ನವದೆಹಲಿ: ಇರಾನ್ ಇಸ್ರೇಲ್ ಸಂಘರ್ಷದ ನಡುವೆಯೇ ಭಾರತಕ್ಕೆ ಇರಾನ್ ಮಾಡಿದ್ದ ನಂಬಿಕೆ ದ್ರೋಹದ ಬಗ್ಗೆ ಮಾಹಿತಿ ಹೊರಬಿದ್ದಿದೆ. ಹೌದು ಭಾರತದ ವಿರುದ್ಧದ ಯುದ್ಧಗಳಲ್ಲಿ ಪಾಕಿಸ್ತಾನಕ್ಕೆ ಬೆನ್ನೆಲುಬಾಗಿ ನಿಂತಿತ್ತು ಎಂಬ ಅಂಶ ಇತಿಹಾಸದ ಪುಟಗಳಿಂದ ಹೊರಬಂದಿದೆ. ಇಂದು ಅಮೆರಿಕ ಮತ್ತು ಇಸ್ರೇಲ್ ದೇಶಗಳನ್ನು ಪರಮ ಶತ್ರುವಿನಂತೆ ಕಾಣುವ ಇರಾನ್, ಒಂದು ಕಾಲದಲ್ಲಿ ಅಮೆರಿಕದ ಅತ್ಯಂತ ಆಪ್ತ ಮಿತ್ರನಾಗಿತ್ತು. 1941 ರಿಂದ 1979 ರವರೆಗೆ ಇರಾನ್ ಆಡಳಿತ ಚುಕ್ಕಾಣಿ ಹಿಡಿದಿದ್ದ ಮೊಹಮ್ಮದ್ ರೆಜಾ ಪಹ್ಮವಿ ಅವರ ಕಾಲದಲ್ಲಿ ಇರಾನ್ ಮತ್ತು ಅಮೆರಿಕದ ನಡುವೆ ಗಾಢವಾದ ಸ್ನೇಹವಿತ್ತು. ಈ ಸ್ನೇಹದ ಲಾಭ ಪಡೆದ ಪಾಕಿಸ್ತಾನ, 1965 ಮತ್ತು 1971ರ ಭಾರತದ ವಿರುದ್ಧದ ಯುದ್ಧಗಳ ಸಮಯದಲ್ಲಿ ಇರಾನ್‌ನಿಂದ ಭಾರಿ ಪ್ರಮಾಣದ ಮಿಲಿಟರಿ ನೆರವನ್ನು ಪಡೆದುಕೊಂಡಿತ್ತು. ಅಮೆರಿಕದ ಇತ್ತೀಚಿನ ರಹಸ್ಯ ದಾಖಲೆಗಳ ಬಿಡುಗಡೆಯು ಈ ಬಗ್ಗೆ ತಿಳಿಸಿದೆ.
1965ರ ಯುದ್ಧದ ಸಂದರ್ಭದಲ್ಲಿ ಪಾಕಿಸ್ತಾನಕ್ಕೆ ಶಸ್ತ್ರಾಸ್ತ್ರಗಳ ಕೊರತೆ ಎದುರಾದಾಗ, ಇರಾನ್ ತನ್ನಲ್ಲಿದ್ದ ಯುದ್ಧ ವಿಮಾನಗಳು ಮತ್ತು ಮದ್ದುಗುಂಡುಗಳನ್ನು ಪಾಕಿಸ್ತಾನಕ್ಕೆ ವರ್ಗಾಯಿಸಿತ್ತು. ಅಮೆರಿಕ ನೇರವಾಗಿ ಯುದ್ಧದಲ್ಲಿ ಭಾಗಿಯಾಗಲು ಸಾಧ್ಯವಾಗದಿದ್ದಾಗ, ಇರಾನ್ ಮೂಲಕ ಪಾಕಿಸ್ತಾನಕ್ಕೆ ಯುದ್ಧ ಸಾಮಗ್ರಿಗಳನ್ನು ತಲುಪಿಸುವ ಗುಪ್ತ ಮಾರ್ಗವನ್ನು ಅನುಸರಿಸಲಾಗಿತ್ತು ಎಂದು ವರದಿಗಳು ತಿಳಿಸಿವೆ.
ನೇರ ಹಸ್ತಕ್ಷೇಪ ಮಾಡಲು ಸಾಧ್ಯವಿರಲಿಲ್ಲ!
ಆ ಸಮಯದಲ್ಲಿ ಭಾರತ ಮತ್ತು ಹಿಂದಿನ ಸೋವಿಯತ್ ಒಕ್ಕೂಟ ಸ್ನೇಹ ಒಪ್ಪಂದಕ್ಕೆ ಸಹಿ ಹಾಕಿದ್ದರು. ಇದರಿಂದ ಶಾ ಪಹ್ಲವಿ ನೇರವಾಗಿ ಸೇನಾ ಹಸ್ತಕ್ಷೇಪ ಮಾಡಲು ಮುನ್ನಡೆಯಲಿಲ್ಲ. ಆದರೆ ಅವರು ಪರ್ಯಾಯ ಯೋಚನೆ ಮುಂದಿಟ್ಟರು. ಜೋರ್ಡಾನ್ನ F-104 ಯುದ್ಧವಿಮಾನಗಳನ್ನು ಪಾಕಿಸ್ತಾನಕ್ಕೆ ಕಳುಹಿಸಲು ಅಮೆರಿಕ ಒತ್ತಡ ಹೇರುವಂತೆ ಸಲಹೆ ನೀಡಿದರು.