ಬೆಂಗಳೂರು: ಕರ್ನಾಟಕವನ್ನು ಭಾರತದ 'ಸಿಲಿಕಾನ್ ವ್ಯಾಲಿ' ಮಾತ್ರವಲ್ಲ, ಡಿಜಿಟಲ್ ಪ್ರಪಂಚದ 'ಸೃಜನಶೀಲ ರಾಜಧಾನಿ' ಎಂದು ಕರೆಯಬೇಕು ಎಂಬ ಕನಸು ನನಸಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಅವರು ಇಂದು ಬೆಂಗಳೂರು GAFX - 'ಎವಲ್ಯೂಷನ್ ರೀಲೋಡ್' ನ 7 ನೇ ಆವೃತ್ತಿಯನ್ನು ಅಧಿಕೃತವಾಗಿ ಉದ್ಘಾಟಿಸಿ ಮಾತನಾಡಿದರು.
ಶಿಕ್ಷಣ ಸಂಸ್ಥೆಗಳು ತಮ್ಮ ಪಠ್ಯಕ್ರಮವನ್ನು ಹೊಸ ಕಾಲಕ್ಕೆ ತಕ್ಕಂತೆ ಬದಲಾಯಿಸಿಕೊಳ್ಳಬೇಕು. ಯುವ ಸೃಷ್ಟಿಕರ್ತರು ಧೈರ್ಯದಿಂದ ಕನಸು ಕಾಣಬೇಕು. ಜಾಗತಿಕ ಪಾಲುದಾರರು ಕರ್ನಾಟಕದ ಜೊತೆ ಕೈಜೋಡಿಸಲು ಮುಂದಾಗಬೇಕು ಎಂದು ಕರೆ ನೀಡಿದರು.
AI ಅನ್ನು ಸರಿಯಾದ ರೀತಿಯಲ್ಲಿ ಬಳಸಬೇಕು. ಬೌದ್ಧಿಕ ಆಸ್ತಿಯ ಹಕ್ಕುಗಳು, ದತ್ತಾಂಶದ ಗೌಪ್ಯತೆ, ಕೆಲಸಕ್ಕೆ ನ್ಯಾಯವಾದ ಸಂಭಾವನೆ, ಹೊಸ ಕೌಶಲ್ಯ ಕಲಿಯಲು ಅವಕಾಶ - ಇವುಗಳ ಬಗ್ಗೆ ನಾವು ಯಾವಾಗಲೂ ಗಮನವಾಗಿರಬೇಕು.
ಅನಿಮೇಷನ್ ಮತ್ತು ಗೇಮಿಂಗ್ ನಲ್ಲಿ ಹೊಸ ಪ್ರಯೋಗಗಳನ್ನು ಪ್ರೋತ್ಸಾಹಿಸುತ್ತೇವೆ. ಆದರೆ ಜವಾಬ್ದಾರಿಯನ್ನು ಮರೆಯಬಾರದು. ಹಿಂಸೆಯನ್ನು ತೋರಿಸುವುದು, ವೈಭವೀಕರಿಸುವುದು ಬೇಡ. ಮಕ್ಕಳ ಮನಸ್ಸಿಗೆ ಚಿಂತೆ ಮಾಡುವಂಥದ್ದು ಬೇಡ. ಸೃಜನಶೀಲತೆ, ವಿಮರ್ಶಾತ್ಮಕ ಯೋಚನೆ, ಒಳ್ಳೆಯ ಸಾಮಾಜಿಕ ಮೌಲ್ಯಗಳನ್ನು ಕಲಿಸುವ ಆಟಗಳನ್ನು ಪ್ರೋತ್ಸಾಹಿಸುತ್ತೇವೆ ಎಂದರು.
