2026-05-23 01:39:47

ಸಂಪೂರ್ಣ ಒಳ ಮೀಸಲಾತಿ ಜಾರಿಗೆ ಆಗ್ರಹಿಸಿ ಬೃಹತ್ ಪ್ರತಿಭಟನಾ ಸಮಾವೇಶ: ಎನ್‌ ಮೂರ್ತಿ| Speed News Kannada

ಸಂಪೂರ್ಣ ಒಳ ಮೀಸಲಾತಿ ಜಾರಿಗೆ ಆಗ್ರಹಿಸಿ ಬೃಹತ್ ಪ್ರತಿಭಟನಾ ಸಮಾವೇಶ: ಎನ್‌ ಮೂರ್ತಿ| Speed News Kannada

 ಬೆಂಗಳೂರು:  ಸಂಪೂರ್ಣ ಒಳ ಮೀಸಲಾತಿ ಜಾರಿಗೆ ಒತ್ತಾಯಿಸಿ ಮಾದಿಗ ಸಂಘಟನೆಗಳ ಒಕ್ಕೂಟದಿಂದ ಬೃಹತ್ ಪ್ರತಿಭಟನಾ ಸಮಾವೇಶ ಹಮ್ಮಿಕೊಳ್ಳಲಾಗಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ  ದಲಿತ ಸಂಘರ್ಷ ಸಮಿತಿ ರಾಜ್ಯಾಧ್ಯಕ್ಷ ಎನ್.ಮೂರ್ತಿ,  ಸಂಪೂರ್ಣ ಒಳಮೀಸಲಾತಿ ಜಾರಿಗೆ ಆಗ್ರಹಿಸಿ, ರೋಸ್ಟರ್ ಬಿಂದು ಮಾರ್ಪಡಿಸಲು, ಬಡ್ತಿ, ಮುಂಬಡ್ತಿ ಎಸ್ ಸಿ ಪಿ, ಟಿಎಸ್ ಪಿ ಹಾಗೂ ಮೀಸಲಾತಿ ಇರುವಲ್ಲೆಲ್ಲಾ ಒಳ ಮೀಸಲಾತಿ ಅಳವಡಿಸಲು ಒತ್ತಾಯಿಸಿ ಪ್ರತಿಭಟನೆ ನಡೆಸಲು ಉದ್ದೇಶಿಸಲಾಗಿದೆ ಎಂದರು.

ಒಳಮೀಸಲಾತಿಗಾಗಿ 35 ವರ್ಷಗಳ ಚರಿತ್ರಾರ್ಹ ಹೋರಾಟ ನಡೆಸಿಕೊಂಡು ಬಂದ ಮಾದಿಗ ಮತ್ತು ಮಾದಿಗ ಸಂಬಂಧಿತ ಜಾತಿಗಳು ಒಟ್ಟಿಗೆ ರಚಿಸಿಕೊಂಡಿರುವ "ಮಾದಿಗ ಸಂಘಟನೆಗಳ ನೇತೃತ್ವದಲ್ಲಿ ಇದೇ27 ರಂದು ಪ್ರೀಡಂ ಪಾರ್ಕ್‌ ನಲ್ಲಿ "ಬೃಹತ್ ಪ್ರತಿಭಟನಾ ಧರಣಿ" ನಡೆಸಲು ತೀರ್ಮಾನಿಸಿದೆ ಎಂದರು.

