2026-03-07 12:14:23

Income Tax Rules 2026 | ಸುಲಭ ITR ಸಲ್ಲಿಕೆ ಮತ್ತು ನೌಕರರ ಸೌಲಭ್ಯ ಮಾರ್ಗದರ್ಶಿಗಳು ಇಲ್ಲಿದೆ ನೋಡಿ! | Speed News Kannada

Income Tax Rules 2026 | ಸುಲಭ ITR ಸಲ್ಲಿಕೆ ಮತ್ತು ನೌಕರರ ಸೌಲಭ್ಯ ಮಾರ್ಗದರ್ಶಿಗಳು ಇಲ್ಲಿದೆ ನೋಡಿ! | Speed News Kannada

ಆದಾಯ ತೆರಿಗೆ ಇಲಾಖೆಯು 'ಕರಡು ಆದಾಯ ತೆರಿಗೆ ನಿಯಮಗಳು, 2026'ರನ್ನು ಪ್ರಕಟಿಸಿದೆ. ಇದು ಹೊಸ 'ಆದಾಯ ತೆರಿಗೆ ಕಾಯ್ದೆ, 2025'ರ ಅನುಷ್ಠಾನಕ್ಕೆ ಆಧಾರವಾಗಲಿದೆ. ಪ್ರಸ್ತುತ ಕರಡು ರೂಪದಲ್ಲಿದ್ದರೂ, ಈ ನಿಯಮಗಳು ಏಪ್ರಿಲ್ 1, 2026 ರಿಂದ ತೆರಿಗೆದಾರರು ಏನನ್ನು ನಿರೀಕ್ಷಿಸಬಹುದು ಎಂಬ ಸ್ಪಷ್ಟ ಚಿತ್ರಣ ನೀಡುತ್ತವೆ. ಮಧ್ಯಸ್ಥಗಾರರ ಸಮಾಲೋಚನೆ ಬಳಿಕ ನಿಯಮಗಳು ಪರಿಷ್ಕರಣೆಯಾಗಬಹುದು. ಆದಾಯ ಮತ್ತು ಸೌಲಭ್ಯಗಳ ಮೌಲ್ಯಮಾಪನ ಮಾನದಂಡಗಳನ್ನು ಸ್ಪಷ್ಟಪಡಿಸಿ, ಸರಳ ಐಟಿಆರ್ ಸಲ್ಲಿಕೆ ಹಾಗೂ ಊಹಿಸಬಹುದಾದ ಅನುಸರಣೆಗೆ ಒತ್ತು ನೀಡುತ್ತಾ, ಈ ಪ್ರಸ್ತಾವಿತ ನಿಯಮಗಳು ಸುಸಂಘಟಿತ ಮತ್ತು ಸುವ್ಯವಸ್ಥಿತ ತೆರಿಗೆ ವ್ಯವಸ್ಥೆಯತ್ತ ಮಹತ್ವದ ಹೆಜ್ಜೆಯನ್ನು ಸೂಚಿಸುತ್ತವೆ. ಹೊಸ ಕಾನೂನಿನಡಿ ಆದಾಯ ತೆರಿಗೆ ರಿಟರ್ನ್ (ಐಟಿಆರ್) ಸಲ್ಲಿಕೆಯನ್ನು ಸುಲಭಗೊಳಿಸುವುದು ಕರಡು ನಿಯಮಗಳ ಪ್ರಮುಖ ಉದ್ದೇಶ. ವೇತನ, ಸೌಲಭ್ಯ, ಬಂಡವಾಳ ಸ್ವತ್ತು ಮತ್ತು ವಿದೇಶಿ ಆದಾಯಕ್ಕೆ ಸರ್ಕಾರವು ಸೂತ್ರಗಳು, ಮೌಲ್ಯಮಾಪನ ವಿಧಾನಗಳನ್ನು ಮುಂಚಿತವಾಗಿಯೇ ಸ್ಪಷ್ಟಪಡಿಸಿದ್ದು, ಇದು ಗೊಂದಲಗಳನ್ನು ಕಡಿಮೆಗೊಳಿಸಿ ವಿವಾದಗಳನ್ನು ಸೀಮಿತಗೊಳಿಸುತ್ತದೆ.
