ಬೆಂಗಳೂರು: ಸಮಾಜಕಲ್ಯಾಣ ಸಚಿವ ಮಹದೇವಪ್ಪ ಅವರೂ ಕೂಡ ನಮ್ಮ ಹೈಕಮಾಂಡ್ ಆಗಿದ್ದು, ಅವರಿಗೆ ಮುಖ್ಯಮಂತ್ರಿ ಬದಲಾವಣೆ ವಿಷಯ ತಿಳಿದಿರುತ್ತದೆ. ಹೀಗಾಗಿ, ದಲಿತ ಮುಖ್ಯಮಂತ್ರಿ ವಿಚಾರವನ್ನು ಅವರು ಪ್ರಸ್ತಾಪ ಮಾಡಿದ್ದಾರೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವ್ಯಂಗ್ಯವಾಡಿದ್ದಾರೆ.
ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಹದೇವಪ್ಪ ಅವರ ಹೇಳಿಕೆ ಗಮನಿಸಿದೆ. ಅವರಿಗೆ ಮುಖ್ಯಮಂತ್ರಿ ಬದಲಾವಣೆ ಮಾಹಿತಿ ಇರಬಹುದು. ಆದರೆ ನನಗೆ ಯಾವುದೇ ಮಾಹಿತಿ ಇಲ್ಲ ಎಂದರು.
ನಿಮ್ಮನ್ನು ಮತ್ತು ಸಿಎಂ ಅವರನ್ನು ದೆಹಲಿಗೆ ಆಹ್ವಾನಿಸಿದ್ದಾರೆಯೇ’ ಎಂಬ ಪ್ರಶ್ನೆಗೆ, ನನಗೆ ಯಾವುದೇ ಆಹ್ವಾನ ಬಂದಿಲ್ಲ. ಆದರೆ, ಇಲಾಖೆಗೆ ಸಂಬಂಧಿಸಿದ ಕೆಲಸಗಳ ಮೇಲೆ ನಾನು ದೆಹಲಿಗೆ ಹೋಗುತ್ತೇನೆ ಎಂದರು.
ಪರಮೇಶ್ವರ ಅವರಿಗೆ ಮೊದಲು ಕೂಲಿ ಕೊಡಲಿ ಎಂಬ ಶಾಸಕ ಕೆ.ಎನ್. ರಾಜಣ್ಣ ಅವರ ಹೇಳಿಕೆ ಕುರಿತು ‘ಅವರು ದೊಡ್ಡವರು’ ಎಂದು ಚುಟುಕಾಗಿ ಪ್ರತಿಕ್ರಿಯಿಸಿದರು.
ಸತೀಶ ಜಾರಕಿಹೊಳಿ ನನ್ನ ಜತೆ ಕಾರ್ಯಾಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ. ನಾವು ವಾರಕ್ಕೊಮ್ಮೆ ಮಾತನಾಡುತ್ತಿರುತ್ತೇವೆ. ನಾವು ಸಮಾನ ಮನಸ್ಕರು. ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವ ಸಂಬಂಧ ಚರ್ಚೆ ಮಾಡುತ್ತಿರುತ್ತೇವೆ ಎಂದು ತಿಳಿಸಿದರು.
‘ಮೊದಲ ಬಾರಿಗೆ ಆಯ್ಕೆಯಾದ 31 ಶಾಸಕರು ಬರೆದಿರುವ ಪತ್ರ ನನಗೆ ಸಿಕ್ಕಿಲ್ಲ. ಮಂತ್ರಿಯಾಗುವ ಆಸೆ ಎಲ್ಲರಿಗೂ ಇರುತ್ತದೆ. ಮೋದಿ ಅವರು ಶಾಸಕರಾಗದೇ ಮುಖ್ಯಮಂತ್ರಿ ಆಗಲಿಲ್ಲವೇ. ಶಾಸಕರು ಕೇಳುವುದರಲ್ಲಿ ತಪ್ಪೇನೂ ಇಲ್ಲ. ಮೊದಲ ಬಾರಿಗೆ ಶಾಸಕನಾದಾಗ ಮಂತ್ರಿಯಾದವರಲ್ಲಿ ನಾನೂ ಒಬ್ಬ. ನಾನು ಸಚಿವನಾಗಿ 36 ವರ್ಷವಾಗಿದೆ. ಹೊಸಬರು ಸಂಪುಟಕ್ಕೆ ಬರಬೇಕು ಎಂದು ಬೆಂಬಲಿಸುವವರಲ್ಲಿ ನಾನೂಒಬ್ಬ ಎಂದು ಹೇಳಿದರು.