ಬೆಂಗಳೂರು: ಕೇಂದ್ರ ಬಿಜೆಪಿ ನೇತೃತ್ವದ ಸರ್ಕಾರ ಉತ್ತರ ಭಾರತಕ್ಕೆ ಹೆಚ್ಚು ಮತ್ತು ದಕ್ಷಿಣ ಭಾರತಕ್ಕೆ ಕಡಿಮೆ ಮತ ಕ್ಷೇತ್ರಗಳನ್ನು ಹಂಚಿಕೆ ಮಾಡಲು ಸಂಚು ರೂಪಿಸಿದೆ ಎಂದು ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ. ಮಹದೇವಪ್ಪ ಖಂಡಿಸಿದ್ದಾರೆ.
ಈ ಹುನ್ನಾರವನ್ನು ಒಕ್ಕೂಟ ವ್ಯವಸ್ಥೆಯ ಭಾಗವಾಗಿರುವ ದಕ್ಷಿಣದ ರಾಜ್ಯಗಳು ಖಂಡಿಸಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಮತ ಕ್ಷೇತ್ರಗಳ ಹೆಚ್ಚಳದ ಮಸೂದೆಯನ್ನು ಈಗಾಗಲೇ ಅನುಮೋದಿತವಾಗಿದ್ದ ಮಹಿಳಾ ಮೀಸಲಾತಿ ಮಸೂದೆಯ ಒಳಗಿಟ್ಟು, ದಕ್ಷಿಣದ ರಾಜ್ಯಗಳನ್ನು ಹಣಿಯಲು ಕ್ಷೇಂದ್ರದ ಬಿಜೆಪಿಗರು ಸಂಚು ರೂಪಿಸಿದ್ದರು. ದೇಶದ ಪ್ರಮುಖ ವಿಷಯವಾದ ಮತ ಕ್ಷೇತ್ರಗಳ ಹೆಚ್ಚಳ ಕಾಯ್ದೆಯನ್ನು, ಮುನ್ನಲೆಗೆ ತಾರದೇ, ಒಳಗಿಂದೊಳಗೆಯೇ ಮಾಡುವುದರ ಉದ್ದೇಶ ಏನು ಎನ್ನುವುದನ್ನು ಗಮನಿಸಿದರೆ ಕೇಂದ್ರ ಸರ್ಕಾರ ಮಾಡಲು ಹೊರಟಿರುವುದು ಕುತಂತ್ರ ಎಂದೇ ಅರ್ಥವಾಗುತ್ತದೆ ಎಂದು ಹೇಳಿದ್ದಾರೆ.
ಹೀಗಿರುವಾಗ ಜನಸಂಖ್ಯೆ ಆಧರಿಸಿ ಉತ್ತರದ ರಾಜ್ಯಗಳಿಗೆ ಹೆಚ್ಚಿನ ಚುನಾವಣಾ ಕ್ಷೇತ್ರಗಳನ್ನು ನೀಡಿ, ದಕ್ಷಿಣದ ರಾಜ್ಯಗಳಿಗೆ ಕಡಿಮೆ ಚುನಾವಣಾ ಕ್ಷೇತ್ರಗಳನ್ನು ನೀಡುವ ಹುನ್ನಾರವು ದಕ್ಷಿಣ ಭಾರತ ವಿರೋಧಿ ನಡೆಯಾಗಿದೆ. ತೆರಿಗೆ ಪಾವತಿಯಿಂದ ಹಿಡಿದು, ದೇಶದ ಅಭಿವೃದ್ಧಿಯ ಎಲ್ಲ ಮಗ್ಗುಲುಗಳಲ್ಲೂ ಸಹ ದಕ್ಷಿಣ ಭಾರತದ ರಾಜ್ಯಗಳು ತನ್ನದೇ ಆದ ಮಹತ್ವದ ಕೊಡುಗೆ ನೀಡಿವೆ. ಹೀಗಿರುವಾಗ ದಕ್ಷಿಣದ ರಾಜ್ಯಗಳ ಮೇಲೆ ಸದಾ ತಾರತಮ್ಯ ತೋರುವ ಕೇಂದ್ರದ ಬಿಜೆಪಿ ಸರ್ಕಾರ, ದಕ್ಷಿಣದ ರಾಜ್ಯಗಳ ರಾಜಕೀಯ ಅಸ್ಮಿತೆಗೆ ಕೊಡಲಿ ಪೆಟ್ಟು ನೀಡುತ್ತಿದೆ.
ಇಂತಹ ಪರಿಸ್ಥಿತಿಯಲ್ಲಿ ಜನಸಂಖ್ಯೆಯನ್ನು ಮಾನವ ಸಂಪನ್ಮೂಲವಾಗಿ ಪರಿವರ್ತನೆ ಮಾಡಬೇಕಾದ ಜವಾಬ್ದಾರಿಯನ್ನು ಹೊಂದಿರುವ ಕೇಂದ್ರದ ಬಿಜೆಪಿ ಸರ್ಕಾರವು ಜನಸಂಖ್ಯಾ ನಿಯಂತ್ರಣದ ಬಗ್ಗೆ ಅರಿವು ಮೂಡಿಸಿ, ಸೂಕ್ತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವದನ್ನು ಬಿಟ್ಟು, ಕೇವಲ ಚುನಾವಣಾ ರಾಜಕೀಯದ ದೃಷ್ಟಿಯಿಂದ ತೀರಾ ಅತಾರ್ಕಿಕವಾಗಿ ಮತ ಕ್ಷೇತ್ರಗಳ ಹೆಚ್ಚಳಕ್ಕೆ ಮುಂದಾಗಿರುವುದು ಅತ್ಯಂತ ಕೆಟ್ಟ ಸಂಗತಿಯಾಗಿದೆ.
ಜನಸಂಖ್ಯಾ ನಿಯಂತ್ರಣಕ್ಕಾಗಿ ದೇಶದ ವಿವಿಧ ರಾಜ್ಯಗಳು ಪ್ರಾಮಾಣಿಕವಾಗಿ ಶ್ರಮ ಹಾಕುತ್ತಿದ್ದು ಅದರಲ್ಲಿ ಯಶ ಕಂಡಿವೆ ಕೂಡಾ.. ಈ ಪೈಕಿ ಕೇರಳ ಆದಿಯಾಗಿ ದಕ್ಷಿಣ ಭಾರತದ ರಾಜ್ಯಗಳೇ ಉತ್ತಮ ಸಾಧನೆಯನ್ನು ಮಾಡಿವೆ ಎಂದು ಹೇಳಿದ್ದಾರೆ.