2026-06-08 01:28:53

AI ಆಧಾರಿತ ಜಲ ಆಡಳಿತಕ್ಕೆ ಕರ್ನಾಟಕದ ಒತ್ತು: ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್| Speed News Kannada

AI ಆಧಾರಿತ ಜಲ ಆಡಳಿತಕ್ಕೆ ಕರ್ನಾಟಕದ ಒತ್ತು: ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್| Speed News Kannada

ಬೆಂಗಳೂರು: ಹವಾಮಾನ ಬದಲಾವಣೆ, ನಗರೀಕರಣ, ಅಂತರ್ಜಲ ಕುಸಿತ ಹಾಗೂ ಮೂಲಸೌಕರ್ಯಗಳ ಮೇಲಿನ ಒತ್ತಡದಂತಹ ಭವಿಷ್ಯದ ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ಕೃತಕ ಬುದ್ಧಿಮತ್ತೆ (ಎಐ) ಮತ್ತು ಡಿಜಿಟಲ್ ತಂತ್ರಜ್ಞಾನಗಳು ಪ್ರಮುಖ ಪಾತ್ರ ವಹಿಸುತ್ತಿದ್ದು, ಎಐ ಆಧಾರಿತ ನಗರ ಜಲ ಆಡಳಿತದಲ್ಲಿ ಕರ್ನಾಟಕವು ರಾಷ್ಟ್ರಮಟ್ಟದಲ್ಲಿ ಮುಂಚೂಣಿಯಲ್ಲಿದೆ ಎಂದು ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ತಿಳಿಸಿದರು.

ಇಂದು ಬೆಂಗಳೂರಿನಲ್ಲಿ ಎಲೆಟ್ಸ್ (elets) ಮತ್ತು ಕೆಪಿಎಂಜಿ (KPMG) ಸಹಯೋಗದೊಂದಿಗೆ ಬೆಂಗಳೂರು ಜಲಮಂಡಳಿ (BWSSB) ಆಯೋಜಿಸಿದ್ದ 'ರಾಷ್ಟ್ರೀಯ ಎಐ ಮತ್ತು ಡಿಜಿಟಲ್ ವಾಟರ್ ಶೃಂಗಸಭೆ 2026' ನ್ನು ಉದ್ಘಾಟಿಸಿ ಮಾತನಾಡಿದರು.

ಬೆಂಗಳೂರು, ಮೈಸೂರು, ಮಂಗಳೂರು, ಧಾರವಾಡ ಮತ್ತು ಬೆಳಗಾವಿಯಂತಹ ನಗರಗಳ ಮೇಲೆ ನೀರಿನ ಒತ್ತಡ ಹೆಚ್ಚಾಗುತ್ತಿದೆ. ದಕ್ಷ, ಪಾರದರ್ಶಕ ಮತ್ತು ಜವಾಬ್ದಾರಿಯುತ ಸಾರ್ವಜನಿಕ ಸೇವೆಗಳನ್ನು ಖಚಿತಪಡಿಸಿಕೊಳ್ಳಲು ತಂತ್ರಜ್ಞಾನ ಆಧಾರಿತ ಇಂಟಲಿಜೆಂಟ್ ಆಡಳಿತ ವ್ಯವಸ್ಥೆಗಳು ಅತ್ಯಗತ್ಯವಾಗಿವೆ ಎಂದು ಕರ್ನಾಟಕದ ಮುಖ್ಯ ಕಾರ್ಯದರ್ಶಿಗಳಾದ ಶಾಲಿನಿ ರಜನೀಶ್ ತಿಳಿಸಿದರು.

"ನಗರದ ನೀರು ಸರಬರಾಜು ಮಂಡಳಿಗಳಿಗೆ ಎಐ ಮತ್ತು ಡಿಜಿಟಲ್ ಇಂಟೆಲಿಜೆನ್ಸ್ ಇನ್ನು ಮುಂದೆ ಕೇವಲ ಐಚ್ಛಿಕ ಸಾಧನಗಳಾಗಿ ಉಳಿದಿಲ್ಲ. ನೈಜ-ಸಮಯದ ಮೇಲ್ವಿಚಾರಣೆ, ಪ್ರಿಡಿಕ್ಟಿವ್‌ ಅನಾಲಿಟಿಕ್ಸ್‌ ನೀರಿನ ಬೇಡಿಕೆಯ ಮುನ್ಸೂಚನೆ ಹಾಗೂ ದತ್ತಾಂಶ ಆಧಾರಿತ ಆಡಳಿತವು ಭವಿಷ್ಯದ ಜಲ ನಿರ್ವಹಣೆಯನ್ನು ನಿರ್ಧರಿಸಲಿವೆ," ಎಂದು ಹೇಳಿದರು.

