2026-06-05 11:54:11

ಪರಿಸರ ಸ್ನೇಹಿ ವಿದ್ಯುತ್ ಪ್ರಸರಣ ವ್ಯವಸ್ಥೆಯತ್ತ ಕೆಪಿಟಿಸಿಎಲ್ ಹೆಜ್ಜೆ; ನ್ಯಾಚುರಲ್ ಎಸ್ಟರ್ ಆಯಿಲ್ ಬಳಕೆ |Speed News Kannada

ಪರಿಸರ ಸ್ನೇಹಿ ವಿದ್ಯುತ್ ಪ್ರಸರಣ ವ್ಯವಸ್ಥೆಯತ್ತ ಕೆಪಿಟಿಸಿಎಲ್ ಹೆಜ್ಜೆ; ನ್ಯಾಚುರಲ್ ಎಸ್ಟರ್ ಆಯಿಲ್ ಬಳಕೆ |Speed News Kannada

ಬೆಂಗಳೂರು: ಪರಿಸರ ಸಂರಕ್ಷಣೆ ಮತ್ತು ವಿದ್ಯುತ್ ಜಾಲದ ಆಧುನೀಕರಣದತ್ತ ಮಹತ್ವದ ಹೆಜ್ಜೆಯನ್ನಿಟ್ಟಿರುವ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (ಕೆಪಿಟಿಸಿಎಲ್), ತನ್ನ ಹೈ-ವೋಲ್ಟೇಜ್ ಟ್ರಾನ್ಸ್‌ಫಾರ್ಮರ್‌ಗಳ ಜಾಲದಲ್ಲಿ ಬಳಕೆಯಲ್ಲಿದ್ದ ಸಾಂಪ್ರದಾಯಿಕ ಮತ್ತು ಹಾನಿಕಾರಕ ಮಿನರಲ್ ಆಯಿಲ್ (ಖನಿಜ ತೈಲ) ಗೆ ಪರ್ಯಾಯವಾಗಿ ಪರಿಸರ ಸ್ನೇಹಿ ಹಾಗೂ ಬಯೋಡಿಗ್ರೇಡಬಲ್‌ ನ್ಯಾಚುರಲ್ ಎಸ್ಟರ್ ಆಯಿಲ್ ಗೆ ಬದಲಾಯಿಡುವ ಕಾರ್ಯಕ್ಕೆ ಮುನ್ನಡಿ ಬರೆದಿದೆ.

ರಾಜ್ಯದಾದ್ಯಂತ ಲಕ್ಷಾಂತರ ಗ್ರಾಹಕರಿಗೆ ಸುರಕ್ಷಿತ ಮತ್ತು ಪರಿಸರ ಸ್ನೇಹಿ ವಿದ್ಯುತ್ ಪೂರೈಕೆಯನ್ನು ಖಚಿತಪಡಿಸಿಕೊಳ್ಳವ ನಿಟ್ಟಿನಲ್ಲಿ, ಕೆಪಿಟಿಸಿಎಲ್‌ ಕೈಗೊಂಡಿರುವ ಈ ಪರಿಸರ ಸ್ನೇಹಿ ಉಪಕ್ರಮವು, ಮೂಲಸೌಕರ್ಯ ನಿರ್ವಹಣೆಯಲ್ಲಿ ಒಂದು ನಿರ್ಣಾಯಕ ಮೈಲಿಗಲ್ಲಾಗಿದೆ.

ರಾಜ್ಯದಾದ್ಯಂತ ವಿದ್ಯುತ್ ಜಾಲದಲ್ಲಿ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ 3,754 ಟ್ರಾನ್ಸ್‌ಫಾರ್ಮರ್‌ಗಳ ಪೈಕಿ, ಕೆಪಿಟಿಸಿಎಲ್ ಕಾರ್ಯತಂತ್ರದ ಭಾಗವಾಗಿ 45 ಹೈ-ಕೆಪಾಸಿಟಿ ಟ್ರಾನ್ಸ್‌ಫಾರ್ಮರ್‌ಗಳನ್ನು ಸಸ್ಯ ಆಧಾರಿತ ನ್ಯಾಚುರಲ್ ಎಸ್ಟರ್ ಆಯಿಲ್ ನೊಂದಿಗೆ ಬದಲಾಯಿಸಲಾಗಿದೆ. ಹೊಸ ಟ್ರಾನ್ಸ್‌ಫಾರ್ಮರ್‌ಗಳನ್ನು ಅಳವಡಿಸುವ ಆರ್ಥಿಕ ಹೊರೆಯ ಬದಲಿಗೆ, 15 ವರ್ಷಗಳಿಗಿಂತಲೂ ಹಳೆಯ ಟ್ರಾನ್ಸ್‌ಫಾರ್ಮರ್‌ಗಳನ್ನು ಗುರುತಿಸಿ, ಅವುಗಳ ಜೀವಿತಾವಧಿ ಮತ್ತು ಕಾರ್ಯಕ್ಷಮತೆಯನ್ನು ಹೆಚ್ಚಿಸುವ ಉದ್ದೇಶದಿಂದ ಈ ಯೋಜನೆ ಜಾರಿಗೊಳಿಸಲಾಗುತ್ತಿದೆ. ಈ ವಿಧಾನವು ಹಳೆಯ ಗ್ರಿಡ್ ಸ್ವತ್ತುಗಳ ಉಷ್ಣ ದಕ್ಷತೆಯನ್ನು (Thermal Efficiency) ಹೆಚ್ಚಿಸುವುದಲ್ಲದೆ, ಸಾಂಪ್ರದಾಯಿಕ ಪೆಟ್ರೋಲಿಯಂ ಆಧಾರಿತ ತೈಲಗಳ ಬಳಕೆಯಿಂದ ಉಂಟಾಗುವ ಪರಿಸರ ಮಾಲಿನ್ಯದ ಅಪಾಯಗಳನ್ನು ತಡೆಯುತ್ತದೆ.

