ಬೆಂಗಳೂರು: ರಾಜ್ಯ ಸರ್ಕಾರ ಜಾರಿಗೊಳಿಸಿದ್ದ ದ್ವೇಷ ಭಾಷಣ ನಿಯಂತ್ರಣ ಮಸೂದೆ ಇದೀಗ ರಾಷ್ಟ್ರಪತಿಗಳ ಅಂಗಳಕ್ಕೆ ತಲುಪಿದೆ. ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಮಸೂದೆಗೆ ಸಹಿ ಹಾಕದಿರಲು 29 ಕಾರಣಗಳನ್ನು ಉಲ್ಲೇಖಿಸಿ ಮಸೂದೆಯನ್ನು ರಾಷ್ಟ್ರಪತಿಗಳಿಗೆ ವರ್ಗಾಯಿಸಿದ್ದಾರೆ.
ರಾಜ್ಯಪಾಲರ ಈ ನಡೆ ರಾಜ್ಯ ರಾಜಕಾರಣದಲ್ಲಿ ಚರ್ಚೆಗೆ ನಾಂದಿ ಹಾಡಿದ್ದು, ಆಡಳಿತ ಮತ್ತು ಪ್ರತಿಪಕ್ಷಗಳ ವಾಕ್ಸಮರಕ್ಕೆ ಕಾರಣವಾಗಿದೆ.
ರಾಜ್ಯಪಾಲರು ಸಹಿ ಹಾಕದಿರಲು ನೀಡಿರುವ ಕಾರಣಗಳು:
ದ್ವೇಷ ಭಾಷಣದ ವ್ಯಾಖ್ಯಾನ ಅಸ್ಪಷ್ಟವಾಗಿದ್ದು, ದ್ವೇಷ ಭಾಷಣ ಎಂದರೇನು ಎಂದು ಸ್ಪಷ್ಟ ವ್ಯಾಖ್ಯಾನವಿಲ್ಲ. ಇದರಿಂದ ಧರ್ಮ, ಜಾತಿ, ಜನಾಂಗ, ಲಿಂಗ ಇತ್ಯಾದಿಗಳ ಆಧಾರದ ಮೇಲೆ ಪೂರ್ವಾಗ್ರಹದಿಂದ ಕಾನೂನು ದುರುಪಯೋಗವಾಗುವ ಆತಂಕ ಇದೆ.
ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಗಂಭೀರ ಧಕ್ಕೆಯಾಗಲಿದೆ ಎಂದು ಸಂಶಯ ವ್ಯಕ್ತವಾಗಿದ್ದು, ಸಂವಿಧಾನದ ಅನುಚ್ಛೇದ 19(1)(a) ಅಡಿಯಲ್ಲಿ ರಕ್ಷಣೆ ಪಡೆದಿರುವ ಮೂಲಭೂತ ಹಕ್ಕಿಗೆ ಇದು ಧಕ್ಕೆ ತರಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಪೊಲೀಸ್ ವ್ಯವಸ್ಥೆಯ ದುರುಪಯೋಗವಾಗುವ ಸಾಧ್ಯತೆಗಳಿದ್ದು, ಮಸೂದೆಯ ಅಸ್ಪಷ್ಟತೆಯಿಂದ ಪೊಲೀಸರು ಮನಸೋ ಇಚ್ಛೆ ಕ್ರಮ ಕೈಗೊಳ್ಳುವ ಸಾಧ್ಯತೆಗಳಿವೆ ಎಂಬ ಕಾರಣಗಳನ್ನು ನೀಡಲಾಗಿದೆ.
ದ್ವೇಷ ಭಾಷಣ ಮಸೂದೆಯನ್ನು ರಾಜ್ಯಪಾಲರು ರಾಷ್ಟ್ರಪತಿಗಳಿಗೆ ಕಳುಹಿಸಿದ್ದಾರೆ. ರಾಷ್ಟ್ರಪತಿಗಳು ಪರಿಶೀಲಿಸಿ ಸರ್ಕಾರಕ್ಕೆ ಮರಳಿಸಿದರೆ ಬದಲಾವಣೆ ಮಾಡಿ ಕಳಿಸಲಾಗುವುದು ಎಂದು ಗೃಹ ಸಚಿವ ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಏನು ಬೇಕಾದರೂ ಮಾತನಾಡಿದರೆ, ಅದು ದುಷ್ಪರಿಣಾಮ ಬೀರಲಿದೆ. ಸಮುದಾಯಗಳನ್ನು ನಿಂದಿಸುವುದು, ವೈಯಕ್ತಿಕವಾಗಿ ಟೀಕಿಸುವುದಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ದ್ವೇಷಭಾಷಣ ಮಸೂದೆ ತಂದಿದ್ದೇವೆ. ಬಹುಶಃ ರಾಜ್ಯಪಾಲರು ಉದ್ದೇಶಪೂರ್ವಕವಾಗಿ, ದ್ವೇಷ ಭಾಷಣ ಮಸೂದೆ ಜಾರಿಯಾಗಬಾರದು ಎಂಬ ಉದ್ದೇಶದಿಂದ ರಾಷ್ಟ್ರಪತಿಗಳಿಗೆ ಕಳುಹಿಸಿರಬಹುದು ಎಂದು ಸಚಿವರು ಅಭಿಪ್ರಾಯಪಟ್ಟರು.