ಕರ್ನಾಟಕವು ಈಗಾಗಲೇ ಎಐ ಉತ್ಕೃಷ್ಟತಾ ಕೇಂದ್ರಗಳನ್ನು (AI Centres of Excellence) ಸ್ಥಾಪಿಸಿದೆ ಹಾಗೂ ಡಿಜಿಟಲ್ ಸಂಗ್ರಹಣೆ, ಡೇಟಾ ಹಂಚಿಕೆ ಮತ್ತು ಕಾರ್ಯಕ್ಷಮತೆ-ಆಧಾರಿತ ಆಡಳಿತ ವ್ಯವಸ್ಥೆಗಳನ್ನು ಬೆಂಬಲಿಸುವ ನೀತಿ ಚೌಕಟ್ಟುಗಳನ್ನು ಪರಿಚಯಿಸಿದೆ ಎಂದು ಅವರು ಉಲ್ಲೇಖಿಸಿದರು. ಡಿಜಿಟಲ್ ರೂಪಾಂತರದ ಕೇಂದ್ರಬಿಂದುವಾಗಿ ಹೊಣೆಗಾರಿಕೆಗೂ ಆದ್ಯತೆ ನೀಡಬೇಕು ಮುಖ್ಯ ಕಾರ್ಯದರ್ಶಿಗಳು ಕರೆ ನೀಡಿದರು.

ಬೆಂಗಳೂರು ಜಲಮಂಡಳಿ ಅಧ್ಯಕ್ಷರಾದ ಡಾ. ರಾಮ್ ಪ್ರಸಾತ್ ಮನೋಹರ್ ಮಾತನಾಡಿ, ಬೆಂಗಳೂರಿನ ವಿಸ್ತಾರ ಮತ್ತು ಸಂಕೀರ್ಣತೆಯು ಸಾಂಪ್ರದಾಯಿಕ ನಿರ್ವಹಣಾ ಕಾರ್ಯಾಚರಣೆಗಳಿಂದ ಮುನ್ಸೂಚಕ ಮತ್ತು ಬುದ್ಧಿವಂತ ನಿರ್ವಹಣಾ ವ್ಯವಸ್ಥೆಗಳತ್ತ ಬದಲಾಗುತ್ತಿದೆ. "ಬೆಂಗಳೂರು ಜಲಮಂಡಳಿಯು ಇಂದು 14 ದಶಲಕ್ಷಕ್ಕೂ ಹೆಚ್ಚು ನಾಗರಿಕರಿಗೆ ಸೇವೆ ಸಲ್ಲಿಸುತ್ತಿದೆ. ವಿಶ್ವದ ಅತಿ ವೇಗವಾಗಿ ಬೆಳೆಯುತ್ತಿರುವ ಮಹಾನಗರಗಳಲ್ಲಿ ಒಂದಾದ ಬೆಂಗಳೂರಿನ ನೀರಿನ ನಿರ್ವಹಣೆಗೆ ಬುದ್ಧಿಮತ್ತೆ ಮತ್ತು ತಂತ್ರಜ್ಞಾನ ಆಧಾರಿತ ಆಡಳಿತದ ಅಗತ್ಯವಿದೆ. ಡಿಜಿಟಲ್ ರೂಪಾಂತರದ ಭಾಗವಾಗಿ ಜಲಮಂಡಳಿಯು ಈಗಾಗಲೇ ಏಷ್ಯಾದ ಅತಿದೊಡ್ಡ ನಗರ-ಮಟ್ಟದ ಸ್ಕಾಡಾ (SCADA) ವ್ಯವಸ್ಥೆ, ಜಿಐಎಸ್ (GIS) ಆಧಾರಿತ ಮ್ಯಾಪಿಂಗ್, ಐಒಟಿ (IoT) ಮೇಲ್ವಿಚಾರಣೆ, ಸ್ವಯಂಚಾಲಿತ ಸೋರಿಕೆ ಪತ್ತೆ ವ್ಯವಸ್ಥೆಗಳು ಮತ್ತು ಸ್ಮಾರ್ಟ್ ಮೀಟರಿಂಗ್ ಪ್ರಾಯೋಗಿಕ ಯೋಜನೆಗಳನ್ನು ಅಳವಡಿಸಿಕೊಂಡಿದೆ. ಜಲಮಂಡಳಿಯು ಇಂತಹ ತಂತ್ರಜ್ಞಾನಗಳ ನೆರವಿನಿಂದ ನಾನ್ ರೆವಿನ್ಯೂ ವಾಟರ್ (Non-Revenue Water - NRW) ಪ್ರಮಾಣವನ್ನು ಶೇ. 50 ರಿಂದ ಶೇ. 26.5 ಕ್ಕೆ ಇಳಿಸಿದೆ, ಇದರ ಪರಿಣಾಮವಾಗಿ ಪ್ರತಿದಿನ ಸುಮಾರು 200 ದಶಲಕ್ಷ ಲೀಟರ್ (200 MLD) ನೀರು ಉಳಿತಾಯವಾಗುತ್ತಿದೆ" ಎಂದು ಹೇಳಿದರು.

