ಬೆಂಗಳೂರು: ಬಿಡದಿ ಟೌನ್‌ಶಿಪ್ ಯೋಜನೆಗೆ ಸಂಬಂಧಿಸಿದಂತೆ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು, ಸಿಎಂ ಡಿ.ಕೆ. ಶಿವಕುಮಾರ್ ಅವರ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಬಿಡದಿ ಬಡಿದಾಟ ಹೋರಾಟಕ್ಕೆ ಎಂಟ್ರಿ ಕೊಟ್ಟಿರುವ ಅವರು, ಸುದ್ದಿಗೋಷ್ಠಿಯಲ್ಲಿ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಕುರ್ಚಿಯಿಂದ ಕೆಳಗಿಳಿಸಲು ಮತ್ತು ಕಾಂಗ್ರೆಸ್ ಹೈಕಮಾಂಡ್ ಅನ್ನು ಒಲಿಸಿಕೊಳ್ಳಲು ಡಿ.ಕೆ. ಶಿವಕುಮಾರ್ ಕೊಟ್ಟ ಭರವಸೆ ಉಳಿಸಿಕೊಂಡರು ಎಂದು ದೂರಿದ ದೇವೇಗೌಡರು, ಚುನಾವಣಾ ಫಂಡ್ ಆಶ್ವಾಸನೆ ಈಡೇರಿಸಿಕೊಳ್ಳಲು ಬಿಡದಿಯ 7 ಸಾವಿರ ಎಕರೆ ಜಾಗವನ್ನು ನಿವೇಶನ ಮಾಡಲು ಹೊರಟಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಸಿದ್ದರಾಮಯ್ಯನವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಲು ಹೈಕಮಾಂಡ್‌ಗೆ ಕೊಟ್ಟ ಆಶ್ವಾಸನೆ ಫುಲ್‌ಫಿಲ್ ಮಾಡಿದ್ದಾರೆ. ಆದರೆ ಬಡ ರೈತರ ಹೊಟ್ಟೆಯ ಮೇಲೆ ಹೊಡೆಯಬೇಡಿ ಎಂದು ಡಿಕೆಶಿ ವಿರುದ್ಧ ಗುಡುಗಿದರು. ಈ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಒಪ್ಪಿದ್ದಾರೆ ಎಂದು ಡಿಕೆಶಿ ಸುಳ್ಳು ಪ್ರಸ್ತಾಪ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪತ್ರ ಬರೆಯುವೆ ಎಂದ ದೇವೇಗೌಡರು ಬಿಡದಿ ಟೌನ್‌ಶಿಪ್ ಯೋಜನೆಯನ್ನು ತಕ್ಷಣವೇ ರದ್ದು ಮಾಡುವಂತೆ ಶಿವಕುಮಾರ್ ಅವರಿಗೆ 11 ಪುಟಗಳ ಸುದೀರ್ಘ ಪತ್ರ ಬರೆದಿರುವುದಾಗಿ ತಿಳಿಸಿದ ದೇವೇಗೌಡರು, ಒಂದು ವೇಳೆ ಸರ್ಕಾರ ಈ ಯೋಜನೆಯನ್ನು ಕೈಬಿಡದಿದ್ದರೆ ತಾವು ವಿಧಾನಸೌಧದ ಗಾಂಧಿ ಪ್ರತಿಮೆ ಮುಂದೆ ಧರಣಿ ಕೂರಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ. ಯೋಜನಾ ವ್ಯಾಪ್ತಿಯಲ್ಲಿರುವ ಸಣ್ಣ ಹಿಡುವಳಿದಾರರ ಪರ ಬ್ಯಾಟ್ ಬೀಸಿದ ದೇವೇಗೌಡರು, ಭೂಮಿ ಕಳೆದುಕೊಳ್ಳುತ್ತಿರುವ ರೈತರ ನಿಖರ ವಿವರಗಳನ್ನು ಬಿಡುಗಡೆ ಮಾಡಿದರು. ಈ ಭಾಗದಲ್ಲಿ 2,555 ರೈತರಿಗೆ ಕೇವಲ 1 ರಿಂದ 5 