ಇರಾನ್, ಇಸ್ರೇಲ್ ಯುದ್ಧ ಜಗತ್ತಿನಾದ್ಯಂತ ಸಂಚಲನ ಸೃಷ್ಟಿಸಿದೆ. 3ನೇ ವಿಶ್ವಯುದ್ಧದ ಮುನ್ನುಡಿ ಎನ್ನುವಂತೆ ಕೆಲವರು ಚರ್ಚಿಸುತ್ತಿದ್ದಾರೆ. ಮಧ್ಯಪ್ರಾಚ್ಯದಲ್ಲಿ ಇರಾನ್ ಮತ್ತು ಇಸ್ರೇಲ್ ಯುದ್ಧ ತಾರಕಕ್ಕೇರಿದೆ. ಇರಾನ್ ಮೇಲೆ ಇಸ್ರೇಲ್ ಹಾಗೂ ಅಮೆರಿಕ ನಡೆಸುತ್ತಿವೆ. ದುಬೈ ಪ್ರವಾಸಕ್ಕೆ ಹೋದವರು ಕೂಡ ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಯುದ್ಧದ ಹಿನ್ನೆಲೆಯಲ್ಲಿ ಅಂತರಾಷ್ಟ್ರೀಯ ವಿಮಾನಗಳನ್ನು ರದ್ದು ಮಾಡಲಾಗಿದೆ. ಮಧ್ಯಪ್ರಾಚ್ಯ ವಾಯುಪ್ರದೇಶ ಮುಚ್ಚಿರುವುದರಿಂದ ಕೆಲ ವಿಮಾನಗಳ ಹಾರಾಟದಲ್ಲಿ ವ್ಯತ್ಯಯ ಉಂಟಾಗಿದೆ. ಕೆಲ ಸೆಲೆಬ್ರೆಟಿಗಳು ಇದರಿಂದ ಸಮಸ್ಯೆ ಎದುರಿಸುವಂತಾಗಿದೆ. ಮಾಜಿ ಬಿಗ್‌ಬಾಸ್ ಸ್ಪರ್ಧಿ ಡೋನ್ ಪ್ರತಾಪ್ ಕೂಡ ವಿದೇಶದಲ್ಲಿ ಸಿಲುಕಿಕೊಂಡಿದ್ದಾರೆ. ತೆಲುಗು ನಟ ಮಂಚು ವಿಷ್ಣು ಫ್ಯಾಮಿಲಿ ಸಮೇತ ದುಬೈ ಪ್ರವಾಸದಲ್ಲಿದ್ದು ಯುದ್ಧದ ಭೀಕರತೆಯನ್ನು ಬಿಚ್ಚಿಟ್ಟಿದ್ದಾರೆ.
ಅಬುದಾಬಿಯಿಂದ ಬೆಂಗಳೂರಿಗೆ ಹೊರಟು ಬರಬೇಕಿದ್ದ ಡೋನ್ ಪ್ರತಾಪ್ ವಿಮಾನಗಳು ರದ್ದಾಗಿ ಸಮಸ್ಯೆ ಎದುರಿಸುವಂತಾಗಿದೆ. ಈ ಬಗ್ಗೆ ವಿಡಿಯೋ ಮಾಡಿ ಪ್ರತಾಪ್ ಮಾತನಾಡಿದ್ದಾರೆ. "ನಾನು ಅಬುದಾಬಿ ವಿಮಾನ ನಿಲ್ದಾಣದಲ್ಲಿದ್ದೀನಿ. ಇರಾನ್- ಅಮೆರಿಕಾ ಯುದ್ಧದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದೀವಿ. ಅಬುದಾಬಿಯಿಂದ ಬೆಂಗಳೂರಿಗೆ ಹೊರಡಬೇಕಿದ್ದ ಎಲ್ಲಾ ವಿಮಾನಗಳು ರದ್ದಾಗಿದೆ. ಮುಂದಿನ 12 ಗಂಟೆಗಳ ಕಾಲ ವಿಮಾನ ಹಾರಾಟ ಇಲ್ಲ, ಏನು ಮಾಡಬೇಕೋ ಗೊತ್ತಾಗುತ್ತಿಲ್ಲ" ಎಂದು ಹೇಳಿ ವಿಮಾನ ನಿಲ್ದಾಣದ ಚಿತ್ರಣವನ್ನು ತೋರಿಸಿದ್ದಾರೆ.
