ಭಾರತೀಯ ರೈಲ್ವೇಯ ಮಹತ್ವದ ಯೋಜನೆಗಳಲ್ಲಿ ತಿರುಪತ್ತೂರು-ಹೊಸೂರು ರೈಲು ಮಾರ್ಗ ಕೂಡಾ ಒಂದು. ಇದೀಗ ತಮಿಳುನಾಡಿ ತಿರುಪತ್ತೂರು ಮತ್ತು ಹೊಸೂರನ್ನು ಸಂಪರ್ಕಿಸುವ ಹೊಸ ರೈಲು ಮಾರ್ಗ ಯೋಜನೆಗೆ ಸಂಬಂಧಿಸಿದಂತೆ ಡೀಟೇಲ್ಸ್ ಪ್ರಾಜೆಕ್ಟ್ ರಿಪೋರ್ಟ್ (DPR) ತಯಾರಿಸಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗಿದೆ.
ಈ ಯೋಜನೆಯನ್ನು ದಕ್ಷಿಣ ರೈಲ್ವೇ ವಲಯದ ಅಡಿಯಲ್ಲಿ ಬರುತ್ತದೆ ಮತ್ತು ಇದು ಜನ ಸಂಪರ್ಕ, ಕೈಗಾರಿಕಾ ಬೆಳವಣಿಗೆ ಮತ್ತು ಸರಕು ಸಾಕಣೆಗೆ ದೊಡ್ಡ ಮಟ್ಟದಲ್ಲು ಉತ್ತೇಜನ ನೀಡಲಿದೆ ಎಂದು ಹೇಳಲಾಗಿದೆ.
4000 ಕೋಟಿಯ ಯೋಜನೆ!
ತಿರುಪತ್ತೂರು-ಹೊಸೂರು ನಡುವೆ ಹೊಸ ರೈಲು ಮಾರ್ಗ ನಿರ್ಮಾಣಕ್ಕೆ ಈಗಾಗಲೇ ಪ್ರಾಜೆಕ್ಟ್ ರಿಪೋರ್ಟ್ ಕೇಂದ್ರದ ಅಂಗಳಕ್ಕೆ ತಲುಪಿದೆ. ಇನ್ನು ಜಾಲರ್ ಪೇಟ್ ಮೂಲಕ ಹಾದುಹೋಗುವ ಈ ಮಾರ್ಗಕ್ಕೆ ಸುಮಾರು ₹4,000 ಕೋಟಿ ವೆಚ್ಚ ಅಂದಾಜಿಸಲಾಗಿದೆ. ಇದು ಕಂಡಲಿ, ಬರಗೂರ್, ಕೃಷ್ಣಗಿರಿ, ಪೊಳಪಲ್ಲಿ, ಚಿನ್ನಾರ್, ಶೂಲಗಿರಿ ಮಾರ್ಗವಾಗಿ ಸಂಚಾರ ನಡೆಸಲಿದೆ ಎಂದು ಹೇಳಲಾಗಿದೆ.
ವೇಗದ ಸೇವೆಗೆ ಒತ್ತು
ದಕ್ಷಿಣ ರೈಲ್ವೆ ಅಧಿಕಾರಿಯೊಬ್ಬರು ಹೇಳಿಕೆಯ ಪ್ರಕಾರ, "ಸುಮಾರು 109.24 ಕಿ.ಮೀ. ಉದ್ದದ ರೈಲು ಹಳಿಗಳನ್ನು ಹೊಂದಿರುವ ಈ ಮಾರ್ಗವನ್ನು ಅತ್ಯಾಧುನಿಕ ತಂತ್ರಜ್ಞಾನದಿಂದ ನಿರ್ಮಿಸಲಾಗುವುದು ಎಂದು ಹೇಳಿದ್ದಾರೆ. ರೈಲುಗಳು ಗಂಟೆಗೆ 130 ಕಿ.ಮೀ. ವೇಗದಲ್ಲಿ ಸಂಚರಿಸಲು ಬೇಕಾಗುವ ಎಲ್ಲಾ ಸೌಕರ್ಯಗಳನ್ನು ಇಲ್ಲಿ ನಿರ್ಮಿಸಲಾಗುತ್ತದೆ ಎಂದು ಹೇಳಿದ್ದಾರೆ."