ಸಾಮಾನ್ಯ ಮಿನರಲ್ ಆಯಿಲ್ ಗಳಿಗೆ ಹೋಲಿಸಿದರೆ, ಸಸ್ಯ ಆಧಾರಿತ ಎಸ್ಟರ್ ತೈಲಗಳು ಬಯೋಡಿಗ್ರೇಡಬಲ್‌ ಆಗಿವೆ ಹಾಗೂ ಹೆಚ್ಚಿನ ಉಷ್ಣ ಸಹಿಷ್ಣುತೆಯನ್ನು ಹೊಂದಿವೆ. ಇದರಿಂದಾಗಿ ಹೆಚ್ಚು ಜನನಿಬಿಡ ನಗರ ಪ್ರದೇಶಗಳು ಹಾಗೂ ದೂರದ ಉಪಕೇಂದ್ರಗಳಲ್ಲಿ ಕಾರ್ಯಾಚರಣೆಯ ಸುರಕ್ಷತೆ ಹೆಚ್ಚಾಗಲಿದೆ.

ಈಗಾಗಲೇ ಕೆಪಿಟಿಸಿಎಲ್‌ ವತಿಯಿಂದ ಪ್ರಾಯೋಗಿಕವಾಗಿ 45 ಟ್ರಾನ್ಸ್‌ಫಾರ್ಮರ್‌ಗಳಲ್ಲಿ ನ್ಯಾಚುರಲ್‌ ಎಸ್ಟರ್‌ ಆಯಿಲ್‌ ಅಳವಡಿಸಲಾಗಿದ್ದು, ಸುಮಾರು 1500 ಲೀಟರ್‌ಗಳಷ್ಟು ಮಿನರಲ್‌ ಆಯಿಲ್‌ ಬಳಕೆಯನ್ನು ತಪ್ಪಿಸಲಾಗಿದೆ. ಹಂತಹಂತವಾಗಿ ಈ ಯೋಜನೆಯನ್ನು ವಿಸ್ತರಿಸುವ ಮೂಲಕ ಕೆಪಿಟಿಸಿಎಲ್‌ ತನ್ನ ವ್ಯಾಪ್ತಿಯಲ್ಲಿನ ಟ್ರಾನ್ಸ್‌ಫಾರ್ಮ್‌ರ್‌ಗಳಲ್ಲಿ ಪರಿಸರ ಸ್ನೇಹೀ ಆಯಿಲ್‌ ಅಳವಡಿಸಿಕೊಳ್ಳಲಿದೆ.

ಇಂಧನ ಹಾಗೂ ಪ್ರವಾಸೋದ್ಯಮ ಸಚಿವ ಕೆ.ಜೆ. ಜಾರ್ಜ್ ಪ್ರತಿಕ್ರಿಯಿಸಿ ಮೂಲಸೌಕರ್ಯಗಳ ಆಧುನೀಕರಣದ ಜೊತೆಗೆ ಪರಿಸರ ಸಂರಕ್ಷಣೆಗೂ ಸಮಾನ ಒತ್ತು ನೀಡುವ  ಸುಸ್ಥಿರ ನೀತಿಗಳನ್ನು ಅಳವಡಿಸಿಕೊಳ್ಳುವಲ್ಲಿ ಕರ್ನಾಟಕ ಸದಾ ಮುಂಚೂಣಿಯಲ್ಲಿದೆ. ನಮ್ಮ ಪ್ರಸರಣ ಜಾಲದಲ್ಲಿ ಬಯೋಡಿಗ್ರೇಡಬಲ್‌ ನ್ಯಾಚುರಲ್ ಎಸ್ಟರ್ ಆಯಿಲ್ ಅನ್ನು ಅಳವಡಿಸಿಕೊಳ್ಳುವ ಮೂಲಕ, ಕೆಪಿಟಿಸಿಎಲ್ ನಮ್ಮ ಪರಿಸರವನ್ನುವಿಷಕಾರಿ ರಾಸಾಯನಿಕಗಳಿಂದ ರಕ್ಷಿಸುವುದರೊಂದಿಗೆ, ಪ್ರಮುಖ ವಿದ್ಯುತ್ ಕೇಂದ್ರಗಳಲ್ಲಿ ಬೆಂಕಿ ಅವಘಡಗಳ ಅಪಾಯವನ್ನು ಗಣನೀಯವಾಗಿ ಕಡಿಮೆ ಮಾಡಲು ಮುಂದಾಗಿದೆ ಎಂದಿದ್ದಾರೆ.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.