2026-03-07 06:42:27

Jammu and Kashmir wins Ranji Trophy | 67 ವರ್ಷಗಳಲ್ಲಿ ಇದೇ ಮೊದಲ ಬಾರಿ ರಣಜಿ ಪ್ರಶಸ್ತಿ ಪಡೆದ ಜಮ್ಮು ಕಾಶ್ಮೀರ | Speed News Kannada

Jammu and Kashmir wins Ranji Trophy | 67 ವರ್ಷಗಳಲ್ಲಿ ಇದೇ ಮೊದಲ ಬಾರಿ ರಣಜಿ ಪ್ರಶಸ್ತಿ ಪಡೆದ ಜಮ್ಮು ಕಾಶ್ಮೀರ | Speed News Kannada

ಹುಬ್ಬಳ್ಳಿ: ರಣಜಿ ಟ್ರೋಫಿ ಫೈನಲ್ ಪಂದ್ಯದ ಐದನೇ ದಿನವೂ ಜಮ್ಮು–ಕಾಶ್ಮೀರ ತಂಡವು ಉತ್ತಮ ಬ್ಯಾಟಿಂಗ್ ಮೂಲಕ ಪಂದ್ಯವನ್ನು ಡ್ರಾ ಮಾಡಿಕೊಂಡು ಫೈನಲ್ ಪಂದ್ಯದ ಮೊದಲ ಇನಿಂಗ್ಸ್‌ ಲೀಡ್ ಆಧಾರದಲ್ಲಿ ಚೊಚ್ಚಲ ಪ್ರಶಸ್ತಿಯನ್ನು ಗಳಿಸಿದೆ.
ನಾಲ್ಕನೇ ದಿನದಾಟದ ಅಂತ್ಯಕ್ಕೆ 57 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 186 ರನ್‌ ಗಳಿಸಿ, 477 ರನ್‌ಗಳ ಬೃಹತ್‌ ಮುನ್ನಡೆ ಕಾಯ್ದುಕೊಂಡಿದ್ದ ಜಮ್ಮು–ಕಾಶ್ಮೀರ ತಂಡವು, ಪಂದ್ಯದ ಕೊನೆಯ ದಿನವೂ ಕರ್ನಾಟಕದ ಬೌಲರ್‌ಗಳನ್ನು ಮಣಿಸುವಲ್ಲಿ ಯಶಸ್ವಿಯಾದರು.
94 ರನ್‌ ಗಳಿಸಿ ಐದನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದ ಆರಂಭಿಕ ಆಟಗಾರ ಖಮ್ರಾನ್ ಇಕ್ಬಾಲ್, ಕೊನೆಯ ದಿನ ಶತಕವನ್ನು ಪೂರೈಸಿ ಗಮನ ಸೆಳೆದರು. 311 ಎಸೆತಗಳನ್ನು ಎದುರಿಸಿದ ಖಮ್ರಾನ್, ಅಜೇಯ 160 ರನ್‌ ಗಳಿಸಿದರು. 16 ರನ್‌ ಗಳಿಸಿ ಬ್ಯಾಟಿಂಗ್ ಕಾಯ್ದುಕೊಂಡಿದ್ದ ಸಾಹಿಲ್ ಲೋತ್ರಾ, ಅಜೇಯ 101 ರನ್‌ ಗಳಿಸಿದರು. ಇವರಿಬ್ಬರ ಬ್ಯಾಟಿಂಗ್ ನೆರವಿನಿಂದ ಜಮ್ಮು–ಕಾಶ್ಮೀರ ತಂಡವು 113 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 342 ರನ್‌ ಗಳಿಸಿತು. ಈ ಹಂತದಲ್ಲಿ ಪ್ರವಾಸಿ ತಂಡದ ನಾಯಕ ಪಾರಸ್ ಡೋಗ್ರಾ ಅವರು ‘ಡ್ರಾ’ಗೆ ಕರೆನೀಡಿದರು.
ಈ ಮೂಲಕ 67 ವರ್ಷಗಳ ರಣಜಿ ಟ್ರೋಫಿ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಜಮ್ಮು–ಕಾಶ್ಮೀರ ತಂಡವು ಪ್ರಶಸ್ತಿಗೆ ಭಾಜನವಾಯಿತು. 9ನೇ ಪ್ರಶಸ್ತಿಯ ಕನಸಿನಲ್ಲಿದ್ದ ಕರ್ನಾಟಕದ ಕನಸು ತವರಿನಲ್ಲಿಯೇ ಕಮರಿತು.
ಅತಿಹೆಚ್ಚು ರನ್‌ ಗಳಿಸಿದ ಬ್ಯಾಟರ್:
ಈ ಬಾರಿಯ ರಣಜಿ ಟೂರ್ನಿಯಲ್ಲಿ ಕರ್ನಾಟಕದ ಸ್ಮರಣ್ ರವಿಚಂದ್ರನ್ ಅವರು ಅತಿಹೆಚ್ಚು ರನ್‌ ಗಳಿಸಿದ ಬ್ಯಾಟರ್‌ ಎನಿಸಿಕೊಂಡರು. 9 ಪಂದ್ಯಗಳ 14 ಇನಿಂಗ್ಸ್‌ಗಳಲ್ಲಿ 86.36 ಸರಾಸರಿಯಲ್ಲಿ 4 ಶತಕಗಳು ಸೇರಿ 950 ರನ್‌ ಗಳಿಸಿದರು. 
ಅತಿಹೆಚ್ಚು ವಿಕೆಟ್ ಪಡೆದ ಬೌಲರ್
ಜಮ್ಮು ಮತ್ತು ಕಾಶ್ಮೀರ ತಂಡದ ಮಧ್ಯಮವೇಗಿ ಅಕೀಬ್ ನಬಿ ದಾರ್ ಅವರು 10 ಪಂದ್ಯಗಳಲ್ಲಿ 60 ವಿಕೆಟ್ ಪಡೆಯುವ ಮೂಲಕ ಅತಿಹೆಚ್ಚು ವಿಕೆಟ್ ಪಡೆದ ಬೌಲರ್‌ ಎನಿಸಿಕೊಂಡರು.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.