ಆನೇಕಲ್: ಪತಿ- ಪತ್ನಿ ಜಗಳ ತಾರಕಕ್ಕೇರಿ ಪತ್ನಿಯ ಕೊಲೆ ಮಾಡಿ ಪತಿಯ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಆನೇಕಲ್ ತಾಲೂಕಿನ ಸೂರ್ಯನಗರ ಠಾಣಾ ವ್ಯಾಪ್ತಿಯ ಹೀಲಲಿಗೆ ಗ್ರಾಮದಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಒಡಿಶಾ ಮೂಲದ ದೀಪಾಂತ ಸಬರ(31) ಮತ್ತು ಆತನ ಪತ್ನಿ ಮಂಜುಳಾ ಸಬರ(27) ಮೃತರಾಗಿದ್ದಾರೆ. 20 ದಿನದಿಂದಷ್ಟೇ ದಂಪತಿ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಬೊಮ್ಮಸಂದ್ರದ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಪತಿ ದೀಪಾಂತ ಹಾಗೂ ಪತ್ನಿ ಮಂಜುಳಾ ನಡುವೆ ಜಗಳ ಉಂಟಾಗಿದ್ದು, ಕೋಪದಲ್ಲಿ ಪತ್ನಿಯನ್ನು ಕೊಲೆ ಮಾಡಿರಬಹುದೆಂಬ ಶಂಕೆಯೂ ವ್ಯಕ್ತವಾಗಿದೆ. ಬಳಿಕ ಆತನು ಕೂಡ ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಮನೆ ಮಾಲೀಕ ಶಿವಕುಮಾರ್ 20 ದಿನದ ಹಿಂದೆ ದಂಪತಿಗೆ ಬಾಡಿಗೆ ಮನೆ ಕೊಟ್ಟಿದ್ದರು. ಗುರುವಾರ ರಾತ್ರಿ ಶಿವಕುಮಾರ್ ತಾಯಿ ಚೌಡಮ್ಮ ಮನೆ ಬಳಿ ನೋಡಿದಾಗ ಮಂಚದ ಮೇಲೆ ಮಹಿಳೆ ಶವ ಕಾಣಿಸಿದೆ. ಕೂಡಲೇ ಸೂರ್ಯ ನಗರ ಪೊಲೀಸರಿಗೆ ಶಿವಕುಮಾರ್ ಮಾಹಿತಿ ನೀಡಿದ್ದಾರೆ.
ಪತ್ನಿ ಶವದ ಮುಂದೆ ಪತಿ ಅಳುತ್ತಲೇ ಸೆ ವಿಡಿಯೋ ಮಾಡಿ ಆನಂತರ ನೇಣಿಗೆ ಶರಣಾಗಿರುವುದು ಪೊಲೀಸರಿಗೆ ಸಿಕ್ಕ ಮೊಬೈಲ್‌ನಲ್ಲಿ ಬೆಳಕಿಗೆ ಬಂದಿದೆ. ಅಲ್ಲದೆ ಒಡಿಶಾ ಭಾಷೆಯಲ್ಲಿ ಡೆತ್ ನೋಟ್ ಬರೆದಿಟ್ಟು ನೇಣಿಗೆ ಶರಣಾಗಿದ್ದಾನೆ. ಸ್ಥಳಕ್ಕೆ ಬಂದ ಸೂರ್ಯನಗರ ಪೊಲೀಸರು ಮನೆಯ ಬಾಗಿಲು ಮುರಿದು ನೋಡಿದಾಗ ಪತಿಯೂ ಆತ್ಮಹತ್ಯೆ ಮಾಡಿಕೊಂಡಿರುವುದು ಮತ್ತು ಮಂಚದ ಮೇಲೆ ಪತ್ನಿ ಕೊಲೆಯಾಗಿರುವುದು ಗೊತ್ತಾಗಿದೆ. ಸೂರ್ಯ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಎರಡು ದಿನದ ಹಿಂದೆ ಘಟನೆ ನಡೆದಿರುವ ಸಾಧ್ಯತೆ ಇದ್ದು, ಮೃತ ದೇಹಗಳು ಕೊಳೆಯುವ ಸ್ಥಿತಿಗೆ ಬಂದಿದ್ದವು. ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಸ್ಥರಿಗೆ ದೇಹಗಳನ್ನು ಹಸ್ತಾಂತರಿಸಲಾಗಿದೆ. ಡಿವೈಎಸ್‌ಪಿ ಮಲ್ಲೇಶ್ ಗೌಡ, ಸೂರ್ಯ ನಗರ ಠಾಣೆಯ ಇನ್‌ಸ್ಪೆಕ್ಟರ್ ಸಂಜೀವ್ ಮಹಾಜನ್ ಸ್ಥಳ ಪರಿಶೀಲನೆ ನಡೆಸಿದರು.
ಯುವಕನ ಕತ್ತು ಕೊಯ್ದು ಶವ ಬಿಸಾಕಿದ್ರು: ಯುವಕನ ಕತ್ತು ಕೊ*ಯ್ದು ಕ್ರೂರವಾಗಿ ಹತ್ಯೆ ಮಾಡಿರುವ ಘಟನೆ ಗದಗ ತಾಲೂಕಿನ ಶಿಗ್ಲಿ ಗ್ರಾಮದಲ್ಲಿ ನಡೆದಿದೆ. ಮೊಹಮ್ಮದ್ ಫಾರೂಕ್ ಶೇಖ್ ಸನದಿ (25) ಕೊಲೆಯಾದ ಯುವಕ.
ಈತ ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಹರ್ಲಾಪುರ ಗ್ರಾಮದವನಾಗಿದ್ದು, ಸದ್ಯ ಶಿಗ್ನಿ ಗ್ರಾಮದಲ್ಲಿ ವಾಸವಿದ್ದನು. ಹಂತಕರು ಶುಕ್ರವಾರ ರಾತ್ರಿ ಯುವಕನನ್ನು ಕೊಲೆ ಮಾಡಿ ಶವವನ್ನು ಹೊಲದಲ್ಲಿ ಬಿಸಾಡಿ ಹೋಗಿದ್ದಾರೆ. ಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.