ಜಮ್ಮು ಮತ್ತು ಕಾಶ್ಮೀರ: ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರಿ ಹಿಮಪಾತ ಸಂಭವಿಸಿದ್ದು, ಓರ್ವ ಕಾರ್ಮಿಕ ಬಲಿಯಾಗಿದ್ದು, ಮತ್ತೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಇದೇ ವೇಳೆ, ಕಿಶ್ಚಾರ್‌ನ ಸಿಂಥನ್ ಟಾಪ್ ಪ್ರದೇಶದಲ್ಲಿ ಹಿಮಪಾತದಿಂದಾಗಿ ಸಿಲುಕಿಕೊಂಡಿದ್ದ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ 235 ಮಂದಿಯನ್ನು ರಕ್ಷಣಾ ಪಡೆಗಳು ಯಶಸ್ವಿಯಾಗಿ ಸ್ಥಳಾಂತರಿಸಿವೆ. ಹಿಮದಿಂದ ರಸ್ತೆಗಳು ಸಂಪರ್ಕ ಕಡಿತಗೊಂಡಿವೆ. ಬಸ್ಸುಗಳು, ಟ್ಯಾಕ್ಸಿಗಳು ಮತ್ತು ಪ್ರವಾಸಿ ವಾಹನಗಳು ರಸ್ತೆಯಲ್ಲಿ ಸಿಲುಕಿಕೊಂಡಿ ಪರದಾಡುತ್ತಿದ್ದಾರೆ. ಪ್ರತಿಕೂಲ ಹವಾಮಾನದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಕಿಶ್ಚಾರ್ ಮತ್ತು ಪಕ್ಕದ ದೊಡಾ ಜಿಲ್ಲೆಯ ಎಲ್ಲಾ ಶಾಲಾ-ಕಾಲೇಜುಗಳಿಗೆ ಸೋಮವಾರ ರಜೆ ಘೋಷಿಸಲಾಗಿತ್ತು.
ಕಿಶ್ಚಾರ್ ಜಿಲ್ಲೆಯ ಡಂಗುರು ಎಂಬಲ್ಲಿರುವ ಜಲವಿದ್ಯುತ್ ಯೋಜನಾ ಪ್ರದೇಶದಲ್ಲಿ ಭಾನುವಾರ ತಡರಾತ್ರಿ ಸುರಿದ ಮಳೆಯಿಂದಾಗಿ ಭೂಕುಸಿತ ಸಂಭವಿಸಿದೆ. ಈ ವೇಳೆ ಇಬ್ಬರು ಕಾರ್ಮಿಕರು ಮಣ್ಣಿನಡಿ ಸಿಲುಕಿದ್ದರು. ಕಾರ್ಯಾಚರಣೆ ನಡೆಸಿದಾಗ ಒಬ್ಬ ಕಾರ್ಮಿಕ ಮೃತದೇಹ ಪತ್ತೆಯಾಗಿದ್ದು, ಗಾಯಗೊಂಡ ಮತ್ತೊಬ್ಬ ಕಾರ್ಮಿಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಹೆಚ್ಚಿನ ಭಾಗಗಳಲ್ಲಿ ಗುಡುಗು ಮತ್ತು ಬಲವಾದ ಗಾಳಿಯೊಂದಿಗೆ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಹಾಗಾಗಿ ಹವಾಮಾನ ಸಂಬಂಧಿತ ಅಪಾಯಗಳ ಬಗ್ಗೆ ಸಾರ್ವಜನಿಕರು ಎಚ್ಚರದಿಂದಿರಬೇಕು.
ದಕ್ಷಿಣ ಕಾಶ್ಮೀರದ ಅನಂತನಾಗ್ ಮತ್ತು ಕಿಶ್ಚಾರ್ ಜಿಲ್ಲೆಗಳನ್ನು ಸಂಪರ್ಕಿಸುವ ಹೈ-ಆಲ್ಟಿಟ್ಯೂಡ್ 'ಸಿಂಥನ್ ಟಾಪ್' ಪ್ರದೇಶದಲ್ಲಿ ಭಾರಿ ಹಿಮಪಾತದ ನಡುವೆ 38 ವಾಹನಗಳು ಸಿಲುಕಿಕೊಂಡಿದ್ದವು. ಮಾಹಿತಿ ಸಿಗುತ್ತಿದ್ದಂತೆಯೇ ಭಾರತೀಯ ಸೇನೆಯ ವೈಟ್ ನೈಟ್ ಕಾರ್ಪ್ಸ್ ಮತ್ತು ಪೊಲೀಸರು ಜಂಟಿ ಕಾರ್ಯಾಚರಣೆ ಆರಂಭಿಸಿದವು.