2026-03-07 04:59:45

Israel Iran war PV Sindhu stuck in Dubai | ಇಸ್ರೇಲ್ ಇರಾನ್ ಯುದ್ಧ ದುಬೈನಲ್ಲಿ ಸಿಲುಕಿಕೊಂಡ ಪಿವಿ ಸಿಂಧು | Speed News Kannada

Israel Iran war PV Sindhu stuck in Dubai | ಇಸ್ರೇಲ್ ಇರಾನ್ ಯುದ್ಧ ದುಬೈನಲ್ಲಿ ಸಿಲುಕಿಕೊಂಡ ಪಿವಿ ಸಿಂಧು | Speed News Kannada

ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯ ಹಿನ್ನೆಲೆಯಲ್ಲಿ ವಿಮಾನ ಸೇವೆಗಳು ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದು, ಡಬಲ್ ಒಲಿಂಪಿಕ್ ಪದಕ ವಿಜೇತೆ ಪಿ ವಿ ಸಿಂಧು ದುಬೈ ವಿಮಾನ ನಿಲ್ದಾಣದಲ್ಲಿ ಸಿಲುಕಿಕೊಂಡಿದ್ದಾರೆ. ಶನಿವಾರ ಪ್ರತಿಷ್ಠಿತ ಆಲ್ ಇಂಗ್ಲೆಂಡ್ ಓಪನ್ ಬ್ಯಾಡ್ಮಿಂಟನ್ ಟೂರ್ನಮೆಂಟ್‌ಗೆ ಹೋಗುವ ಮಾರ್ಗದಲ್ಲಿ ಪಿವಿ ಸಿಂಧು ಸಿಲುಕಿಕೊಂಡಿದ್ದಾರೆ. ಇನ್ನು ಈ ಬಗ್ಗೆ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಸಿಂಧು ಹಂಚಿಕೊಂಡ ವಿಡಿಯೋದಲ್ಲಿ ಮುಂದಿನ ಸೂಚನೆ ಬರುವವರೆಗೆ ಎಲ್ಲಾ ವಿಮಾನಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.
ನಂತರ 'X' ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯೆ ನೀಡಿದ ಅವರು, "ನಾನು ಸುರಕ್ಷಿತವಾಗಿದ್ದೇನೆ. ನನ್ನ ತಂಡದೊಂದಿಗೆ ಇಲ್ಲಿ ಇದ್ದೇನೆ. ಆದರೆ ಪರಿಸ್ಥಿತಿ ಭಯಾನಕವಾಗಿದೆ. ಗಂಟೆ ಗಂಟೆಗೂ ಪರಿಸ್ಥಿತಿ ಉಲ್ಬಣಗೊಳ್ಳುತ್ತಿದೆ ಎಂಬುದು ಆತಂಕಕಾರಿ ಎಂದು ಬರೆದುಕೊಂಡಿದ್ದಾರೆ.
ದುಬೈ ತನಗೆ ಬಹಳ ಪ್ರಿಯ ನಗರವಾಗಿದ್ದು, ಯಾವಾಗಲೂ ಸುರಕ್ಷಿತ ಮತ್ತು ಚೈತನ್ಯದಿಂದ ಕೂಡಿರುತ್ತಿತ್ತು. ಇಂತಹ ಪರಿಸ್ಥಿತಿ ಎದುರಾಗಿರುವುದು ಅರ್ಥಮಾಡಿಕೊಳ್ಳಲು ಕಷ್ಟವಾಗುತ್ತಿದೆ. ಎಂದು ಸಿಂಧು ತಿಳಿಸಿದ್ದಾರೆ.
ವಿಮಾನ ನಿಲ್ದಾಣಗಳು ಅಸ್ತವ್ಯಸ್ತವಾಗಿವೆ. ಅನೇಕ ಕುಟುಂಬಗಳು ಸಿಲುಕಿಕೊಂಡು ಕಾಯುತ್ತಿವೆ. ಎಲ್ಲರೂ ಸುರಕ್ಷಿತವಾಗಿರಲಿ ಎಂದು ಪ್ರಾರ್ಥಿಸುತ್ತೇನೆ. ಅಧಿಕಾರಿಗಳು ತಮ್ಮ ಮಟ್ಟಿಗೆ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದ್ದಾರೆ ಎಂದು ಸಿಂಧು ಹೇಳಿದ್ದಾರೆ.
ಅಬುಧಾಬಿಯಲ್ಲಿ ಸಿಲುಕಿಕೊಂಡ ಡೋನ್ ಪ್ರತಾಪ್ ಇನ್ನು ಅಬುಧಾಬಿಯಿಂದ ಬೆಂಗಳೂರಿಗೆ ಪ್ರಯಾಣಿಸಬೇಕಿದ್ದ ಡೋನ್ ಪ್ರತಾಪ್ ಅವರು ಅಲ್ಲಿನ ವಿಮಾನ ನಿಲ್ದಾಣದಲ್ಲಿ ಸಿಲುಕಿಕೊಂಡಿರುವುದಾಗಿ ತಿಳಿಸಿದ್ದಾರೆ. ಈ ಕುರಿತು ಅವರು ಸೆಲ್ಸಿ ವಿಡಿಯೋ ಹಂಚಿಕೊಂಡು ತಮ್ಮ ಸ್ಥಿತಿಯನ್ನು ವಿವರಿಸಿದ್ದಾರೆ. ನಾನು ಪ್ರಸ್ತುತ ಅಬುಧಾಬಿ ಏರ್‌ಪೋರ್ಟ್ನಲ್ಲಿ ಇದ್ದೇನೆ. ಇರಾನ್-ಇಸ್ರೇಲ್ ಸಂಘರ್ಷದ ಹಿನ್ನೆಲೆಯಲ್ಲಿ ನಮ್ಮ ಇತಿಹಾದ್ ವಿಮಾನ ಸೇರಿದಂತೆ ಮುಂದಿನ 12 ಗಂಟೆಗಳ ಕಾಲ ಹೊರಡಬೇಕಿದ್ದ ಎಲ್ಲಾ ವಿಮಾನಗಳನ್ನು ರದ್ದುಗೊಳಿಸಲಾಗಿದೆ ಎಂದು ಹೇಳಿದ್ದಾರೆ. ವಿಮಾನ ರದ್ದತಿಯಿಂದ ನೂರಾರು ಪ್ರಯಾಣಿಕರು ಗೊಂದಲಕ್ಕೊಳಗಾಗಿದ್ದು, ಏನು ಮಾಡಬೇಕೆಂದು ತಿಳಿಯದೆ ವಿಮಾನ ನಿಲ್ದಾಣದಲ್ಲೇ ಕಾಯುತ್ತಿದ್ದಾರೆ. ಅಧಿಕಾರಿಗಳು ಪ್ರಯಾಣಿಕರಿಗೆ ಹೊರಾಂಗಣದಲ್ಲಿ ನಿರೀಕ್ಷಿಸಲು ಸೂಚಿಸಿದ್ದಾರೆ ಎಂದು ಪ್ರತಾಪ್ ತಿಳಿಸಿದ್ದಾರೆ. ಮುಂದಿನ ಮಾಹಿತಿ ಬರಲು ನಾವು ಕಾಯುತ್ತಿದ್ದೇವೆ ಎಂದು ಅವರು ವಿಡಿಯೋದಲ್ಲಿ ಹೇಳಿದ್ದಾರೆ..

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.