ನಟ ಕಿಚ್ಚ ಸುದೀಪ್ ಅವರು ವೇದಿಕೆ ಏರಿದರೆ ಸಾಕು, ಅಲ್ಲಿನ ವಾತಾವರಣವೇ ಬದಲಾಗುತ್ತದೆ. ಸದಾ ತಮ್ಮ ಖಡಕ್ ಹಾಗೂ ಹಾಸ್ಯ ಮಿಶ್ರಿತ ಮಾತುಗಳಿಂದ ಅಭಿಮಾನಿಗಳನ್ನು ರಂಜಿಸುವ ಸುದೀಪ್, ಇದೀಗ 'ಕೆಡಿ' ಸಿನಿಮಾದ ಸುದ್ದಿಗೋಷ್ಠಿಯಲ್ಲಿಯೂ ಅಂತಹದ್ದೇ ಒಂದು ಮೋಜಿನ ಸನ್ನಿವೇಶ ಸೃಷ್ಟಿಸಿದ್ದಾರೆ.
ಸುದ್ದಿಗೋಷ್ಠಿಯ ಕೊನೆಯಲ್ಲಿ ಪತ್ರಕರ್ತರೊಬ್ಬರು 'ಕೊನೆಯ ಪ್ರಶ್ನೆ, ಮುಗಿಸಿಬಿಡ್ತೀನಿ' ಎಂದು ಹೇಳಿದಾಗ, ತಕ್ಷಣ ಎಚ್ಚೆತ್ತ ಸುದೀಪ್, 'ಯಾರನ್ನು ಮುಗಿಸುತ್ತೀರಾ? ನನ್ನನ್ನು ಮುಗಿಸ್ತೀನಿ ಅಂತ ಕನಸಲ್ಲೂ ಅಂದುಕೊಳ್ಳಬೇಡಿ' ಎಂದು ತಮಾಷೆಯಾಗಿ ತಿರುಗೇಟು ನೀಡಿದ್ದಾರೆ. ಸುದೀಪ್ ಅವರ ಈ ಮಾತಿಗೆ ವೇದಿಕೆಯಲ್ಲಿದ್ದವರು ನಗೆಗಡಲಲ್ಲಿ ತೇಲಿದರು.
ನಿರ್ದೇಶಕ ಪ್ರೇಮ್ ಆಕ್ಷನ್ ಕಟ್ ಹೇಳಿರುವ ಈ ಬಹುನಿರೀಕ್ಷಿತ 'ಕೆಡಿ' ಚಿತ್ರ ಏಪ್ರಿಲ್ 30ರಂದು ತೆರೆಗೆ ಬರುತ್ತಿದೆ. ಮೇ 1ರ ಕಾರ್ಮಿಕ ದಿನಾಚರಣೆಯ ರಜೆಯ ಲಾಭ ಚಿತ್ರಕ್ಕೆ ಸಿಗುವ ನಿರೀಕ್ಷೆಯಿದೆ. ಧ್ರುವ ಸರ್ಜಾ ನಾಯಕನಾಗಿ ನಟಿಸಿರುವ ಈ ಚಿತ್ರದಲ್ಲಿ, ಸುದೀಪ್ ಅವರು 'ಕಾಲ ಭೈರವ'ನಾಗಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ವಿವಾದಗಳ ನಡುವೆಯೇ ಭಾರಿ ನಿರೀಕ್ಷೆ ಹುಟ್ಟುಹಾಕಿರುವ ಈ ಚಿತ್ರ ಬಾಕ್ಸಾಫೀಸ್‌ನಲ್ಲಿ ಯಾವ ರೀತಿ ಧೂಳೆಬ್ಬಿಸಲಿದೆ ಎಂಬುದನ್ನು ಕಾದು ನೋಡಬೇಕಿದೆ.