ಚಂಡೀಗಢ: ಐಡಿಎಫ್‌ಸಿ ಫಸ್ಟ್ ಬ್ಯಾಂಕ್ ನ ಚಂಡೀಗಡ ಶಾಖೆಯಲ್ಲಿ ರೂ.590 ಕೋಟಿ ವಂಚನೆ ಕುರಿತು ತನಿಖೆ ನಡೆಸುವಂತೆ ಹರಿಯಾಣ ಮುಖ್ಯಮಂತ್ರಿ ನಯಬ್ ಸಿಂಗ್ ಸೈನಿ ತಿಳಿಸಿದ್ದಾರೆ.
ಪ್ರಸ್ತುತ ನಡೆಯುತ್ತಿರುವ ಬಜೆಟ್ ಅಧಿವೇಶನದಲ್ಲಿ ಪ್ರತಿಪಕ್ಷ ಕಾಂಗ್ರೆಸ್, ಹಗರಣವನ್ನು ಪ್ರಸ್ತಾಪಿಸಿದಾಗ ಉತ್ತರಿಸಿದ ಸೈನಿ ತನಿಖೆಗೆ ಆದೇಶಿಸಲಾಗಿದೆ. ರಾಜ್ಯ ಭ್ರಷ್ಟಾಚಾರ ನಿಗ್ರಹ ದಳ ಮತ್ತು ವಿಚಕ್ಷಣಾ ದಳ ಪ್ರಕರಣದ ತನಿಖೆ ನಡೆಸುತ್ತಿದೆ ಎಂದು ಉತ್ತರಿಸಿದರು.
ಬ್ಯಾಂಕ್ ಉದ್ಯೋಗಿ ಅಥವಾ ಸರ್ಕಾರಿ ಉದ್ಯೋಗಿ ಯಾರೇ ಪ್ರಕರಣದಲ್ಲಿ ಭಾಗಿಯಾಗಿದ್ದರೂ ಅವರನ್ನು ಶಿಕ್ಷಿಸದೆ ಬಿಡುವುದಿಲ್ಲ. ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಆರ್‌ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ಅವರು ಕೇಂದ್ರ ಸರ್ಕಾರ ಬ್ಯಾಂಕ್ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆದ್ದು, ಯಾವುದೇ ಅಪಾಯವಿಲ್ಲ ಎಂದು ಭರವಸೆ ನೀಡಿದ್ದಾರೆ.
ಐಡಿಎಫ್ಸಿ ಫಸ್ಟ್ ಬ್ಯಾಂಕ್ನ ಚಂಢೀಗಡ ಶಾಖೆಯ ಸಿಬ್ಬಂದಿ ವಂಚನೆ ಎಸಗಿರುವ ಆರೋಪ ಕೇಳಿಬಂದಿದೆ. ಹರಿಯಾಣ ರಾಜ್ಯ ಸರ್ಕಾರಕ್ಕೆ ಸಂಬಂಧಿಸಿದ ಸಂಸ್ಥೆಗಳ ಅಕೌಂಟ್ ಗಳಲ್ಲಿ ಅನಧಿಕೃತ ವಹಿವಾಟುಗಳು ನಡೆದಿರುವುದು ಬೆಳಕಿಗೆ ಬಂದಿದೆ. ಈ ಅಕೌಂಟ್ಗಳನ್ನು ಮುಚ್ಚಲು ಹೋದಾಗ ಅಕೌಂಟ್ ಬ್ಯಾಲನ್ಸ್ನಲ್ಲಿ ವ್ಯತ್ಯಾಸ ಕಂಡು ಬಂದಿತ್ತು. ಆಗ ಒಟ್ಟು 590 ಕೋಟಿ ರೂ ಹಣಕಾಸು ಅಕ್ರಮ ನಡೆದಿರುವುದು ಬೆಳಕಿಗೆ ಬಂದಿದೆ.