ನೌಕರರ ಸೌಲಭ್ಯಗಳ ತೆರಿಗೆ ನಿಯಮಗಳು ಸ್ಪಷ್ಟಗೊಂಡಿವೆ. ಉದ್ಯೋಗದಾತರು ನೀಡುವ ಕಂಪನಿ ವಸತಿ, ಕಾರು, ಊಟ, ಉಡುಗೊರೆ, ಕ್ರೆಡಿಟ್ ಕಾರ್ಡ್ ವೆಚ್ಚ ಕ್ಲಬ್ ಸದಸ್ಯತ್ವ ಮತ್ತು ರಿಯಾಯಿತಿ ಸಾಲಗಳಂತಹ ಸೌಲಭ್ಯಗಳನ್ನು ಪ್ರಸ್ತಾವಿತ ಚೌಕಟ್ಟಿನಡಿಯಲ್ಲಿ ಸ್ಪಷ್ಟವಾಗಿ ವ್ಯಾಖ್ಯಾನಿಸಲಾಗಿದೆ.
ಉದ್ಯೋಗದಾತರ ವಸತಿಗೆ ನಗರದ ಜನಸಂಖ್ಯೆ, ನೌಕರರ ವೇತನದ ಆಧಾರದ ಮೇಲೆ ತೆರಿಗೆ. ಕಂಪನಿ ಕಾರು ಬಳಕೆಯನ್ನು ಅಧಿಕೃತ, ವೈಯಕ್ತಿಕ ಅಥವಾ ಮಿಶ್ರಿತ ಎಂದು ವರ್ಗೀಕರಿಸಿ, ತೆರಿಗೆಗೆ ನಿಗದಿತ ಮಾಸಿಕ ಮೌಲ್ಯಗಳನ್ನು ನಿಗದಿಪಡಿಸಲಾಗಿದೆ. ನೌಕರರು ಅಧಿಕೃತ ಬಳಕೆಗೆ ಸಂಬಂಧಿತ ದಾಖಲಾತಿಗಳನ್ನು ಒದಗಿಸಬೇಕು. ಇದು ಕಠಿಣತೆ ಹೆಚ್ಚಿಸಿದರೂ ಅನಿಶ್ಚಿತತೆ ಕಡಿಮೆಗೊಳಿಸುತ್ತದೆ.ಸಾಮಾನ್ಯ ನೌಕರರ ಸೌಲಭ್ಯಗಳ ತೆರಿಗೆ ವಿನಾಯಿತಿ ಮುಂದುವರಿಯಲಿದೆ. ಕೆಲಸದ ಸಮಯದಲ್ಲಿ ನೀಡುವ ಉಚಿತ ಊಟ, ಆಲೋಹಾಲ್ ರಹಿತ ಪಾನೀಯಗಳು ಪ್ರತಿ ಊಟಕ್ಕೆ ₹200 ವರೆಗೆ ತೆರಿಗೆ ಮುಕ್ತ. ಉದ್ಯೋಗದಾತರು ನೀಡುವ ಉಡುಗೊರೆ, ವೋಚರ್, ಅಥವಾ ಟೋಕನ್‌ಗಳ ಒಟ್ಟು ಮೌಲ್ಯ ಆರ್ಥಿಕ ವರ್ಷದಲ್ಲಿ ₹15,000 ಮೀರದಿದ್ದರೆ ತೆರಿಗೆ ರಹಿತ.
ಹೆಚ್ಚುವರಿಯಾಗಿ, ಉದ್ಯೋಗದಾತರಿಂದ ಪಡೆಯುವ ಬಡ್ಡಿ-ರಹಿತ, ರಿಯಾಯಿತಿ ಸಾಲಗಳು ₹2 ಲಕ್ಷದವರೆಗೆ ವಿನಾಯಿತಿ ಪಡೆಯುತ್ತವೆ. ನಿರ್ದಿಷ್ಟ ವೈದ್ಯಕೀಯ ಚಿಕಿತ್ಸೆಯ ಸಾಲಗಳಿಗೂ ಕೆಲವು ಷರತ್ತುಗಳೊಂದಿಗೆ ತೆರಿಗೆ ಪ್ರಯೋಜನಗಳು ಲಭ್ಯ. ಈ ನಿಬಂಧನೆಗಳು, ಸಣ್ಣ ಕೆಲಸದ ಸ್ಥಳದ ಸೌಲಭ್ಯಗಳು ವೇತನದಾರರಿಗೆ ತೆರಿಗೆ ವಿನಾಯಿತಿ ನೀಡುತ್ತವೆ ಎಂಬುದನ್ನು ಖಚಿತಪಡಿಸುತ್ತವೆ.