ನಾಗಮೋಹನ್‌ದಾಸ್ ಹಾಗೂ ಜೆ.ಸಿ.ಮಾಧುಸ್ವಾಮಿ ವರದಿಯನ್ನು ಸರ್ಕಾರ ತಳ್ಳಿ ಹಾಕಿ ಒಳಮೀಸಲಾತಿ ವಿರೋಧಿಗಳ ಒತ್ತಡಕ್ಕೆ ಮಣಿದು ಬೀಸೋ ದೊಣ್ಣೆ ಏಟಿಗೆ ತಪ್ಪಿಸಿಕೊಳ್ಳಲು ಒಳಮೀಸಲಾತಿ ಜಾರಿಗೆ ತಂದಿರುವುದಾಗಿ ಬೀಗುತ್ತಿದೆ. ಇದು ರಾಜಕೀಯ ತಂತ್ರಗಾರಿಕೆಯ ಅವೈಜ್ಞಾನಿಕ ಒಳಮೀಸಲಾತಿಯಾಗಿದೆ ಎಂದರು.

 ಒಳಮೀಸಲಾತಿ ಜಾರಿಗೊಳಿಸಿ ಹೊರಡಿಸಿರುವ ಅಧಿಸೂಚನೆ ಕಾನೂನು ಬಾಹಿರ ಹಾಗೂ ಅವೈಜ್ಞಾನಿಕ ‌ ಮತ್ತು ಗೊಂದಲದ ಗೂಡಾಗಿದೆ ಹಾಗೂ ಒಳಮೀಸಲಾತಿಯ ಉದ್ದೇಶ ವಿಫಲವಾಗಿದೆ. 3 ಕ್ಕಿಂತ ಕಡಿಮೆ ರೋಸ್ಟರ್ ಹುದ್ದೆಗಳು ಲಭ್ಯವಾಗುತ್ತಿದ್ದಲ್ಲಿ ಪರಿಶಿಷ್ಟ 101 ಜಾತಿಗಳು ಈ ಹುದ್ದೆಗೆ ಸ್ಪರ್ಧಿಸಬೇಕು ಎಂದು ಆದೇಶಿಸಿದೆ. ಇದು ಒಳಮೀಸಲಾತಿ ಅನ್ವಯಿಸುವುದಿಲ್ಲ.ಹೀಗಾಗಿ ಪರಿಶಿಷ್ಟ ಜಾತಿಗಳಿಗೆ 3 ಕ್ಕಿಂತ ಹೆಚ್ಚು ಹುದ್ದೆಗಳು ಲಭ್ಯವಿದ್ದರೆ ಮಾತ್ರ ಒಳಮೀಸಲಾತಿ ಕಲ್ಪಿಸಲು ಸೂಚಿಸಿದೆ.ಪರಿಶಿಷ್ಟ ಜಾತಿಯ ಎಬಿಸಿ ಗುಂಪುಗಳಿಗೆ ರೋಸ್ಟರ್ ಸಂಖ್ಯೆ 1,9,15 ಬಿಂದುಗಳು ಲಭ್ಯವಾಗದಿದ್ದರೆ 101 ಪರಿಶಿಷ್ಟ ಜಾತಿಗಳಲ್ಲಿ ಸ್ಪರ್ಧಿಸಲು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

 ಬಿ ಮತ್ತು ಸಿ ಈ ಬಲಿಷ್ಟ ಜಾತಿಗಳೊಂದಿಗೆ ಮಾದಿಗ ಸಮುದಾಯ ಮತ್ತು ಅಲೆಮಾರಿ ಜಾತಿಗಳು ಸ್ಪರ್ಧಿಸಿ ತನ್ನ ಪಾಲು ಪಡೆಯಲು ಸಾಧ್ಯವಿಲ್ಲ. ಈಗಾಗಿ ಪರಿಶಿಷ್ಟ ಜಾತಿಗಳಿಗೆ ಮೀಸಲಿರಿಸಿರುವ ಬಹುತೇಕ ಹುದ್ದೆಗಳು ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ಬಲಾಡ್ಯರಾಗಿರುವ ಪರಿಶಿಷ್ಟ ಜಾತಿಗಳ ಪಾಲಾಗುವಂತೆ ಹುನ್ನಾರ ನಡೆಸಲಾಗಿದೆ ಎಂದು ಮೂರ್ತಿ ಆರೋಪಿಸಿದರು.

 

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.