2026-05-17 10:40:46

ನಿಯಮಬಾಹಿರ ಹಣಸಂಗ್ರಹ: ಶಿವಾನಂದ ನೀಲಣ್ಣವರ ಬಂಧನ |Speed News Kannada

ನಿಯಮಬಾಹಿರ ಹಣಸಂಗ್ರಹ: ಶಿವಾನಂದ ನೀಲಣ್ಣವರ ಬಂಧನ |Speed News Kannada

ಬೆಳಗಾವಿ: ಅನಧಿಕೃತ ಬಡ್ಡಿ ವ್ಯವಹಾರ ಆರೋಪ ನಡೆಸಿದ ಆರೋಪದಡಿಯಲ್ಲಿ ಬೆಳಗಾವಿಯ ಶಿವಂ ಅಸೋಸಿಯೇಟ್ಸ್ ಪ್ರವರ್ತಕ ಶಿವಾನಂದ ನೀಲಣ್ಣವರ ವಿರುದ್ಧ ಎಫ್ಐಆರ್ ದಾಖಲಿಸಿ ಬಂಧಿಸಲಾಗಿದೆ.

ಈತ ಸುಮಾರು 35 ಸಾವಿರ ಸಾರ್ವಜನಿಕರಿಂದ ಸಾವಿರಾರು ಕೋಟಿ ರೂ. ಠೇವಣಿ ಸಂಗ್ರಹಿಸಿರುವುದಾಗಿ ತಿಳಿದು ಬಂದಿದೆ. ಆದರೆ ಆರ್‌ಬಿಐ ನಿಯಮಗಳ ಪ್ರಕಾರ ಯಾವುದೇ ವಹಿವಾಟು ನಡೆದಿಲ್ಲ. ಮುಂಜಾಗೃತಾ ಕ್ರಮವಾಗಿ ಉಪವಿಭಾಗಾಧಿಕಾರಿ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ. ಅವರ ವಿಚಾರಣೆಯನ್ನು ಮುಂದುವರೆಸಲಾಗುವುದು ಎಂದು ಎಂದು ನಗರ ಪೊಲೀಸ್‌ ಕಮಿಷನರ್‌ ಭೂಷಣ ಬೊರಸೆ ತಿಳಿಸಿದ್ದಾರೆ.

ಶಿವಾನಂದ ನೀಲಣ್ಣನವರ್‌ 35 ಸಾವಿರ ಜನರಿಂದ ವಾರ್ಷಿಕ ಶೇ. 36 ರಷ್ಟು ಬಡ್ಡಿ ನೀಡುವ ಆಮಿಷವೊಡ್ಡಿ ಸುಮಾರು 4,500 ಕೋಟಿ ರೂ.ಗಳನ್ನು ಸಂಗ್ರಹಿಸಿರುವುದು ಪ್ರಾಥಮಿಕ ಮಾಹಿತಿಯಿಂದ ತಿಳಿದು ಬಂದಿದೆ. ಆದರೆ ಈ ಹಣವನ್ನು ಎಲ್ಲಿ ಯಾವ ಉದ್ದೇಶಕ್ಕೆ ಬಳಸಲಾಗಿದೆ. ಬ್ಯಾಂಕ್‌ ವಹಿವಾಟು ಮತ್ತು ನಗದು ರೂಪದಲ್ಲಿ ಎಷ್ಟು ಹಣ ಸಂಗ್ರಹಿಸಲಾಗಿದೆ ಎಂಬ ಮಾಹಿತಿ ತಿಳಿದು ಬಂದಿಲ್ಲ.

ಯಾರು ಶಿವಾನಂದ ನೀಲಣ್ಣನವರ್‌?:

ಶಿವಾನಂದ ನೀಲಣ್ಣವರ್‌ ಹುಬ್ಬಳ್ಳಿ ಮೂಲದ ನಿವಾಸಿ. ಆತನ ತಂದೆ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಬಳಿಕ ಕೆಇಬಿಯಲ್ಲಿ ಕೆಲಸ ಮಾಡುತ್ತಿರುವಾಗಲೇ ಮರಣ ಹೊಂದಿದ್ದರು. ಇವರ ಕೆಲಸ ಶಿವಾನಂದ ಸಹೋದರನಿಗೆ ಸಿಕ್ಕಿತ್ತು. ಬೆಳಗಾವಿಯಲ್ಲಿ ಕೆಲಸ ಸಿಕ್ಕಿದ್ದರಿಂದ ಇವರ ಕುಟುಂಬಬೆಳಗಾವಿಗೆ ಬಂದು ನೆಲೆಸಿತ್ತು. ಆರಂಭದಲ್ಲಿ ಶಿವಾನಂದ ರೂರಲ್‌ ಮೆಡಿಕಲ್‌ ಕಾಲೇಜಿನಲ್ಲಿ ಉದ್ಯೋಗ ಮಾಡುತ್ತಿದ್ದ. ನಂತರ ಆಟೋದಲ್ಲಿ ಐಸ್‌‍ಕ್ರೀಂ ಮಾರುತ್ತಿದ್ದ. ಅಂತಿಮವಾಗಿ ಆತನೇ ಐಸ್‌‍ಕ್ರೀಂ ಫ್ಯಾಕ್ಟರಿ ಕೂಡಾ ತೆರೆದಿದ್ದ. 2012 ರಿಂದ ಸ್ಟಾಕ್‌ ಮಾರ್ಕೆಟ್‌ನಲ್ಲಿ ಹಣ ಹೂಡಿಕೆ ಮಾಡಿ 15 ಲಕ್ಷ ಕಳೆದುಕೊಂಡಿದ್ದ ಈತ  ಅಕ್ಯೂಮೆನ್‌ ಎಂಬ ಆ್ಯಪ್‌ ಪ್ರಾರಂಭಿಸಿ ಸಾವಿರಾರು ಕೋಟಿ ಹಣ ಸಂಪಾದಿಸಿದ್ದಾನೆ ಎಂದು ಹೇಳಲಾಗುತ್ತಿದೆ.

ಶಿವಾನಂದ ನೀಲಣ್ಣನವರ್‌ ಇತ್ತೀಚೆಗೆ ಕಡೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾಡಿದ ಭಾಷಣದಲ್ಲಿ  ನಾನು ಮುಖ್ಯಮಂತ್ರಿಯಾಗುತ್ತೇನೆ. 224 ಕ್ಷೇತ್ರಗಳಲ್ಲೂ ನನ್ನ ಬೆಂಬಲಿಗರನ್ನು ಗೆಲ್ಲಿಸಿಕೊಂಡು ಬರುವ ಶಕ್ತಿ ನನಗಿದೆ. 15 ಸಾವಿರ ಬಂದೂಕುಗಳು ನನ್ನ ಬಳಿ ಇವೆ ಎಂದು ಹೇಳಿದ್ದ.

ಈತ 2020ರಿಂದಲೂ ಶಿವಂ ಅಸೋಸಿಯೇಟ್ಸ್ ಹೆಸರಿನಲ್ಲಿ ಹಣ ಸಂಗ್ರಹಿಸುತ್ತಿದ್ದರೂ ಅಧಿಕಾರಿಗಳು ಏಕೆ ಕಣ್ಣು ಮುಚ್ಚಿ ಕುಳಿತಿದ್ದರು ಎಂಬ ಅನುಮಾನ ಕಾಡತೊಡಗಿದೆ.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.