2026-06-08 01:25:30

Koppala bandh tomorrow | ಮುಚ್ಚದ ಬಲ್ಡೋಟಾ ಕಾರ್ಖಾನೆ ನಾಳೆ ಕೊಪ್ಪಳ ಬಂದ್ | Speed News kannada

Koppala bandh tomorrow | ಮುಚ್ಚದ ಬಲ್ಡೋಟಾ ಕಾರ್ಖಾನೆ ನಾಳೆ  ಕೊಪ್ಪಳ ಬಂದ್ | Speed News kannada

ಕೊಪ್ಪಳ: ಬಲ್ಡೋಟಾ ಕಾರ್ಖಾನೆ ವಿರೋಧಿ ಹೋರಾಟ ಒಂದು ವರ್ಷ ಪೂರೈಸಿದೆ. ಆದರೂ ಬಲ್ಡೋಟಾ ಕಾರ್ಖಾನೆ ಮುಚ್ಚಿಲ್ಲ. ಈ ಹಿನ್ನೆಲೆಯಲ್ಲಿ ಜಿಲ್ಲಾ‌ ಬಚಾವೋ ಆಂದೋಲನ‌ ಸಮಿತಿ ಮತ್ತು ಪರಿಸರ ಹಿತರಕ್ಷಣಾ ಸಮಿತಿ ವತಿಯಿಂದ ನಾಳೆ ಕೊಪ್ಪಳ ಬಂದ್ ಗೆ ಕರೆ ನೀಡಿದೆ. 
ಹೋರಾಟದ ಸಂಚಾಲಕ ಮಂಜುನಾಥ್ ಗೊಂಡಬಾಳ ಮಾತನಾಡಿ, ಕಳೆದ ವರ್ಷ ಫೆಬ್ರವರಿ 24ರಂದು ಗವಿಸಿದ್ದೇಶ್ವರ ಸ್ವಾಮೀಜಿ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಬಲ್ಡೋಟಾ ಕಾರ್ಖಾನೆ ಶಾಶ್ವತ ಬಂದ್ ಮಾಡಿಸಬೇಕೆಂದು ಜಿಲ್ಲೆಯ ಜನಪ್ರತಿನಿಧಿಗಳಿಗೆ ಸ್ವಾಮೀಜಿಗಳು ಕರೆ ನೀಡಿದ್ದರು. ಆದರೆ ಇದುವರೆಗೂ ಕಾರ್ಖಾನೆ ಶಾಶ್ವತವಾಗಿ ಸ್ಥಗಿತಗೊಂಡಿಲ್ಲ. ಈ ಹಿನ್ನಲೆ ಜಂಟಿ ಕ್ರಿಯಾ ಸಮಿತಿ ಬಂದ್ಗೆ ಕರೆ ನೀಡಿದೆ ಎಂದು ತಿಳಿಸಿದ್ದಾರೆ.
ಕಳೆದ 116 ದಿನಗಳಿಂದ ಜಿಲ್ಲಾ ಬಚಾವೋ ಆಂದೋಲನ ಸಮಿತಿ ಪ್ರತಿಭಟನೆ ನಡೆಸಿಕೊಂಡು ಬರುತ್ತಿದೆ. ನಾಳೆ ಮುಂಜಾನೆ 7 ಗಂಟೆಯಿಂದ ಸಂಜೆ 6ರವರೆಗೂ ಸ್ವಯಂಪ್ರೇರಿತ ಬಂದ್ ನಡೆಯಲಿದೆ. ಹಲವು ಸಂಘಟನೆಗಳು ಬಂದ್ ಗೆ ಬೆಂಬಲ ನೀಡಿವೆ ಎಂದರು.
ಭಾಗ್ಯನಗರದಲ್ಲಿ ಬೆಳಿಗ್ಗೆ 7 ಗಂಟೆಗೆ ಬೈಕ್, ಆಟೋ ರ‍್ಯಾಲಿ,10 ಗಂಟೆಗೆ ಗವಿ ಮಠದಿಂದ ರ‍್ಯಾಲಿ ನಡೆಯಲಿದೆ. ಗಡಿಯಾರ ಕಂಬ, ಅಶೋಕ ವೃತ್ತದ ಮೂಲಕ ನಗರಸಭೆಯ ಪ್ರತಿಭಟನಾ ಸ್ಥಳಕ್ಕೆ ತಲುಪಿ ಅಂತ್ಯಗೊಳ್ಳಲಿದೆ. ನಗರಸಭೆ ಮುಂಭಾಗ ಬೃಹತ್‌ ಪ್ರತಿಭಟನೆ ಜರುಗಲಿದ್ದು, ಸಾಣೆಹಳ್ಳಿ, ಗದಗಿನ ತೋಂಟದಾರ್ಯ ಮಠದ ಸಿದ್ದರಾಮ ಶ್ರೀಗಳು, ಕಬೀರಾನಾನಂದ ಸ್ವಾಮೀಜಿಗಳು, ಪರಿಸರಕ್ಕಾಗಿ ನಾವು ಸಂಘಟನೆಯ ಎ. ಟಿ. ರಾಮಸ್ವಾಮಿ ಅವರು ಉಪಸ್ಥಿತರಿರಲಿದ್ದಾರೆ ಎಂದು ತಿಳಿಸಿದ್ದಾರೆ.
ಕೊಪ್ಪಳ‌ ವಿವಿ ಪರೀಕ್ಷೆ ಮುಂದೂಡಿಕೆ:
ಕೊಪ್ಪಳ ಬಂದ್ಗೆ ಹಿನ್ನೆಲೆ ಖಾಸಗಿ ಶಾಲೆಗಳ ಒಕ್ಕೂಟ ಖಾಸಗಿ ಶಾಲೆಗಳಿಗೆ ರಜೆ ಘೋಷಿಸಿದೆ. ಕೊಪ್ಪಳ‌ ವಿಶ್ವ ವಿದ್ಯಾಲಯದ ಸ್ನಾತಕೋತ್ತರ ಪ್ರಥಮ ಸೆಮಿಸ್ಟರ್ ಪರೀಕ್ಷೆಗಳನ್ನೂ ಮುಂದೂಡಿ ‌ವಿವಿ ಪರೀಕ್ಷಾಂಗ ಕುಲಸಚಿವರು ಆದೇಶಿಸಿದ್ದಾರೆ. ಹತ್ತನೇ ತರಗತಿಯ ಪೂರ್ವ ಸಿದ್ಧತಾ ಪರೀಕ್ಷೆ ನಡೆಯಲಿದೆ.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.