AVGC-XR ಕ್ಷೇತ್ರಕ್ಕಾಗಿ ನಮ್ಮ ಐದು ಮುಖ್ಯ ಆದ್ಯತೆಗಳು:
ಪ್ರತಿಭೆಗೆ ತರಬೇತಿ: ಉದ್ಯಮಕ್ಕೆ ಬೇಕಾದ ಕಲಿಕೆಯನ್ನು ಶಾಲೆ-ಕಾಲೇಜುಗಳಲ್ಲೇ ಕಲಿಸಬೇಕು. ಇಂದಿನ ತಂತ್ರಜ್ಞಾನ ಮಾತ್ರವಲ್ಲ, ನಾಳೆ ಬರುವ ಹೊಸ ತಂತ್ರಜ್ಞಾನಕ್ಕೂ ನಮ್ಮ ಯುವಕರು ಸಿದ್ಧರಾಗಿರಬೇಕು.
ಮೂಲಸೌಕರ್ಯ: ಸ್ಟುಡಿಯೋಗಳು, ಮೋಷನ್ ಕ್ಯಾಪ್ಚರ್ ಸೌಲಭ್ಯಗಳು, ಲ್ಯಾಬ್ಗಳು, ಇನ್ಕ್ಯುಬೇಷನ್ ಸೆಂಟರ್ ಗಳು ಸುಲಭ ಬೆಲೆಯಲ್ಲಿ ಸಿಗುವಂತಾಗಬೇಕು. ಕರ್ನಾಟಕದಲ್ಲಿ ವಿಶ್ವದರ್ಜೆಯ ಉತ್ಪಾದನಾ ಸೌಲಭ್ಯಗಳನ್ನು ಬಲಪಡಿಸಲಾಗುವುದು.
ಸ್ಟಾರ್ಟ್ಅಪ್ ಗಳಿಗೆ ಬೆಂಬಲ: ಇನ್ನು ಮುಂದೆ ಬೇರೆಯವರಿಗೆ ಕೆಲಸ ಮಾಡಿಕೊಡುವುದಷ್ಟೇ ಅಲ್ಲ, ನಮ್ಮದೇ ಆದ ಕಥೆಗಳು, ಪಾತ್ರಗಳು, ಕಲ್ಪನೆಗಳನ್ನು ಸೃಷ್ಟಿ ಮಾಡಬೇಕು. ಕರ್ನಾಟಕದ ಮಣ್ಣಿನಿಂದ ಹುಟ್ಟಿದ ಪಾತ್ರಗಳು ಜಗತ್ತಿನಾದ್ಯಂತ ಮೆರೆಯಬೇಕು.
ಬೆಂಗಳೂರಿನಾಚೆಗೂ ಅವಕಾಶ: ಸೃಜನಶೀಲ ಕೆಲಸಗಳು ಬೆಂಗಳೂರಿನಲ್ಲೇ ನಿಲ್ಲಬಾರದು. ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಡಿಜಿಟಲ್ ಸೌಲಭ್ಯಗಳನ್ನು ಒದಗಿಸಿ, ಎಲ್ಲ ಕಡೆಯ ಪ್ರತಿಭೆಗಳಿಗೂ ಅವಕಾಶ ಮಾಡಿಕೊಡಲಾಗುತ್ತದೆ.
ಜಾಗತಿಕ ಸಂಪರ್ಕ: ಈ ಕ್ಷೇತ್ರ ಸ್ವಭಾವತಃ ಜಾಗತಿಕವಾದುದು. ಅಂತರರಾಷ್ಟ್ರೀಯ ಸ್ಟುಡಿಯೋಗಳು, ಹೂಡಿಕೆದಾರರು, ಶಿಕ್ಷಣ ಸಂಸ್ಥೆಗಳ ಜೊತೆ ಸಹಕಾರವನ್ನು ಬೆಳೆಸುತ್ತೇವೆ. ಕರ್ನಾಟಕವು ಭಾರತದ ಯುವ ಸೃಜನಶೀಲರಿಗೂ ಜಗತ್ತಿಗೂ ನಡುವಿನ ಸೇತುವೆಯಾಗಬೇಕು ಎಂದು ಹೇಳಿದರು.