2026-03-07 06:12:35

Karaga Mahotsav on April 1st | ಏಪ್ರಿಲ್‌ 1ರಂದು ಕರಗ ಮಹೋತ್ಸವ ಈ ಬಾರಿ ಕರಗ ಹೊರುವವರು ಯಾರು | Speed News Kannada

Karaga Mahotsav on April 1st | ಏಪ್ರಿಲ್‌ 1ರಂದು ಕರಗ ಮಹೋತ್ಸವ ಈ ಬಾರಿ ಕರಗ ಹೊರುವವರು ಯಾರು | Speed News Kannada

ಬೆಂಗಳೂರು: ಬೆಂಗಳೂರಿನ ಜಾನಪದ ಹಬ್ಬ ಕರಗ ಏಪ್ರಿಲ್‌ 1ರಂದು ನಡೆಯಲಿದೆ. ನಗರದ ಪುರಾತನ  ಸಮುದಾಯಗಳಲ್ಲಿ ಒಂದಾದ ತಿಗಳ ಅಥವಾ ವಹ್ನಿಕುಲ ಸಮುದಾಯ ಕರಗವನ್ನು ಆಚರಿಸಿಕೊಂಡು ಬರುತ್ತಿದೆ. ಇವರು ದ್ರೌಪದಿ ಮತ್ತು ಪಾಂಡವರ ಅಗ್ರಜ  ಧರ್ಮರಾಯನನ್ನು ಪೂಜಿಸಿಕೊಂಡು ಬರುತ್ತಿದ್ದಾರೆ. ದ್ರೌಪದಿಯನ್ನು ತಮ್ಮ ಕುಲ ದೇವತೆ ಎಂದೂ ಭಾವಿಸಿರುವ ತಿಗಳ ಸಮುದಾಯ 800 ವರ್ಷಗಳ ಹಿಂದೆ ತಿಗಳರು ಧರ್ಮರಾಯಸ್ವಾಮಿ ದೇವಸ್ಥಾನವನ್ನು ನಿರ್ಮಿಸಿದ್ದಾರೆ.
ದಿನಾಂಕ ನಿಗದಿ:
ಕರಗ ಶಕ್ತ್ಯೋತ್ಸವಕ್ಕೆ ದಿನಾಂಕ ನಿಗದಿಯಾಗಿದ್ದು, ಮಾರ್ಚ್‌ 24  ರಿಂದ ಆರಂಭವಾಗಲಿದೆ. ಏಪ್ರಿಲ್‌ 1ರಂದು ಕರಗ ನಡೆಯಲಿದೆ.  ಚೈತ್ರ ಪೌರ್ಣಮಿಯಂದು ಕರಗ ಶಕ್ತ್ಯೋತ್ಸವ ನಡೆಯಲಿದೆ. ಒಟ್ಟು 11 ದಿನಗಳ ಕಾಲ ಬೆಂಗಳೂರು ಕರಗ ಮಹೋತ್ಸವ ನಡೆಯಲಿದೆ. ಬೆಂಗಳೂರು ಕರಗ ಆಚರಣೆ ಸಂಬಂಧ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.  ಕರಗ ಹೊರಲು ಈ ಬಾರಿಯೂ ಎ.ಜ್ಞಾನೇಂದ್ರ ಅವರನ್ನು ಒಮ್ಮತದಿಂದ ಆಯ್ಕೆ ಮಾಡಲಾಗಿದೆ. ಇವರು 15 ವರ್ಷಗಳಿಂದ ಬೆಂಗಳೂರು ಕರಗ ಹೊರುತ್ತಿದ್ದು, 16ನೇ ಬಾರಿ ಕರಗ ಹೊರಲು ಸಜ್ಜಾಗಿದ್ದಾರೆ.
ಆದಿಶಕ್ತಿ ದ್ರೌಪದಿಯನ್ನು ಆರಾಧಿಸುವ ಹಬ್ಬವೇ ಕರಗ. ಶತಮಾನಗಳಿಂದ ಕರಗವನ್ನು ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ಆಚರಿಸಿಕೊಂಡು ಬರಲಾಗುತ್ತಿದೆ. ಈ ಆಚರಣೆಯ ಗುಟ್ಟುಗಳು ಅರ್ಚಕರನ್ನು ಹೊರತುಪಡಿಸಿ ಬೇರೆ ಯಾರಿಗೂ ತಿಳಿದಿರುವುದಿಲ್ಲ. ಪೂಜಾ ವಿಧಾನಗಳನ್ನು ಬಹಿರಂಗಪಡಿಸಿದರೆ ತಿಳಿದವರಿಗೆ ಮತ್ತು ತಿಗಳ ಸಮುದಾಯಕ್ಕೆ ಶ್ರೇಯಸ್ಸು ಅಲ್ಲ ಎಂಬ ಪ್ರತೀತಿ ಇದೆ. ಈ ಸಂಪ್ರದಾಯ ಮತ್ತು ಪೂಜೆಯನ್ನು ಬೆಂಗಳೂರು ಮೂಲದ ತಿಗಳರೇ ನಡೆಸುವುದು ವಾಡಿಕೆ. 
ಇವರ ಮೂಲಪುರುಷ ರಾಜ ವೀರವಹ್ನಿ ಬೆಂಕಿಯಿಂದ ಜನಿಸಿದ ಎಂದು ಹೇಳಲಾಗುತ್ತಿದೆ. ಹೀಗಾಗಿ ಅಗ್ನಿಯ ಅಧಿದೇವತೆಯಾದ ದೌಪದಿಯ ಹೆಸರಿನಲ್ಲಿ ಕರಗವನ್ನು ಆಚರಿಸಿಕೊಂಡು ಬರುತ್ತಿದ್ದಾರೆ.
ಬೆಂಗಳೂರಿನ ಧರ್ಮರಾಯ ಸ್ವಾಮಿ ದೇವಸ್ಥಾನ ಕರಗದ ಕೇಂದ್ರಬಿಂದು. ವಿಶಾಲವಾದ ಮಂಟಪ ಈ ದೇವಸ್ಥಾನ ಆಕರ್ಷಣೆ. ಅಶ್ವತ್ಥಕಟ್ಟೆ ಮಂಟಪ, ಎರಡು ಉದ್ದನೆಯ ಕಂಬಗಳು, ದ್ರಾವಿಡ ಶೈಲಿಯ ಮೂರು ಗೋಪುರಗಳಿವೆ. ಗರ್ಭಗುಡಿಯಲ್ಲಿ ಧರ್ಮರಾಯಸ್ವಾಮಿ ಮತ್ತು ಶ್ರೀಕೃಷ್ಣನ ವಿಗ್ರಹಗಳಿವೆ. ಈ ವಿಗ್ರಹಗಳ ಎದುರಿನ ಪೀಠದ ಮೇಲೆ ಹಸಿಕರಗವನ್ನು ಅಲಂಕರಿಸಿ ಪೂಜಿಸಲಾಗುತ್ತದೆ. ಯುಗಾದಿ ನಂತರ 9 ದಿನಗಳ ಹಬ್ಬವಾದ ಕರಗ ನಡೆಯುತ್ತದೆ.
ದ್ವಾದಶಿಯಂದು ಆರತಿ ಸೇವೆ, ತ್ರಯೋದಶಿಯಂದು ಹಸಿಕರಗ, ಪೂರ್ಣಿಮೆಯಂದು ಕರಗದ ಉತ್ಸವ ನಡೆಯುತ್ತದೆ.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.