ಬೆಂಗಳೂರು: ಇಂದು ಸಂಜೆ 4.05ಕ್ಕೆ ಡಿಕೆ ಶಿವಕುಮಾರ್ ಅವರು, ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಅಧಿಕೃತ ಮೂಲಗಳ ಪ್ರಕಾರ ಇವರ ಜತೆ ಡಾ.ಜಿ. ಪರಮೇಶ್ವರ ಅವರು ಉಪ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವುದು ಖಚಿತವಾಗಿದೆ.
ಈ ಮೊದಲು ಮೂವರು ಉಪ ಮುಖ್ಯಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂಬ ಮಾಹಿತಿ ಹರಿದಾಡುತ್ತಿತ್ತು. ಶಿವಕುಮಾರ್ ಅವರನ್ನು ನಿಯಂತ್ರಿಸಲು ಲಿಂಗಾಯತ, ದಲಿತ, ಅಲ್ಪಸಂಖ್ಯಾತ ಸಮುದಾಯದ ಒಬ್ಬೊಬ್ಬರನ್ನು ಡಿಸಿಎಂ ಮಾಡಲಾಗುವುದು ಎಂಬ ಸುದ್ದಿ ಹರಿದಾಡುತ್ತಿತ್ತು. ಆದರೆ ಸಾಂವಿಧಾನಿಕ ಹುದ್ದೆಯಲ್ಲದ ಉಪ ಮುಖ್ಯಮಂತ್ರಿ ಸ್ಥಾನವನ್ನು ಹೆಚ್ಚಿನ ಸಂಖ್ಯೆಯಲ್ಲಿ ಸೃಷ್ಟಿ ಮಾಡುವುದು ಬೇಡ ಎಂದು ಹೈಕಮಾಂಡ್ ನಿರ್ಧಾರ ಕೈಗೊಂಡಿದ್ದು ಪರಮೇಶ್ವರ್ ಅವರೊಬ್ಬರಿಗೆ ಅವಕಾಶ ದಕ್ಕಿದೆ.
ಸಂಜೆ ಲೋಕಭವನದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಅನೇಕ ಗಣ್ಯರು ಭಾಗವಹಿಸಲಿದ್ದಾರೆ. ಎಐಸಿಸಿ ವರಿಷ್ಠರ ಜತೆಗೆ ಕೇರಳದ ಮುಖ್ಯಮಂತ್ರಿ ವಿಡಿ ಸತೀಶನ್ ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಭಾಗವಹಿಸಲಿದ್ದಾರೆ.
ತುಮಕೂರು ಮೂಲದ ಪರಮೇಶ್ವರ್ ಕೊರಟಗೆರೆ ಮೀಸಲು ಕ್ಷೇತ್ರವನ್ನು ಪ್ರತಿನೀಧಿಸುತ್ತಿದ್ದಾರೆ. ಸಿದ್ದರಾಮಯ್ಯ ಸಂಪುಟದಲ್ಲಿ ಅವರು ಗೃಹ ಖಾತೆಯನ್ನು ನಿಭಾಯಿಸಿದ್ದರು.