ಕರಡು ನಿಯಮಗಳು ತೆರಿಗೆ ಲೆಕ್ಕಾಚಾರಗಳನ್ನು ಸರಳೀಕರಿಸಿದರೂ, ಸರಿಯಾದ ದಾಖಲಾತಿಗೂ ಹೆಚ್ಚಿನ ಮಹತ್ವ ನೀಡಿವೆ. ಸೌಲಭ್ಯಗಳ ಮೌಲ್ಯಮಾಪನ ಕೋಷ್ಟಕಗಳು, ಸ್ಪಷ್ಟ ಸೂತ್ರಗಳಿಂದ ವಿವಾದಗಳು ಮತ್ತು ವ್ಯಾಜ್ಯಗಳ ವ್ಯಾಪ್ತಿ ಕನಿಷ್ಠವಾಗಬಹುದು.
ಆದರೆ, ನೌಕರರು ಮತ್ತು ಉದ್ಯೋಗದಾತರಿಬ್ಬರೂ ನಿಖರ ದಾಖಲೆಗಳನ್ನು ನಿರ್ವಹಿಸಬೇಕಾಗುತ್ತದೆ; ವಿಶೇಷವಾಗಿ ಪ್ರಯಾಣದ ಪ್ರೇಮ್ಗಳು, ಕಂಪನಿ ಕಾರು ಬಳಕೆ ಮತ್ತು ಮರುಪಾವತಿಗಳ ಬಗ್ಗೆ ಇದು ಅವಶ್ಯಕ. ಸಂಕ್ಷಿಪ್ತವಾಗಿ, ಅನುಸರಣೆಯು ಹೆಚ್ಚು ಸಂಘಟಿತ ಹಾಗೂ ಊಹಿಸಬಹುದಾದರೂ, ಕಾಗದಪತ್ರಗಳ ಶಿಸ್ತು ಇಲ್ಲಿ ಪ್ರಮುಖವಾಗಿದೆ.
ಅನಿವಾಸಿ ಭಾರತೀಯರಿಗೆ (ಎನ್‌ಆರ್‌ಐಗಳು) ಭಾರತಕ್ಕೆ ಸಂಬಂಧಿಸಿದ ಆದಾಯ ಲೆಕ್ಕಾಚಾರದ ಬಗ್ಗೆ ಸ್ಪಷ್ಟತೆ ಸಿಕ್ಕಿದೆ; ನಿಖರ ಅಂಕಿಅಂಶ ಲಭ್ಯವಿಲ್ಲದಾಗಲೂ ನಿರ್ದಿಷ್ಟ ವಿಧಾನಗಳಿವೆ. "ಗಮನಾರ್ಹ ಆರ್ಥಿಕ ಉಪಸ್ಥಿತಿ" ಮಿತಿಗಳನ್ನು ಸಹ ನಿಯಮಗಳು ವ್ಯಾಖ್ಯಾನಿಸಿದ್ದು, ಇದು ಕೆಲವು ಸಂದರ್ಭಗಳಲ್ಲಿ ತೆರಿಗೆ ವ್ಯಾಪ್ತಿ ವಿಸ್ತರಿಸಬಹುದು.
ಭಾರತೀಯ ನಾವಿಕರಿಗೆ ಇದೇ ಸಮಯದಲ್ಲಿ ಅಗತ್ಯವಿರುವ ಸ್ಪಷ್ಟತೆ ದೊರೆತಿದೆ. ಅರ್ಹ ವಿದೇಶಿ ಪ್ರಯಾಣದಲ್ಲಿ ಕಳೆದ ದಿನಗಳನ್ನು ನಿವಾಸಿ ಸ್ಥಾನಮಾನ ನಿರ್ಧಾರಕ್ಕೆ ಪರಿಗಣಿಸಲಾಗುವುದಿಲ್ಲ ಎಂದು ನಿಯಮಗಳು ಹೇಳುತ್ತವೆ, ಆದರೆ ಅಗತ್ಯ ಪ್ರಮಾಣಪತ್ರಗಳನ್ನು ನಿರ್ವಹಿಸಬೇಕು. ಸಮುದ್ರದಲ್ಲಿ ಕಾರ್ಯನಿರ್ವಹಿಸುವವರ ತೆರಿಗೆ ನಿವಾಸದ ಕುರಿತ ಗೊಂದಲಗಳನ್ನು ಈ ಕ್ರಮವು ಕಡಿಮೆಗೊಳಿಸುತ್ತದೆ.ಇಎಸ್‌ಒಪಿ ಮತ್ತು ಷೇರು ಹೂಡಿಕೆಗಳಿಗೆ ಸ್ಪಷ್ಟ ಮೌಲ್ಯಮಾಪನ ಮಾನದಂಡಗಳಿವೆ. ಕರಡು ನಿಯಮಗಳು ಪಟ್ಟಿ ಮಾಡಿದ ಹಾಗೂ ಪಟ್ಟಿ ಮಾಡದ ಎರಡೂ ಷೇರುಗಳ ಮೌಲ್ಯಮಾಪನಕ್ಕೆ ವಿವರವಾದ ಮಾರ್ಗಸೂಚಿಗಳನ್ನು ಒದಗಿಸುತ್ತವೆ. ನೌಕರರು ಇಎಸ್‌ಒಪಿಗಳನ್ನು ಹೊಂದಿರುವವರಿಗೆ ಮತ್ತು ಹೂಡಿಕೆದಾರರಿಗೆ ಇದು ಮಹತ್ವದ್ದು.
ಮೌಲ್ಯಮಾಪನ ವರದಿ ಅಗತ್ಯವಿರುವ ಸಂದರ್ಭಗಳನ್ನು ನಿಯಮಗಳು ಸ್ಪಷ್ಟಪಡಿಸಿವೆ. ನ್ಯಾಯಯುತ ಮಾರುಕಟ್ಟೆ ಮೌಲ್ಯ (ಎಫ್‌ಎಂವಿ) ಹೇಗೆ ನಿರ್ಧಾರವಾಗುತ್ತದೆ ಎಂಬುದನ್ನು ಸಹ ಇವು ವಿವರಿಸಿವೆ. ಇದು ಷೇರು ಆಯ್ಕೆಗಳನ್ನು ಚಲಾಯಿಸುವ ಸಮಯದಲ್ಲಿನ ತೆರಿಗೆ ಹೊಣೆಗಾರಿಕೆಯನ್ನು ನೇರವಾಗಿ ಬಾಧಿಸಬಹುದು.
ಇವು ಕರಡು ನಿಯಮಗಳಾಗಿದ್ದರೂ, ಅಂತಿಮ ಅಧಿಸೂಚನೆಗೂ ಮೊದಲು ಪರಿಷ್ಕರಣೆಗೆ ಒಳಪಡಬಹುದು ಎಂಬುದನ್ನು ನೆನಪಿಡಬೇಕು. ಆದರೂ, ಇಂತಹ ಕಾರ್ಯವಿಧಾನದ ನಿಬಂಧನೆಗಳು ಸಾಮಾನ್ಯವಾಗಿ ಅಂತಿಮಗೊಂಡ ನಂತರ ಸೀಮಿತ ಬದಲಾವಣೆಗಳನ್ನು ಮಾತ್ರ ಕಾಣುತ್ತವೆ.
ಭಾರತದಲ್ಲಿ ಏಪ್ರಿಲ್ 1 ರಿಂದ ಹೊಸ ತೆರಿಗೆ ವ್ಯವಸ್ಥೆ ಜಾರಿಗೆ ಬರಲಿದೆ. 60 ವರ್ಷಗಳಿಗೂ ಹೆಚ್ಚು ಹಳೆಯದಾದ 1961ರ ಆದಾಯ ತೆರಿಗೆ ಕಾಯ್ದೆಯನ್ನು ಹೊಸ 'ಆದಾಯ ತೆರಿಗೆ ಕಾಯ್ದೆ, 2025' ಬದಲಿಸಲಿದೆ. ಈ ಮೂಲಕ ಭಾರತವು ಹೊಸ ತೆರಿಗೆ ವ್ಯವಸ್ಥೆಯನ್ನು ಸ್ವಾಗತಿಸಲು ಸಜ್ಜಾಗಿದೆ.
ಆದಾಯ ತೆರಿಗೆ ಇಲಾಖೆಯು ಕರಡು ಆದಾಯ ತೆರಿಗೆ ನಿಯಮಗಳು, 2026 ಮತ್ತು ಸಂಬಂಧಿತ ನಮೂನೆಗಳ ಮೇಲೆ ಫೆಬ್ರವರಿ 22 ರವರೆಗೆ ಮಧ್ಯಸ್ಥಗಾರರ ಪ್ರತಿಕ್ರಿಯೆಗಳನ್ನು ಆಹ್ವಾನಿಸಿದೆ. ಇದರ ನಂತರ, ಹೊಸ ಕಾನೂನಿನ ಅಡಿಯಲ್ಲಿ ಅಂತಿಮ ನಿಯಮಗಳು ಮತ್ತು ನಮೂನೆಗಳನ್ನು ಅಧಿಸೂಚಿಸಲಾಗುವುದು.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.