ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ನಗರದಲ್ಲಿ ಪತ್ನಿಯ ಕಿರುಕುಳಕ್ಕೆ ಬೇಸತ್ತು ಪತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.ಆತ್ಮಹತ್ಯೆಗೆ ಶರಣಾದ ವ್ಯಕ್ತಿಯನ್ನು ರಾಘವೇಂದ್ರ ವಾಡಕರ್ ಎಂದು ಗುರುತಿಸಲಾಗಿದೆ. ಸಾವಿಗೂ ಮುನ್ನ ಅವರು ಬರೆದಿದ್ದ ಡೆತ್ ನೋಟ್‌ನಲ್ಲಿ ಪತ್ನಿಯ ಕಿರುಕುಳವೇ ಕಾರಣ ಎಂದು ಉಲ್ಲೇಖಿಸಿದ್ದಾರೆ ಎಂದು ತಿಳಿದುಬಂದಿದೆ.
ಮೂರು ವರ್ಷಗಳಿಂದ ಮಲೇಷಿಯಾದಲ್ಲಿ ಕೆಲಸ ಮಾಡುತ್ತಿದ್ದ ರಾಘವೇಂದ್ರ, ಒಂದು ವಾರದ ಹಿಂದೆ ದಾಂಡೇಲಿಗೆ ಮರಳಿದ್ದರು. ಈ ವೇಳೆ ಅವರ ಪತ್ನಿ ಇಬ್ಬರು ಮಕ್ಕಳೊಂದಿಗೆ ತವರು ಮನೆಗೆ ತೆರಳಿ, ಸಂಸಾರ ಮುಂದುವರಿಸಲು ನಿರಾಕರಿಸಿದ್ದಾಳೆ ಎಂಬ ಮಾಹಿತಿ ಇದೆ.ಪತ್ನಿಯು ಬೇರೆ ವ್ಯಕ್ತಿಯೊಂದಿಗೆ ಇರುವ ಫೋಟೋಗಳನ್ನು ಕಳುಹಿಸುವುದು, ವಾಟ್ಸಾಪ್ ಸ್ಟೇಟಸ್ ಮೂಲಕ ಮಾನಸಿಕ ಕಿರುಕುಳ ನೀಡುವುದು ಸೇರಿದಂತೆ ಹಲವು ಆರೋಪಗಳು ಕೇಳಿಬಂದಿವೆ.ಸಂಸಾರ ನಡೆಸುವಂತೆ ಮನವಿ ಮಾಡಿದರೂ ಪತ್ನಿ ಒಪ್ಪದ ಹಿನ್ನೆಲೆಯಲ್ಲಿ ರಾಘವೇಂದ್ರ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ವರದಿಯಾಗಿದೆ. ಈ ಕುರಿತು ದಾಂಡೇಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.