ್‌. ನಗರದ ಅತ್ಯಾಚಾರ ಸಂತ್ರಸ್ತೆಯನ್ನು ಅಪಹರಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಜೆಡಿಎಸ್‌ ಶಾಸಕ ಎಚ್‌ ಡಿ ರೇವಣ್ಣ ಅವರ ವಿರುದ್ಧ ದೋಷಾರೋಪ ಹೊರಿಸದಂತೆ ಈ ಹಿಂದೆ ನೀಡಲಾಗಿದ್ದ ಮಧ್ಯಂತರ ತಡೆಯಾಜ್ಞೆಯನ್ನು ಹೈಕೋರ್ಟ್ ಇಂದು ತೆರವುಗೊಳಿಸಿದೆ. ಇದರಿಂದ ರೇವಣ್ಣ ಅವರಿಗೆ ಹಿನ್ನೆಡೆ ಉಂಟಾಗಿದೆ. 
ತಮ್ಮ ವಿರುದ್ಧ ದಾಖಲಾಗಿರುವ ಪ್ರಕರಣವನ್ನು ರದ್ದುಗೊಳಿಸುವಂತೆ ಕೋರಿ ರೇವಣ್ಣ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಇಂದು ನಡೆಯಿತು. ನ್ಯಾ. ಸುನಿಲ್‌ ದತ್‌ ಯಾದವ್‌ ಅವರಿದ್ದ  ಪೀಠ ವಿಚಾರಣೆ ನಡೆಸಿತು.
ವಿಚಾರಣೆ ಆರಂಭವಾಗುತ್ತಿದ್ದಂತೆ, ರೇವಣ್ಣ ಪರ ವಕೀಲರು ವಾದ ಮಂಡನೆಗೆ ಕಾಲಾವಕಾಶ ಕೋರಿದರು. “ಹಿರಿಯ ವಕೀಲರು ಮ್ಯಾಜಿಸ್ಟ್ರೇಟ್‌ ನ್ಯಾಯಾಲಯದ ಮುಂದೆ ಹಾಜರಾಗಿದ್ದು, ವಿಚಾರಣೆಯನ್ನು ಮುಂದೂಡಬೇಕು ಎಂದು ಕೋರಿದರು.
ಈ ಮನವಿಯಿಂದ ಅಸಮಾಧಾನಗೊಂಡ ಹೈಕೋರ್ಟ್‌, ರೇವಣ್ಣ ಪರ ವಕೀಲರನ್ನು ತರಾಟೆಗೆ ತೆಗೆದುಕೊಂಡು ಇದು ಸಾಂವಿಧಾನಿಕ ನ್ಯಾಯಾಲಯ. ಮ್ಯಾಜಿಸ್ಟ್ರೇಟ್ ಕೋರ್ಟ್ ನೆಪವೊಡ್ಡಿ ವಿಚಾರಣೆ ಮುಂದೂಡಲು ಮನವಿ ಸಲ್ಲಿಸುವುದು ಸರಿಯಲ್ಲ. ನ್ಯಾಯಾಲಯದ ಪ್ರಕ್ರಿಯೆಗಳ ಬಗ್ಗೆ ನಿಮಗೆ ಅರಿವಿಲ್ಲವೇ ಎಂದು ಖಾರವಾಗಿ ಪ್ರಶ್ನಿಸಿತು.
ನಂತರ ನ್ಯಾಯಮೂರ್ತಿಗಳು ವಾದ ಮಂಡನೆಗೆ ಅವಕಾಶ ನೀಡಿ ವಿಚಾರಣೆಯನ್ನು ಎರಡು ವಾರಗಳ ಕಾಲ ಮುಂದೂಡಿದರು.  ಜತೆಗೆ ರೇವಣ್ಣ ಅವರ ವಿರುದ್ಧ ಕೆಳಹಂತದ ನ್ಯಾಯಾಲಯದಲ್ಲಿ ದೋಷಾರೋಪ ಹೊರಿಸದಂತೆ ನೀಡಲಾಗಿದ್ದ ಮಧ್ಯಂತರ ತಡೆಯಾಜ್ಞೆಯನ್ನು ತೆರವುಗೊಳಿಸಿ ಆದೇಶ ನೀಡಿದರು.
ಇದರಿಂದ ತನಿಖಾ ಸಂಸ್ಥೆಗೆ ಮುಂದಿನ ಕಾನೂನು ಪ್ರಕ್ರಿಯೆಗಳನ್ನು ಕೈಗೊಳ್ಳಲು ಹಾದಿ ಸುಗಮವಾಗಿದೆ. ರೇವಣ್ಣ ಅವರಿಗೆ ಕಾನೂನು ಸಂಕಷ್ಟ ಹೆಚ್ಚಾಗುವ ಸಾಧ್ಯತೆಗಳಿವೆ.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.