ತೆಲುಗು ನಟ ಮಂಚು ವಿಷ್ಣು ಸದ್ಯ ದುಬೈನಲ್ಲಿದ್ದಾರೆ. "ಇಂದು ರಾತ್ರಿ ಫ್ಯಾಮಿಲಿ ಸಮೇತ ದುಬೈ ಪ್ರವಾಸದಲ್ಲಿದ್ದೀನಿ. ಆಕಾಶದಲ್ಲಿ ಗೋಚರಿಸುತ್ತಿರುವ ಕ್ಷಿಪಣಿಗಳು. ಆ ಕ್ಷಿಪಣಿಗಳನ್ನು ಗಾಳಿಯಲ್ಲಿ ಹೊಡೆದುರುಳಿಸುವ ಕ್ಷಿಪಣಿಗಳು, ನಮ್ಮ ಮನೆಯನ್ನು ನಡುಗಿಸುತ್ತಿದ್ದವು. ನಮ್ಮ ಪುಟಾಣಿ ಐರಾಳನ್ನು ಭಯಭೀತಗೊಳಿಸಿದ್ದವು" ಎಂದು ವಿಷ್ಣು ವಿಡಿಯೋ ಮಾಡಿ ಪೋಸ್ಟ್ ಮಾಡಿದ್ದಾರೆ. "ಶಾಂತಿಗಾಗಿ ಪ್ರಾರ್ಥಿಸುತ್ತಿದ್ದೇವೆ. ಯಾವುದೇ ಮಗು ತಮ್ಮ ಛಾವಣಿಯ ಮೇಲೆ ಯುದ್ಧದ ಶಬ್ದವನ್ನು ಕೇಳಿ ಬೆಳೆಯಬಾರದು. ನಾಗರಿಕರನ್ನು ಸುರಕ್ಷಿತವಾಗಿರಿಸಿದ್ದಕ್ಕಾಗಿ ಯುಎಇ ರಕ್ಷಣಾ ಪಡೆಗಳಿಗೆ ಕೃತಜ್ಞತೆಗಳು. ಈ ರೀತಿಯ ಕ್ಷಣಗಳು ಜೀವನವು ನಿಜವಾಗಿಯೂ ಎಷ್ಟು ದುರ್ಬಲವಾಗಿದೆ ಎಂಬುದನ್ನು ನಮಗೆ ನೆನಪಿಸುತ್ತವೆ. ಶಕ್ತಿ ಮತ್ತು ಶಾಂತಿಗಾಗಿ ಪ್ರಾರ್ಥಿಸುತ್ತಿದ್ದೇವೆ. ಹರ್ ಹರ್ ಮಹಾದೇವ್" ಮಂಚು ವಿಷ್ಣು ಬರೆದುಕೊಂಡಿದ್ದಾರೆ.
ಇರಾನ್- ಇಸ್ರೇಲ್ ಯುದ್ಧದ ಹಿನ್ನೆಯಲ್ಲಿ ದುಬೈ ಏರ್‌ಪೋರ್ಟ್ ವಿಮಾನ ಸೇವೆ ಸ್ಥಗಿತವಾಗಿರುವ ಹಿನ್ನೆಲೆಯಲ್ಲಿ ಜೆಡಿಎಸ್ ಎಂಎಲ್‌ಸಿ ಭೋಜೇಗೌಡ ಸಂಕಷ್ಟಕ್ಕೆ ಸಿಲುಕಿದ್ದಾರೆ. ವಿಮಾನಗಳು ರದ್ದಾಗಿ ದುಬೈ ವಿಮಾನದಲ್ಲಿ ಸಿಲುಕಿರುವುದಾಗಿ ವಿಡಿಯೋ ಮಾಡಿ ತಿಳಿಸಿದ್ದಾರೆ.. ದುಬೈ ಪ್ರವಾಸಕ್ಕೆ ಹೋಗಿರುವ ಸಾಕಷ್ಟು ಕನ್ನಡಿಗರು ವಿಮಾನ ಸಂಚಾರ ಇಲ್ಲದೇ ಪರದಾಡುವಂತಾಗಿದೆ. ಪ್ರವಾಸಕ್ಕೆ ಹೋಗಿದ್ದ 51 ಜನ ಹಿರಿಯ ನಾಗರೀಕರು ಶಾರ್ಜಾ ವಿಮಾನ ನಿಲ್ದಾಣದಲ್ಲಿ ಹಣ ಹಾಗೂ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ.