ನ್ಯೂಯಾರ್ಕ್: ಅಮೆರಿಕದ ಈಶಾನ್ಯ ಭಾಗದಲ್ಲಿ ಭಾರೀ ಹಿಮಬಿರುಗಾಳಿ ಅಪ್ಪಳಿಸಿದ್ದು, 5,600ಕ್ಕೂ ಹೆಚ್ಚು ವಿಮಾನಗಳ ಹಾರಾಟ ರದ್ದುಗೊಂಡಿದೆ. ಪರಿಸ್ಥಿತಿಯನ್ನು ಮನಗಂಡು ಹಲವೆಡೆ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.
ಮೇರಿಲ್ಯಾಂಡ್‌ನಿಂದ ಮೈನ್‌ವರೆಗೆ ವ್ಯಾಪಕ ಹಿಮಪಾತ ಮತ್ತು ತೀವ್ರ ಗಾಳಿಯ ಪರಿಣಾಮ ಸಾರಿಗೆ ವ್ಯವಸ್ಥೆ ಸಂಪೂರ್ಣ ಅಸ್ತವ್ಯಸ್ತವಾಗಿದೆ.ರಸ್ತೆ ಮತ್ತು ರೈಲು ಸಂಚಾರಕ್ಕೂ ವ್ಯತ್ಯಯ ಉಂಟಾಗಿದ್ದು, ವ್ಯಾಪಾರ-ವಹಿವಾಟುಗಳಿಗೆ ಅಡ್ಡಿಯಾಗಿದೆ. ಜನಜೀವನ ಸಾಮಾನ್ಯ ಸ್ಥಿತಿಯಿಂದ ಹೊರಬಿದ್ದಿದೆ.
ಹವಾಮಾನ ತಜ್ಞರ ಪ್ರಕಾರ, ಕಳೆದ ಒಂದು ದಶಕದಲ್ಲಿ ಕಂಡುಬಂದ ಅತ್ಯಂತ ಪ್ರಬಲ ಹಿಮಬಿರುಗಾಳಿ ಇದಾಗಿದೆ. ಕೆಲ ಪ್ರದೇಶಗಳಲ್ಲಿ 2 ಅಡಿ (ಸುಮಾರು 60 ಸೆಂ.ಮೀ) ಗಿಂತ ಹೆಚ್ಚು ಹಿಮ ಸುರಿದಿದೆ. ಹಲವು ರಾಜ್ಯಗಳಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದ್ದು, ಶಾಲೆಗಳು ಮತ್ತು ಕಚೇರಿಗಳನ್ನು ಮುಚ್ಚಲಾಗಿದೆ. ಅನೇಕ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿ ಜನರು ಕತ್ತಲಿನಲ್ಲಿ ದಿನ ಕಳೆಯುವ ಪರಿಸ್ಥಿತಿ ನಿರ್ಮಾಣವಾಗಿದೆ.
ಸೋಮವಾರ ಮಾತ್ರವೇ 5,600ಕ್ಕೂ ಹೆಚ್ಚು ವಿಮಾನ ಸೇವೆಗಳು ರದ್ದುಗೊಂಡಿದ್ದು, ಮಂಗಳವಾರ ನಿಗದಿಯಾಗಿದ್ದ ಇನ್ನೂ 2,000ಕ್ಕೂ ಹೆಚ್ಚು ವಿಮಾನಗಳನ್ನು ರದ್ದುಪಡಿಸಲಾಗಿದೆ. ಸುಮಾರು 2,500 ವಿಮಾನಗಳ ಹಾರಾಟ ವಿಳಂಬವಾಗಿದೆ. ಅಧಿಕಾರಿಗಳು ಅನಾವಶ್ಯಕ ಪ್ರಯಾಣ ತಪ್ಪಿಸಲು ಸಾರ್ವಜನಿಕರಿಗೆ ಸೂಚನೆ ನೀಡಿದ್ದಾರೆ.