ಬೆಂಗಳೂರು: ಇರಾನ್ ಇರಾಕ್ ಯುದ್ಧ ಆರಂಭಗೊಂಡ ಬಳಿಕ ಮೂರನೇ ಬಾರಿಗೆ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ದರವನ್ನು ಪ್ರತಿ ಸಿಲಿಂಡರ್ ಗೆ 993 ರೂ ಹೆಚ್ಚಳ ಮಾಡಲಾಗಿದೆ. ಈ ಹಿಂದೆ ಕಳೆದ ತಿಂಗಳು ಮಾರ್ಚ್‌ನಲ್ಲಿ 144 ರೂ, ಏಪ್ರಿಲ್‌ನಲ್ಲಿ 200 ರೂ ಹೆಚ್ಚಳ ಮಾಡಲಾಗಿತ್ತು. ಕೇಂದ್ರ ಸರ್ಕಾರದ ಈ ಕ್ರಮಕ್ಕೆ ದೇಶಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ರಾಜ್ಯ ಮತ್ತು ಬೆಂಗಳೂರಿನಲ್ಲೂ ಹೋಟೆಲ್ ಮಾಲೀಕರು ಸಿಡಿದೆದ್ದಿದ್ದಾರೆ. ಹಳೆಯ ದರವನ್ನೇ ಮುಂದುವರೆಸುವಂತೆ ಅವರು ಒತ್ತಾಯಿಸಿದ್ದಾರೆ.
ಸಿಲಿಂಡರ್ ಗಳನ್ನು ಬ್ಲಾಕ್ ಮಾರ್ಕೆಟ್ನಲ್ಲಿ ಮಾರಾಟ ಮಾಡುವುದನ್ನು ತಡೆಯಬೇಕು. ಹಳೆಯ ದರ ಏರಿಕೆಯಿಂದಲೇ ಚೇತರಿಸಿಕೊಳ್ಳಲು ಸಾಧ್ಯವಾಗಿಲ್ಲ. ಸಿಲಿಂಡರ್ ಅಭಾವ ಇನ್ನೂ ನಿಂತಿಲ್ಲ. ಈಗ ಏಕಾಏಕಿ ದರ ಏರಿಕೆ ಮಾಡಿದ್ದು ಸರಿಯಲ್ಲ. ಮತ್ತೆ ಗ್ರಾಹಕರ ಮೇಲೆ ಹೊರೆ ಹಾಕಬೇಕಾದ ಅನಿವಾರ್ಯತೆ ಉಂಟಾಗುತ್ತದೆ ಎಂದಿದ್ದಾರೆ.
ಒಮ್ಮೆಲೆ ಶೇ.45-50ರಷ್ಟು ದರ ಏರಿಕೆ ಮಾಡಿರುವುದು ಶಾಕ್ ನೀಡಿದೆ. ಊಟ ತಿಂಡಿ ದರ ಏರಿಸಿದರೆ ಜನ ಪ್ರಶ್ನಿಸುತ್ತಾರೆ. ಜತೆಗೆ ಹೋಟೆಲ್ಗೆ ಬರುವ ಗ್ರಾಹಕರ ಸಂಖ್ಯೆ ಕ್ಷೀಣಿಸುತ್ತದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ರಾಜ್ಯ ಹೋಟೆಲ್ ಮಾಲೀಕರ ಸಂಘದ ಉಪಾಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಪ್ರತಿಕ್ರಿಯೆ ನೀಡಿದ್ದು, ಸಿಲಿಂಡರ್ ಬೆಲೆ ಏರಿಕೆಯಿಂದ ಹೋಟೆಲ್, ರೆಸ್ಟೋರೆಂಟ್ ಉದ್ಯಮಿಗಳಿಗೆ ಆರ್ಥಿಕ ಹೊರೆ ಎದುರಾಗುತ್ತದೆ. ಬೆಲೆ ಏರಿಕೆಯಿಂದ ಆಹಾರ ಬೆಲೆಗಳ ಏರಿಕೆ ಮಾಡಬೇಕಾದ ಅನಿವಾರ್ಯ ಪರಿಸ್ಥಿತಿ ಉಂಟಾಗಿದೆ. ಈಗಾಗಲೇ ಹೋಟೆಲ್ ಉದ್ಯಮಿಗಳು ಸಂಕಷ್ಟದಲ್ಲಿದ್ದಾರೆ. ಬೆಲೆ ಏರಿಕೆಯಿಂದ ಮತ್ತಷ್ಟು ಸಮಸ್ಯೆಗಳು ಆರಂಭವಾಗುತ್ತವೆ. ಆದ್ದರಿಂದ ಕೇಂದ್ರ ಸರ್ಕಾರ ತನ್ನ ನಿರ್ಧಾರವನ್ನು ಮರುಪರಿಶೀಲಿಸಬೇಕು ಎಂದು ಒತ್ತಾಯಿಸಿದ್ದಾರೆ.