ಹಾಸನ: ಮಾವಿನಕೆರೆ ಬೆಟ್ಟದ ತಪ್ಪಲಿನಲ್ಲಿ ನೆರವೇರಿದ ಮಾಜಿ ಪ್ರಧಾನಿ ದೇವೇಗೌಡರ ಧರ್ಮಪತ್ನಿ ಚೆನ್ನಮ್ಮನವರ ಅಂತ್ಯಕ್ರಿಯೆಯ ಮರುದಿನ, ಕುಟುಂಬಸ್ಥರೆಲ್ಲರೂ ಸಮಾಧಿ ಸ್ಥಳಕ್ಕೆ ತೆರಳಿ ಪೂಜೆ ಸಲ್ಲಿಸಿದರು. ಈ ವೇಳೆ ತಾಯಿಯ ಅಗಲಿಕೆಯಿಂದ ಭಾವುಕರಾದ ದೇವೇಗೌಡರಿಗೆ ಮಕ್ಕಳು ಸಮಾಧಾನ ಹೇಳಿದರು. ವೇದಮಂತ್ರಗಳ ಪಠಣದೊಂದಿಗೆ ಪೂಜಾವಿಧಿಗಳು ನಡೆದವು.
ಇದಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ, ನಾಳೆ ಹಾಲು-ತುಪ್ಪ ಬಿಡುವ ಶಾಸ್ತ್ರ ಹಾಗೂ 11ನೇ ದಿನದ ಉತ್ತರಕ್ರಿಯೆಯ ಕುರಿತು ಕುಟುಂಬದವರು ಚರ್ಚಿಸಿರುವುದಾಗಿ ತಿಳಿಸಿದರು. ತಾಯಿಯ ಅಂತಿಮ ದರ್ಶನಕ್ಕೆ ಆಗಮಿಸಿ ಪ್ರೀತಿ ತೋರಿದ ನಾಡಿನ ಜನತೆಗೆ ಕೃತಜ್ಞತೆ ಸಲ್ಲಿಸಿದ ಅವರು, ಕೊನೆಯುಸಿರಿರುವವರೆಗೂ ಜನಸೇವೆ ಮಾಡುವುದಾಗಿ ತಾಯಿಯ ಸಮಾಧಿಯೆದುರು ಶಪಥ ಮಾಡಿದರು.
ಅಂತ್ಯಕ್ರಿಯೆ ಸಮಯದ ತಮ್ಮ ಈ ಭಾಷಣದಲ್ಲಿ ಕೇಂದ್ರ ಸಚಿವ ಹೆಚ್ .ಡಿ ಕುಮಾರಸ್ವಾಮಿ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಹೆಸರು ಪ್ರಸ್ತಾಪಿಸದೇ ಇದ್ದುದರ ಬಗ್ಗೆ ಹರಿದಾಡುತ್ತಿದ್ದ ಚರ್ಚೆಗೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ತಾವು ಯಾವುದೇ ರಾಜಕೀಯ ದುರುದ್ದೇಶದಿಂದ ಹಾಗೆ ಮಾಡಿಲ್ಲ, ಅವರ ಹೆಸರು ಹೇಳದೇ ಉಳಿಸಿದ್ದು ಉದ್ದೇಶಪೂರ್ವಕ ಅಲ್ಲ ಎಂದು ಸ್ಪಷ್ಟಪಡಿಸಿದರು. ಜೊತೆಗೆ, ತಾಯಿಯ ಗುಣಗಾನ ಮಾಡಿ ಗೌರವಿಸಿದ ಮಾಧ್ಯಮಗಳಿಗೂ ಧನ್ಯವಾದ ಅರ್ಪಿಸಿದರು.