2026-03-07 05:06:46

International Film Festival | 17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ನಮ್‌ ಸಾಲಿ ಚಿತ್ರಕ್ಕೆ ಪ್ರಶಂಸೆ | Speed News Kannada

International Film Festival | 17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ನಮ್‌ ಸಾಲಿ ಚಿತ್ರಕ್ಕೆ ಪ್ರಶಂಸೆ | Speed News Kannada

ಬೆಂಗಳೂರು : ಅನೀಲ್‌ ಕುಮಾರ್‌ ನಿರ್ದೇಶನದಲ್ಲಿ ಮೂಡಿಬಂದಿರುವ ಕನ್ನಡ ಚಿತ್ರ ʼನಮ್‌ ಸಾಲಿʼ, 17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಏಷ್ಯನ್‌, ಭಾರತೀಯ ಮತ್ತು ಕನ್ನಡ ಚಿತ್ರ ಸ್ಪರ್ಧಾ ವಿಭಾಗಗಳಲ್ಲಿ ಪ್ರದರ್ಶನಗೊಂಡಿದ್ದು,  ಚಿತ್ರಕ್ಕೆ ಪ್ರೇಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದ ಬಗ್ಗೆ ಚಿತ್ರತಂಡದವರು ಸಂತಸ ವ್ಯಕ್ತಪಡಿಸಿದರು. 

ಚಿತ್ರದ ಬಗ್ಗೆ ಮಾತನಾಡಿದ ನಿರ್ದೇಶಕ ಅನೀಲ್‌ ರೆವೂರ್, ʼಗ್ರಾಮೀಣ ಶಿಕ್ಷಣದ ಬಿಕ್ಕಟ್ಟು ಮತ್ತು ಸವಾಲುಗಳನ್ನು ಎತ್ತಿಹಿಡಿಯುವ ಕನ್ನಡ ಚಲನಚಿತ್ರವಿದು. ಈ ಚಿತ್ರವು ಪ್ರಮುಖವಾಗಿ ಹಳ್ಳಿಯ ಶಾಲೆಗಳ ಸ್ಥಿತಿಗತಿ ಮತ್ತು ಅಲ್ಲಿನ ಶಿಕ್ಷಣ ವ್ಯವಸ್ಥೆಯನ್ನು ಬಿಂಬಿಸುತ್ತದೆ.  ಈ ಚಿತ್ರವು ಹಳ್ಳಿಗಳಲ್ಲಿನ ಶಾಲಾ ಶಿಕ್ಷಣದ ನೈಜ ಪರಿಸ್ಥಿತಿಯನ್ನು ತಿಳಿಸುತ್ತದೆ. ಈ ಚಿತ್ರಕ್ಕೆ ಚಿತ್ರೋತ್ಸವದಲ್ಲಿ ಮನ್ನಣೆ ಸಿಕ್ಕಿರುವುದು ಬಹಳ ಖುಷಿ ತಂದಿದೆʼ ಎಂದು ಹೇಳಿದರು. 

ಈ ಚಿತ್ರಕ್ಕೆ ಕಥೆ ಬರೆಯುವುದರ ಜೊತೆಗೆ ನಿರ್ಮಾಣವನ್ನು ಮಾಡಿರುವ ಶಂಕರ ಆರ್‌ ಘಂಟಿ, ʼಹಳ್ಳಿಯಲ್ಲಿ ಓದುವ ಮಕ್ಕಳು ನಗರದ ವಿದ್ಯಾರ್ಥಿಗಳ ಜೊತೆ ಸ್ಪರ್ಧಿಸಬೇಕು. ಕಲ್ಯಾಣ ಕರ್ನಾಟಕ ಭಾಗದ ಹಿಂದುಳಿದ ವರ್ಗದ ಮಕ್ಕಳ ಹಕ್ಕು ಹಾಗೂ ಶಿಕ್ಷಣ ವ್ಯವಸ್ಥೆ ಬಗ್ಗೆ ಸೂಕ್ಷ್ಮವಾಗಿ ಮಾಡಿರುವ ಸಿನಿಮಾ ಇದುʼ ಎಂದರು. ʼನಮ್‌ ಸಾಲಿʼ ಎಂಬ ಕಾದಂಬರಿಯನ್ನು ಬರೆದು ಬಳಿಕ ಅದನ್ನೇ ಸಿನಿಮಾ ರೂಪಕ್ಕೆ ತರಲಾಗಿದೆ ಎಂದು ಮಾಹಿತಿ ನೀಡಿದರು. 

ಇದು ಮಕ್ಕಳ ಚಿತ್ರವಾಗಿದ್ದು, ಜೀವನ್‌, ವಿನಯ್‌ ಕುಮಾರ್‌ ಹಾಗೂ ಶ್ರೀಶೈಲ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಜೊತೆಗೆ ಜಹಾಂಗೀರ್‌, ಹನುಮಕ್ಕ ಹಾಗೂ ಮಹದೇವ್‌ ಹಡಪದ್‌ ಪ್ರಮುಖ ಪಾತ್ರದಲ್ಲಿದ್ದಾರೆ. ಚಿತ್ರಕ್ಕೆ ಕರಣ್‌ ಪ್ರಸಾದ್‌ ಹಾಗೂ ಅರುಣ್‌ ಛಾಯಾಗ್ರಹಣ ಮಾಡಿದ್ದು, ಮುನ್ನ ಸಂಗೀತ ನೀಡಿದ್ದಾರೆ.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.