2026-03-07 01:16:16

Koppal bandh to condemn environmental pollution | ಪರಿಸರ ಮಾಲಿನ್ಯ ಖಂಡಿಸಿ ಕೊಪ್ಪಳ ಬಂದ್‌ ಹೇಗಿತ್ತು ಸಾರ್ವಜನಿಕರ ಪ್ರತಿಕ್ರಿಯೆ | Speed News Kannada

Koppal bandh to condemn environmental pollution | ಪರಿಸರ ಮಾಲಿನ್ಯ ಖಂಡಿಸಿ ಕೊಪ್ಪಳ ಬಂದ್‌ ಹೇಗಿತ್ತು ಸಾರ್ವಜನಿಕರ ಪ್ರತಿಕ್ರಿಯೆ | Speed News Kannada

ಕೊಪ್ಪಳ: ಪರಿಸರ ಮಾಲಿನ್ಯ ಉಂಟು ಮಾಡುತ್ತಿರುವ ಬಲ್ಡೋಟಾ ಕಾರ್ಖಾನೆಯನ್ನು ಮುಚ್ಚುವಂತೆ ಆಗ್ರಹಿಸಿ  ಜಿಲ್ಲಾ ಬಚಾವೊ ಆಂದೋಲನ ಸಮಿತಿ ಹಾಗೂ ಪರಿಸರ ಹಿತರಕ್ಷಣಾ ಜಂಟಿ ಕ್ರಿಯಾವೇದಿಕೆ ಕರೆ ನೀಡಿರುವ ಬಂದ್‌ ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. 
ಅಂಗಡಿ ಮುಂಗಟ್ಟುಗಳು ಮುಚ್ಚಿವೆ. ಸದಾ ಜನಸಂದಣಿಯಿಂದ ಕೂಡಿರುತ್ತಿದ್ದ ಕೇಂದ್ರೀಯ ಬಸ್‌ ನಿಲ್ದಾಣದಲ್ಲಿ ಬಸ್‌ಗಳ ಸಂಚಾರ ಬಹುತೇಕ ಸ್ಥಗಿತವಾಗಿತ್ತು. ಹೋರಾಟಗಾರರು ಅಲ್ಲಲ್ಲಿ ತೆಗೆದಿದ್ದ ಅಂಗಡಿಗಳನ್ನು ಮುಚ್ಚಿಸುತಿದ್ದರು. 
ಆಟೊ ಮೂಲಕ ಪ್ರಚಾರ ಮಾಡುತ್ತಿದ್ದ  ಸಂಘಟಕರು ಪರಿಸರಕ್ಕೆ ಮಾಲಿನ್ಯ ಉಂಟು ಮಾಡುತ್ತಿರುವ ಕಾರ್ಖಾನೆಗಳು ವಿಸ್ತರಣೆಯಾದರೆ ಕೊಪ್ಪಳವನ್ನೇ ಸ್ಥಳಾಂತರಿಸಬೇಕಾದ ಅನಿವಾರ್ಯತೆ ಎದುರಾತ್ತದೆ. ಆದ್ದರಿಂದ ಬಂದ್‌ಗೆ ಬೆಂಬಲ ನೀಡಿ ಎಲ್ಲರೂ ಹೋರಾಟದಲ್ಲಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿಕೊಳ್ಳುತ್ತಿದ್ದರು.
ಗವಿಮಠದ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಮುಂದಾಳತ್ವದಲ್ಲಿ ಕಳೆದ ವರ್ಷದ ಫೆ. 24ರಂದೇ ಕೊಪ್ಪಳ ಬಂದ್ ಮಾಡಲಾಗಿತ್ತು. ಅದೇ ನೆನಪಿಗಾಗಿ ಇಂದೂ ಕೂಡ ಬಂದ್‌ ಗೆ ಕರೆ ನೀಡಲಾಗಿದೆ.  ಅಲ್ಲಲ್ಲಿ ಆಟೊಗಳು ಸಂಚರಿಸುತ್ತಿವೆ. ಸರ್ಕಾರಿ ಕಚೇರಿ ಮತ್ತು ಶಾಲೆಗಳು ಎಂದಿನಂತೆ ನಡೆಯುತ್ತಿವೆ. ಮುಂಜಾಗ್ರತಾ ಕ್ರಮವಾಗಿ ನಗರದಾದ್ಯಂತ ಪೊಲೀಸರನ್ನು ನಿಯೋಜಿಸಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಖಾಸಗಿ ಶಾಲೆಗಳಿಗೆ ರಜೆ ಘೋಷಿಸಲಾಗಿದದೆ. ಕೊಪ್ಪಳ ವಿಶ್ವವಿದ್ಯಾಲಯದ ಮೊದಲ ಸೆಮಿಸ್ಟರ್‌ ಪರೀಕ್ಷೆ ಫೆ. 26ಕ್ಕೆ ಮುಂದೂಡಲಾಗಿದೆ. ಸಂಜೆ 6 ಗಂಟೆ ತನಕ ಬಂದ್‌ ನಡೆಯಲಿದೆ.
ಹೋರಾಟದ ಸಂಚಾಲಕ ಮಂಜುನಾಥ್ ಗೊಂಡಬಾಳ ಮಾತನಾಡಿ, ಕಳೆದ ವರ್ಷ ಫೆಬ್ರವರಿ 24ರಂದು ಗವಿಸಿದ್ದೇಶ್ವರ ಸ್ವಾಮೀಜಿ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಬಲ್ಡೋಟಾ ಕಾರ್ಖಾನೆ ಶಾಶ್ವತ ಬಂದ್ ಮಾಡಿಸಬೇಕೆಂದು ಜಿಲ್ಲೆಯ ಜನಪ್ರತಿನಿಧಿಗಳಿಗೆ ಸ್ವಾಮೀಜಿಗಳು ಕರೆ ನೀಡಿದ್ದರು. ಆದರೆ ಇದುವರೆಗೂ ಕಾರ್ಖಾನೆ ಶಾಶ್ವತವಾಗಿ ಸ್ಥಗಿತಗೊಂಡಿಲ್ಲ. ಈ ಹಿನ್ನಲೆ ಜಂಟಿ ಕ್ರಿಯಾ ಸಮಿತಿ ಬಂದ್ಗೆ ಕರೆ ನೀಡಿದೆ ಎಂದು ತಿಳಿಸಿದ್ದಾರೆ.
ಕಳೆದ 116 ದಿನಗಳಿಂದ ಜಿಲ್ಲಾ ಬಚಾವೋ ಆಂದೋಲನ ಸಮಿತಿ ಪ್ರತಿಭಟನೆ ನಡೆಸಿಕೊಂಡು ಬರುತ್ತಿದೆ. ಹಲವು ಸಂಘಟನೆಗಳು ಬಂದ್ ಗೆ ಬೆಂಬಲ ನೀಡಿವೆ ಎಂದರು.
10 ಗಂಟೆಗೆ ಗವಿ ಮಠದಿಂದ ರ‍್ಯಾಲಿ ನಡೆಯಲಿದೆ. ಗಡಿಯಾರ ಕಂಬ, ಅಶೋಕ ವೃತ್ತದ ಮೂಲಕ ನಗರಸಭೆಯ ಪ್ರತಿಭಟನಾ ಸ್ಥಳಕ್ಕೆ ತಲುಪಿ ಅಂತ್ಯಗೊಳ್ಳಲಿದೆ. ನಗರಸಭೆ ಮುಂಭಾಗ ಬೃಹತ್‌ ಪ್ರತಿಭಟನೆ ಜರುಗಲಿದೆ.
ಸಾಣೆಹಳ್ಳಿ, ಗದಗಿನ ತೋಂಟದಾರ್ಯ ಮಠದ ಸಿದ್ದರಾಮ ಶ್ರೀಗಳು, ಕಬೀರಾನಾನಂದ ಸ್ವಾಮೀಜಿಗಳು, ಪರಿಸರಕ್ಕಾಗಿ ನಾವು ಸಂಘಟನೆಯ ಎ. ಟಿ. ರಾಮಸ್ವಾಮಿ ಅವರು ಉಪಸ್ಥಿತರಿರಲಿದ್ದಾರೆ ಎಂದು ತಿಳಿಸಿದ್ದಾರೆ.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.