ಈ ಹೊಸ ಯೋಜನೆಗೆ ತಿರುಪತ್ತೂರು ಜಿಲ್ಲೆಯಿಂದ 64.435 ಎಕರೆ, ಕೃಷ್ಣಗಿರಿ ಜಿಲ್ಲೆಯಿಂದ 335.69 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗುತ್ತದೆ ಎನ್ನಲಾಗಿದೆ. "ಅನುದಾನ ಘೋಷಣೆಯಾದ ಬೆನ್ನಲ್ಲೇ ಹೊಸ ರೈಲು ಮಾರ್ಗ ಹಾಗೂ ನಿಲ್ದಾಣಗಳ ನಿರ್ಮಾಣ ಕಾರ್ಯಗಳು ಆರಂಭವಾಗಲಿವೆ" ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಇತ್ತೀಚೆಗೆ ಕೃಷ್ಣಗಿರಿಯಲ್ಲಿ ರೈಲ್ವೆ ಅಧಿಕಾರಿಗಳು, ತಮಿಳುನಾಡು ಸರ್ಕಾರದ ಅಧಿಕಾರಿಗಳು, ಕೈಗಾರಿಕೋದ್ಯಮಿಗಳು ಮತ್ತು ವರ್ತಕರು ಒಳಗೊಂಡ ಸಮಾಲೋಚನಾ ಸಭೆ ನಡೆಯಿತು. ಹೊಸೂರು ಕೈಗಾರಿಕೆಗಳಿಂದ ತಿರುಪತ್ತೂರು, ಧರ್ಮಪುರಿ, ಕೃಷ್ಣಗಿರಿ ಜನರಿಗೆ ಉದ್ಯೋಗ ಮತ್ತು ವ್ಯಾಪಾರ ಅವಕಾಶಗಳು ಇನ್ನಷ್ಟು ಹೆಚ್ಚಿದ ಕಾರಣ ರೈಲು ಸೇವೆಗಳ ಬೇಡಿಕೆ ಅಧಿಕವಾಗಿದೆ.
ಅಧಿಕಾರಿಗಳ ಪ್ರಕಾರ, 1905 ರಲ್ಲಿ ತಿರುಪತ್ತೂರಿನಿಂದ ಬರಗೂರ್ ಮೂಲಕ ಕೃಷ್ಣಗಿರಿಗೆ 42 ಕಿ.ಮೀ. ಉದ್ದದ ಕಿರಿದಾದ ಗೇಜ್ ರೈಲು ಮಾರ್ಗವು ನಿರ್ಮಾಣಗೊಂಡಿತ್ತು. ಆ ಮಾರ್ಗದಲ್ಲಿ ಆಗ ರೈಲು ಸೇವೆಗಳು ಚಾಲ್ತಿಯಲ್ಲಿದ್ದವು. ಎರಡನೇ ಮಹಾಯುದ್ಧದ ವೇಳೆ ದೇಶಾದ್ಯಂತ ಹಲವು ರೈಲು ಮಾರ್ಗಗಳನ್ನು ಮುಚ್ಚಿದಾಗ ಈ ರೈಲು ಸೇವೆಯನ್ನು ಸಹ ಮುಚ್ಚುವಂತೆ ಆದೇಶ ಹೊರಡಿಸಲಾಯಿತು ಎನ್ನಲಾಗಿದೆ. ಆ ನಂತರ ತಿರುಪತ್ತೂರು-ಕೃಷ್ಣಗಿರಿ ಮಾರ್ಗವನ್ನು 1942 ರಲ್ಲಿ ಸಂಪೂರ್ಣವಾಗಿ ಮುಚ್ಚಲಾಯಿತು ಎನ್ನಲಾಗಿದೆ. ಪ್ರಸ್ತುತ ಡಿಪಿಆರ್ ಅಂತಿಮಗೊಂಡು ಕೇಂದ್ರಕ್ಕೆ ಸಲ್ಲಿಸಲಾಗಿದೆ. ಹಣಕಾಸು ಮಂಜೂರಾತಿ ಬಂದ ನಂತರ ಭೂ ಸ್ವಾಧೀನ, ನಿರ್ಮಾಣ ಕಾಮಗಾರಿ ಮತ್ತು ಸ್ಟೇಷನ್‌ಗಳ ನಿರ್ಮಾಣ ಆರಂಭವಾಗಲಿದೆ ಎಂದು ದಕ್ಷಿಣ ರೈಲ್ವೇ ಅಧಿಕಾರಿಗಳು ತಿಳಿಸಿದ್ದಾರೆ.