ಬೆಂಗಳೂರು: ಕನ್ನಡ ಗೆಳೆಯರ ಬಳಗದ ಸಂಚಾಲಕ, ಎಚ್.ಎ.ಎಲ್.ನ ನಿವೃತ್ತ ಡಿಜಿಎಂ ಬಾ.ಹ. ಉಪೇಂದ್ರ (66) ಅವರು ಗುರುವಾರ ಬೆಳಗ್ಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಉಪೇಂದ್ರ ಅವರಿಗೆ ಪತ್ನಿ ಶಾಂತಕುಮಾರಿ, ಪುತ್ರ ಚೇತನ್ ಇದ್ದಾರೆ. ಸಾವಿನಲ್ಲೂ ಸಾರ್ಥಕತೆ ಮೆರೆದ ಉಪೇಂದ್ರ ಅವರ ದೇಹವನ್ನು ತುಮಕೂರಿನ ಸಿದ್ದಗಂಗಾ ಅಸ್ಪತ್ರೆಗೆ ದಾನ ಮಾಡಲಾಗಿದ್ದು, ಕಣ್ಣುಗಳನ್ನೂ ದಾನ ಮಾಡಲಾಗಿದೆ.
ಅಪ್ರತಿಮ ಕನ್ನಡಾಭಿಮಾನಿಯಾದ ಉಪೇಂದ್ರ ತಾವು ಎಚ್ಎಎಲ್ ನಲ್ಲಿ ಉನ್ನತ ಅಧಿಕಾರಿ ಎಂಬುದನ್ನು ಮರೆತು ಸಾಮಾನ್ಯ ಕನ್ನಡ ಕಾರ್ಯಕರ್ತನಾಗಿ ಕೆಲಸ ಮಾಡಿ ಕನ್ನಡ ವಲಯದಲ್ಲಿ ಅಪ್ರತಿಮ ಕನ್ನಡ ಹೋರಾಟಗಾರರಾಗಿದ್ದರು.
ಕನ್ನಡ ಚಳವಳಿಗೆ ಹೊಸ ಆಯಾಮ ನೀಡಿದ ಡಾ ಎಂ. ಚಿದಾನಂದಮೂರ್ತಿ ಅವರ ನೇತೃತ್ವದ ಸಾಹಿತಿಗಳ ಕಲಾವಿದರ ಬಳಗವು 1986ಲ್ಲಿ ನಡೆಸಿದ ‘ಕನ್ನಡ ದೂರದರ್ಶನ’ ಹೋರಾಟದ ಮೂಲಕ ಕನ್ನಡ ಹೋರಾಟಕ್ಕೆ ಪ್ರವೇಶಿಸಿದರು. ಅಂದಿನಿಂದ ಇಂದಿನವರೆಗೆ ನಡೆದಿರುವ ಎಲ್ಲ ಕನ್ನಡಪರ ಹೋರಾಟಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದರು. ಕನ್ನಡ ಶಕ್ತಿ ಕೇಂದ್ರದ ಸಹ ಕಾರ್ಯದರ್ಶಿ, ಕನ್ನಡ ಗೆಳೆಯರ ಬಳಗದ ಸಂಚಾಲಕರಾಗಿ ಕಾರ್ಯ ನಿರ್ವಹಿಸಿದ್ದರು.
ಅವರ ನಿಧನ ಕನ್ನಡ ಗೆಳೆಯರ ಬಳಗದ ಚೇತನ ಶಕ್ತಿಯನ್ನು ಕಳೆದು ಕೋಡಂತಾಗಿದೆ. ಅವರ ನಿಧನವು ಕನ್ನಡ ಹೋರಾಟಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಬಳಗದ ಸಂಚಾಲಕ ರಾ.ನಂ. ಚಂದ್ರಶೇಖರ ಸಂತಾಪ ವ್ಯಕ್ತಡಿಸಿದ್ದಾರೆ.