ಪಶ್ಚಿಮ ಏಷ್ಯಾದಲ್ಲಿ ಯುಎಸ್-ಇಸ್ರೇಲ್ ಮತ್ತು ಇರಾನ್ ನಡುವೆ ಯುದ್ಧದ ಕಿಚ್ಚು ಹತ್ತಿಕೊಂಡಿದ್ದರೂ, ಸಮುದ್ರ ಮಾರ್ಗದ ಸಂಚಾರದಲ್ಲಿ ಭಾರತ ತನ್ನ ದಬದಬೆಯನ್ನು ಕಾಯ್ದುಕೊಂಡಿದೆ. ಜಾಗತಿಕ ತೈಲ ವ್ಯಾಪಾರದ ನಾಡಿಮಿಡಿತವಾಗಿರುವ 'ಹೊರ್ಮುಜ್ ಜಲಸಂಧಿ'ಯಲ್ಲಿ ಭಾರತದ ಹಡಗುಗಳು ಯಶಸ್ವಿಯಾಗಿ ಸಂಚರಿಸುತ್ತಿದ್ದು, ಬೇರೆಲ್ಲಾ ದೇಶಗಳಿಗಿಂತ ಭಾರತವೇ ಈ ಮಾರ್ಗದಲ್ಲಿ ಅತಿ ಹೆಚ್ಚು ಹಡಗುಗಳನ್ನು ಮುನ್ನಡೆಸುತ್ತಿದೆ. ಯುಎಸ್ ಮತ್ತು ಇಸ್ರೇಲ್ ದಾಳಿಯ ನಂತರ ಇರಾನ್ ಹೊರ್ಮುಜ್ ಜಲಸಂಧಿಯ ಮೇಲೆ ಕಠಿಣ ನಿರ್ಬಂಧ ಹೇರಿತ್ತು. ಆದರೆ ತನ್ನ ಆಪ್ತ ಮಿತ್ರ ರಾಷ್ಟ್ರಗಳಾದ ಭಾರತ, ರಷ್ಯಾ ಮತ್ತು ಚೀನಾ ಸೇರಿದಂತೆ ಐದು ದೇಶಗಳಿಗೆ ಈ ಮಾರ್ಗವನ್ನು ಮುಕ್ತವಾಗಿರಿಸಿದೆ.
ಇಂದು ಮುಂಜಾನೆ 'ಗ್ರೀನ್ ಸಾನ್ವಿ' ಎಂಬ ಎಲ್‌ಪಿಜಿ ಟ್ಯಾಂಕರ್ ಹೊರ್ಮುಜ್ ಜಲಸಂಧಿಯನ್ನು ಸುರಕ್ಷಿತವಾಗಿ ದಾಟಿ ಭಾರತದತ್ತ ಸಾಗುತ್ತಿದೆ. ಇದರೊಂದಿಗೆ ಈ ಅಪಾಯಕಾರಿ ಮಾರ್ಗವನ್ನು ದಾಟಿದ ಭಾರತದ ಹಡಗುಗಳ ಸಂಖ್ಯೆ 8ಕ್ಕೆ ಏರಿಕೆಯಾಗಿದೆ. ಓಮನ್ ಕೊಲ್ಲಿ ಮತ್ತು ಅರೇಬಿಯನ್ ಸಮುದ್ರದಲ್ಲಿ ಭಾರತೀಯ ನೌಕಾಪಡೆ ವರ್ಷಗಳಿಂದ ಗಸ್ತು ತಿರುಗುತ್ತಿದ್ದು, ಯುದ್ಧದ ಸಂದರ್ಭದಲ್ಲೂ ಭಾರತೀಯ ಹಡಗುಗಳು ಮತ್ತು 485ಕ್ಕೂ ಹೆಚ್ಚು ನಾವಿಕರಿಗೆ ಅಭಯ ನೀಡುತ್ತಿದೆ.
ಐಎನ್ಎಸ್ ಶಿವಾಲಿಕ್, ನಂದಾ ದೇವಿ, ಜಗ್ ಲಾಡ್ಕಿ ಮತ್ತು ಜಗ್ ವಸಂತ ಸೇರಿದಂತೆ ಒಟ್ಟು ಎಂಟು ಹಡಗುಗಳು ಈವರೆಗೆ ಈ ನಿರ್ಣಾಯಕ ಚಾಕ್‌ಪಾಯಿಂಟ್ ಅನ್ನು ದಾಟಿವೆ. ಗಲ್ಫ್ ಪ್ರದೇಶದಲ್ಲಿ ಯುದ್ಧದ ಪರಿಸ್ಥಿತಿ ಉದ್ವಿಗ್ನವಾಗಿದ್ದರೂ, ಭಾರತೀಯ ಹಡಗುಗಳ ಸುರಕ್ಷತೆಯನ್ನು ಖಚಿತಪಡಿಸಲು ನೌಕಾಪಡೆ ಸನ್ನದ್ಧವಾಗಿದೆ ಎಂದು ವಿದೇಶಾಂಗ ಸಚಿವಾಲಯ ದೃಢಪಡಿಸಿದೆ. ಈ ಬೆಳವಣಿಗೆಯು ಇರಾನ್ ಜೊತೆಗಿನ ಭಾರತದ ಗಟ್ಟಿ ರಾಜತಾಂತ್ರಿಕ ಸಂಬಂಧವನ್ನು ಸಾಬೀತುಪಡಿಸಿದೆ.