ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ಇಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಬೆಂಗಳೂರಿನ ಸದಾಶಿವನಗರ ನಿವಾಸದಲ್ಲಿ ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ. ಈ ಚರ್ಚೆ ಸದ್ಯ ರಾಜ್ಯ ರಾಜಕೀಯದಲ್ಲಿ ಕೂತೂಹಲ ಮೂಡಿಸಿದೆ. ಕೆಲ ದಿನಗಳಿಂದ ತಣ್ಣಗಿದ್ದ ಕುರ್ಚಿ ಫೈಟ್ ಚರ್ಚೆಗೆ ಮತ್ತೆ ಜೀವ ಬಂದಿದೆ.
ಖರ್ಗೆ ಜೊತೆಯಲ್ಲಿ ಪರಮೇಶ್ವರ್ ರಾಜ್ಯ ರಾಜಕೀಯದ ಬಗ್ಗೆಯೂ ಚರ್ಚಿಸಿದ್ದಾರೆ ಎನ್ನಲಾಗಿದೆ. ಡಿಕೆ ಶಿವಕುಮಾರ್ ಹೊರತುಪಡಿಸಿದರೆ ಸಿಎಂ ಕುರ್ಚಿ ರೇಸ್‌ನಲ್ಲಿ ಮುಂಚೂಣಿಯಲ್ಲಿರುವ ನಾಯಕನಾಗಿರುವ ಪರಮೇಶ್ವರ್, ಬಹಳ ಸಮಯದಿಂದ ನಾನೂ ಕೂಡಾ ಸಿಎಂ ಪಟ್ಟದ ಪ್ರಬಲ ಆಕಾಂಕ್ಷಿ ಅನ್ನೋದನ್ನ ಈ ಹಿಂದೆಯೇ ಒಪ್ಪಿಕೊಂಡಿದ್ದಾರೆ. ಹಾಗಾಗಿ ಸಹಜವಾಗಿಯೇ ಖರ್ಗೆ ಹಾಗೂ ಪರಮೇಶ್ವರ್ ಭೇಟಿ ಕಾಂಗ್ರೆಸ್ ಪಾಳಯದಲ್ಲಿ ಸಂಚಲನ ಸೃಷ್ಟಿಸಿದೆ.
ಮಲ್ಲಿಕಾರ್ಜುನ ಖರ್ಗೆ ಭೇಟಿ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಪರಮೇಶ್ವರ್, ಖರ್ಗೆ ಅವರೊಂದಿಗೆ ರಾಜಕೀಯ ವಿಚಾರಗಳನ್ನು ಚರ್ಚಿಸಿದ್ದೇನೆ ಎಂದು ಒಮ್ಮೆ ಹೇಳಿದರೆ, ಕೆಲವೇ ಕ್ಷಣಗಳಲ್ಲಿ ಮಾತು ಬದಲಿಸಿದರು. ರಾಜಕೀಯಕ್ಕೆ ಸಂಬಂಧಿಸಿದಂತೆ ಯಾವುದೇ ಚರ್ಚೆ ನಡೆಸಿಲ್ಲ ಎಂದು ಹೇಳಿಕೆ ನೀಡಿ ಗೊಂದಲ ಸೃಷ್ಟಿಸಿದರು.
“ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸೌಜನ್ಯಕ್ಕಾಗಿ ಭೇಟಿ ಮಾಡಿದ್ದೇನೆ. ನನ್ನ ಮತ್ತು ಅವರ ಕುಟುಂಬದ ನಡುವೆ ರಾಜಕೀಯ ಮೀರಿದ ಸಂಬಂಧವಿದೆ. ಭೇಟಿಯ ಸಂದರ್ಭದಲ್ಲಿ ರಾಜ್ಯ ರಾಜಕೀಯದ ಕೆಲ ವಿಚಾರಗಳನ್ನು ಅವರ ಗಮನಕ್ಕೆ ತಂದಿದ್ದೇನೆ. ಕಲ್ಬುರ್ಗಿಯಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗಿದೆ. ಸಮಸ್ಯೆ ಬಗೆಹರಿಸಲು ಬಜೆಟ್ ನಲ್ಲಿ ಪ್ರತ್ಯೇಕ ಅನುದಾನ ಮೀಸಲಿಡಬೇಕು ಎಂದು ಮುಖ್ಯಮಂತ್ರಿ ಅವರ ಜೊತೆಯೂ ಚರ್ಚೆ ಮಾಡಿದ್ದೇನೆ. ಖರ್ಗೆವರ ಗಮನಕ್ಕೂ ತಂದಿದ್ದೇನೆ. ಅದನ್ನು ಹೊರತುಪಡಿಸಿ ರಾಜ್ಯ ರಾಜಕೀಯದ ವಿಚಾರವಾಗಿ ಯಾವುದೇ ಚರ್ಚೆಗಳನ್ನು ಮಾಡಿಲ್ಲ. ಅಭಿವೃದ್ಧಿ ವಿಚಾರಗಳ ಬಗ್ಗೆ ಮಾತ್ರ ಮಾತನಾಡಿದ್ದೇನೆ ಎಂದಿದ್ದಾರೆ.