ಗುಂಟೆ ಜಾಗವಿದ್ದರೆ, 1,653 ರೈತರಿಗೆ 10 ರಿಂದ 20 ಗುಂಟೆ ಜಾಗವಿದೆ. ಹಾಗೆಯೇ 2,257 ರೈತರಿಗೆ 20 ರಿಂದ 40 ಗುಂಟೆ ಹಾಗೂ 1,342 ರೈತರಿಗೆ 1 ರಿಂದ 2 ಎಕರೆ ಜಾಗವಿದೆ. ಇಷ್ಟೊಂದು ಬಡ ರೈತರನ್ನು ಒಕ್ಕಲೆಬ್ಬಿಸಿ ಎಲ್ಲಿಗೆ ಕಳುಹಿಸುತ್ತೀರಾ ಎಂದು ಅವರು ಪ್ರಶ್ನಿಸಿದರು. ಭೂಮಿ ಕೊಡಲು ಒಪ್ಪಿರುವವರು ಹಳ್ಳಿಯಲ್ಲಿಲ್ಲ, ಬೆಂಗಳೂರಿನಲ್ಲಿದ್ದಾರೆ ಮತ್ತು ಅವರದ್ದು ಕೇವಲ 17 ಎಕರೆ ಜಾಗ ಮಾತ್ರ. ಆದರೆ 500 ಎಕರೆ ಇರೋ ನಿಜವಾದ ರೈತರ ಜಾಗಕ್ಕೆ ಇವರು ಹೋಗೇ ಇಲ್ಲ. ಉಳಿದಿದ್ದು ಸರ್ಕಾರಿ ಗೋಮಾಳವಾಗಿದ್ದು, ಅಲ್ಲಿ ಹೆಣ್ಣುಮಕ್ಕಳು ಹಸು ಸಾಕಿ, ದಿನಕ್ಕೆ 60 ಸಾವಿರ ಲೀಟರ್ ಹಾಲು ಕರೆದು ಜೀವನ ಮಾಡುತ್ತಿದ್ದಾರೆ ಎಂದು ಸರ್ಕಾರದ ನೀತಿಯನ್ನು ತರಾಟೆಗೆ ತೆಗೆದುಕೊಂಡರು.
ಸರ್ಕಾರ ಈಗಾಗಲೇ ಮಾಡಿರುವ ಕೆಂಪೇಗೌಡ ಲೇಔಟ್ ಹಾಗೂ ಶಿವರಾಮ ಕಾರಂತ ಬಡಾವಣೆಗಳಲ್ಲಿ ಅಭಿವೃದ್ಧಿಪಡಿಸಿದ ಸುಮಾರು 40 ಸಾವಿರ ನಿವೇಶನಗಳನ್ನು ಕೊಳ್ಳುವವರೇ ಇಲ್ಲದೆ ಖಾಲಿ ಬಿದ್ದಿವೆ. ಸ್ವತಃ ಸಚಿವ ಜಾರಕಿಹೋಳಿಯವರೇ ಬಿಡಿಎ ಸೈಟುಗಳು ಖಾಲಿ ಇವೆ ಎನ್ನುತ್ತಾರೆ. ಹೀಗಿರುವಾಗ ಬೇರೆ ಕಡೆ ಜಾಗ ಇದ್ದರೂ ಬಿಡದಿಯ ಈ ಜಮೀನಿನ ಮೇಲೆಯೇ ಕಣ್ಣು ಯಾಕೆ ಎಂದು ದೇವೇಗೌಡರು ಪ್ರಶ್ನಿಸಿದರು. ಇದೇ ವೇಳೆ ಬಿಡದಿಯಲ್ಲಿ ನಡೆದ ಘಟನೆಯಿಂದ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಮನಸ್ಸಿಗೆ ತೀವ್ರ ನೋವಾಗಿದ್ದು, ಶಾಂತಿಯುತ ಹೋರಾಟಕ್ಕೆ ಕರೆ ನೀಡಿದ್ದಾರೆ ಎಂದು ತಿಳಿಸಿದರು. ಇತ್ತ ನಿಖಿಲ್ ಕುಮಾರಸ್ವಾಮಿ ಬರ ಅಧ್ಯಯನದಲ್ಲಿದ್ದು, ರೈತರ ಮೇಲಿನ ಎಫ್‌ಐಆರ್ ರದ್ದು ಮಾಡಲು ಒತ್ತಾಯಿಸಿದ್ದಾರೆ. ಪೊಲೀಸರಿಗೆ ಆಸ್ಪತ್ರೆಗೆ ದಾಖಲಾಗುವಂತಹ ದೊಡ್ಡ ಗಾಯಗಳೇನೂ ಆಗಿಲ್ಲ, ಹೀಗಾಗಿ ಸರ್ಕಾರ ಮಹಿಳೆಯರ ನೋವನ್ನು ಅರ್ಥ ಮಾಡಿಕೊಳ್ಳಬೇಕು. ರೈತರ ಮೇಲೆ ಎಫ್‌ಐಆರ್ ಹಾಕಿ ಅರೆಸ್ಟ್ ಮಾಡಿದರೆ ಹಸುಗಳಿಂದ ಹಾಲು ಕರೆಯುವವರು ಯಾರು ಎಂದು ಪ್ರಶ್ನಿಸಿದ ಅವರು, ಕೂಡಲೇ ಎಫ್‌ಐಆರ್ ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದರು.