ಕಲಬುರಗಿ : ಜಿಲ್ಲೆಯ ಕಲಬುರಗಿ ತಾಲೂಕಿನ ಬಬಲಾದ ಗ್ರಾಮದ ಖಾಸಗಿ ಶಾಲೆಯಲ್ಲಿ ದುರ್ಘಟನೆ ಸಂಭವಿಸಿದೆ. ಶಾಲಾ ಆವರಣದಲ್ಲಿರುವ ಬಾವಿಯಲ್ಲಿ (Well) 15 ವರ್ಷದ ಗುರು ಎಂಬ ವಿದ್ಯಾರ್ಥಿಯ ಶವ ಪತ್ತೆಯಾಗಿದ್ದು ಅನುಮಾನಗಳುಗೆ ಕಾರಣವಾಗಿದೆ. ಮೃತ ವಿದ್ಯಾರ್ಥಿ ಚಿಂಚೋಳಿ ತಾಲೂಕಿನ ನಿವಾಸಿ ಎಂದು ಗುರುತಿಸಲಾಗಿದೆ. ಮೃತ ವಿದ್ಯಾರ್ಥಿ ಗುರು ವಸತಿ ನಿಲಯದಲ್ಲಿ ಉಳಿದುಕೊಂಡು ವಿದ್ಯಾಭ್ಯಾಸ ಮಾಡುತ್ತಿದ್ದ. ಕಳೆದ ಮೂರು ದಿನಗಳಿಂದ ಆತ ಕಾಣೆಯಾಗಿದ್ದ. ಹೀಗಾಗಿ ಆತನಿಗಾಗಿ ಹುಡುಕಾಟ ನಡೆಯುತ್ತಿತ್ತು. ಇಂದು (ಫೆ.17) ಬೆಳಗ್ಗೆ ಶಾಲೆಯ ಬಾವಿಯಲ್ಲಿ ಮೃತದೇಹ ಪತ್ತೆಯಾಗಿದೆ.ಕಲಬುರಗಿ ಸಬ್-ಅರ್ಬನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇತ್ತೀಚೆಗೆ ಶಾಲೆಯ ಬೈಕ್ ತೆಗೆದುಕೊಂಡು ಹೋಗಿ ಗೋಡೆಗೆ ಡಿಕ್ಕಿ ಹೊಡೆದ ಪರಿಣಾಮ ವಾಹನ ಹಾನಿಗೊಂಡಿತ್ತು ಎನ್ನಲಾಗಿದೆ. ಈ ವಿಷಯವನ್ನು ಪ್ರಿನ್ಸಿಪಾಲ್ ಗಮನಕ್ಕೆ ತಂದು, ದುರಸ್ತಿ ವೆಚ್ಚವನ್ನು ಕುಟುಂಬದಿಂದ ಪಡೆಯಲು ಸೂಚನೆ ನೀಡಿದರೆಂಬ ಮಾತುಗಳು ಕೇಳಿಬಂದಿವೆ. ಇದರಿಂದ ಮನನೊಂದು ಆತ ಆತ್ಮಹತ್ಯೆಗೆ ಶರಣಾಗಿರಬಹುದೆಂಬ ಅನುಮಾನ ವ್ಯಕ್ತವಾಗಿದೆ.