ಜಲಮಂಡಳಿಯ ಎಐ-ಚಾಲಿತ ಎನರ್ಜಿ ಆಪ್ಟಿಮೈಸೆಷನ್ ಪಂಪ್ ಗಳಿಂದ (Energy optimisation) ವಾರ್ಷಿಕವಾಗಿ ಪೋಲಾಗುತ್ತಿದ್ದ ಸುಮಾರು ₹42 ಕೋಟಿ ಮೌಲ್ಯದ ವಿದ್ಯುತ್ ವೆಚ್ಚವನ್ನು ಉಳಿತಾಯ ಮಾಡಲು ನೆರವಾಗಿವೆ. ಎಐ ಎಂದರೆ ಕೇವಲ ಡ್ಯಾಶ್‌ಬೋರ್ಡ್‌ಗಳಲ್ಲ. ಇದು ಮುನ್ಸೂಚಕ ಆಡಳಿತ, ಹೊಣೆಗಾರಿಕೆ ಮತ್ತು ಅಳೆಯಬಹುದಾದ ಫಲಿತಾಂಶಗಳ ಬಗ್ಗೆಯಾಗಿದೆ. ನಾವು ರಿಯಾಕ್ಟಿವ್ ಕಾರ್ಯಾಚರಣೆಗಳಿಂದ (Reactive operations) ಇಂಟಲಿಜೆನ್ಟ್ ಯುಟಿಲಿಟಿ ನಿರ್ವಹಣೆಯತ್ತ ಸಾಗುತ್ತಿದ್ದೇವೆ," ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳಗಾದ ತುಷಾರ್‌ ಗಿರಿನಾಥ್‌, ಎಫ್‌ಕೆಸಿಸಿಐ ಅಧ್ಯಕ್ಷೆ ಉಮಾರೆಡ್ಡಿ, ಎಲೆಟ್ಸ್‌ ಟೆಕ್ನೋ ಮೀಡಿಯಾ ಸಂಸ್ಥೆಯ ಸಂಸ್ಥಾಪಕರು ಹಾಗೂ ಸಿಇಓ ರವಿಗುಪ್ತಾ, ಕೆಪಿಎಂಜಿ ಪಾರ್ಟ್‌ನರ್‌ ಹೆಡ್‌ ಆಫ್‌ ದ ಗವರ್ನಮೆಂಟ್‌ ಅಂಡ್‌ ಪಬ್ಲಿಕ್‌ ಸರ್ವಿಸಸ್‌ ನಿಲಾಚಲ್‌ ಮಿಶ್ರಾ (ಜಿ&ಪಿಎಸ್‌) ಸೇರಿದಂತೆ ಈ ಬೃಹತ್ ಶೃಂಗಸಭೆಯಲ್ಲಿ ಜಾಗತಿಕ ಜಲ ತಜ್ಞರು, ಎಐ ಪರಿಣತರು, ನೀತಿ ನಿರೂಪಕರು, ತಂತ್ರಜ್ಞಾನ ಕಂಪನಿಗಳು, ನವೋದ್ಯಮಗಳು (ಸ್ಟಾರ್ಟ್-ಅಪ್‌ಗಳು) ಹಾಗೂ ದೇಶ-ವಿದೇಶಗಳ ನಗರ ಆಡಳಿತ ವೃತ್ತಿಪರರು ಭಾಗವಹಿಸಿದ್ದರು.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.