ಭಾರತ ಕ್ರಿಕೆಟ್ ತಂಡವು 2026ನೇ ಸಾಲಿನ ಟಿ20 ವಿಶ್ವಕಪ್ ಅನ್ನು ಗೆದ್ದು ಬೀಗಿದೆ. ಟೂರ್ನಿಯಲ್ಲಿ ಬ್ಯಾಟಿಂಗ್ ಹಾಗೂ ಬೌಲಿಂಗ್ ಮೂಲಕ ಗಮನಾರ್ಹ ಪ್ರದರ್ಶನ ತೋರಿದ ಹಾರ್ದಿಕ್ ಪಾಂಡ್ಯ ಅವರು ಭಾರತದ ವಿಶ್ವಕಪ್ ಗೆಲುವಿನಲ್ಲಿ ಮಹತ್ತರ ಪಾತ್ರ ವಹಿಸಿದ್ದರು. ಆದರೆ, ಫೈನಲ್ ಪಂದ್ಯ ಗೆದ್ದ ಬಳಿಕ ಅವರು ನಡೆಸಿದ ಸಂಭ್ರಮಾಚರಣೆಗೆ ಆಕ್ರೋಶ ವ್ಯಕ್ತವಾಗುತ್ತಿದೆ. ಹಾರ್ದಿಕ್ ಪಾಂಡ್ಯ ಅವರು ಸಂಭ್ರಮಾಚರಣೆ ವೇಳೆ ರಾಷ್ಟ್ರಧ್ವಜಕ್ಕೆ ಅಗೌರವ ತೋರಿದ್ದಾರೆ. ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಪುಣೆ ಮೂಲದ ವಕೀಲರು ಪೊಲೀಸರಿಗೆ ದೂರು ನೀಡಿದ್ದಾರೆ.
ಶಿವಾಜಿ ನಗರ ಪೊಲೀಸ್ ಠಾಣೆಯಲ್ಲಿ ವಕೀಲ ವಾಜಿದ್ ಖಾನ್ ಎಂಬುವವರು ದೂರು ದಾಖಲಿಸಿದ್ದಾರೆ. ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಭಾರತ ತಂಡ ನ್ಯೂಜಿಲೆಂಡ್ ತಂಡವನ್ನು ಸೋಲಿಸಿದ ಬಳಿಕ ಹಾರ್ದಿಕ್ ಪಾಂಡ್ಯ ಅವರು ತಮ್ಮ ಗೆಳತಿ ಮಹೀಕಾ ಶರ್ಮಾ ಜೊತೆ ಮೈದಾನದಲ್ಲಿ ಸಂಭ್ರಮಾಚರಣೆ ಮಾಡುವಾಗ ತ್ರಿವರ್ಣ ಧ್ವಜವನ್ನು ಸುತ್ತಿಕೊಂಡಿದ್ದರು ಎಂದು ವಕೀಲರು ಆರೋಪಿಸಿದ್ದಾರೆ. ಈ ಕುರಿತು ಮಾತನಾಡಿದ ವಾಜಿದ್ ಖಾನ್, ಹಾರ್ದಿಕ್ ಮಾಡಿರುವ ಕೃತ್ಯವು ರಾಷ್ಟ್ರಧ್ವಜಕ್ಕೆ ಅಗೌರವ ತೋರಿಸಿದಂತೆ ಎಂದು ಹೇಳಿದ್ದಾರೆ.
'ನೀವು ಇತ್ತೀಚೆಗೆ ಮುಕ್ತಾಯಗೊಂಡ ಟಿ20 ವಿಶ್ವಕಪ್ ಅನ್ನು ನೋಡಿರಬಹುದು. ಟ್ರೋಫಿ ಗೆಲುವನ್ನು ಸಂಭ್ರಮಿಸುವಾಗ ಹಾರ್ದಿಕ್ ಪಾಂಡ್ಯ ತನ್ನ ಗೆಳತಿಯೊಂದಿಗೆ ನೃತ್ಯ ಮಾಡುತ್ತಿದ್ದರು. ಆ ಸಂದರ್ಭದಲ್ಲಿ ಅವರು ರಾಷ್ಟ್ರಧ್ವಜವನ್ನು ಬೆನ್ನಿಗೆ ಸುತ್ತಿಕೊಂಡಿದ್ದರು. 1971ರ ರಾಷ್ಟ್ರೀಯ ಧ್ವಜ ಕಾಯ್ದೆಯ ಸೆಕ್ಷನ್ 2 ರ ಪ್ರಕಾರ, ನಾವು ರಾಷ್ಟ್ರಧ್ವಜವನ್ನು ಗೌರವಿಸಬೇಕು. ಆದರೆ, ಪಾಂಡ್ಯ, ವಿಜಯೋತ್ಸವದ ಸಂಭ್ರಮಾಚರಣೆಯಲ್ಲಿ ಕಳೆದು ಹೋಗಿದ್ದರು. ಅವರು ತಮ್ಮ ಗೆಳತಿಯೊಂದಿಗೆ ರಾಷ್ಟ್ರಧ್ವಜವನ್ನು ಧರಿಸಿ ಮಲಗಿದ್ದರು. ಇದು ರಾಷ್ಟ್ರಧ್ವಜಕ್ಕೆ ಮಾಡಿದ ಅವಮಾನ' ಎಂದು ಎಎನ್‌ಐ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ. 'ನಾನು ಶಿವಾಜಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೇನೆ. ನಾನು ದೂರು ದಾಖಲಿಸಲು ಹೋದಾಗ, ಘಟನೆ ನಮ್ಮ ವ್ಯಾಪ್ತಿಯಲ್ಲಿ ನಡೆದಿರುವುದಲ್ಲ ಎಂದರು. ಆದರೆ, ರಾಷ್ಟ್ರಧ್ವಜ ಇಡೀ ರಾಷ್ಟ್ರದ ಸಂಕೇತವಾಗಿದೆ. ಹಾಗಾಗಿ ಎಲ್ಲಿಬೇಕಾದರು ದೂರು ನೀಡಬಹುದು ಎಂದು ನಾನು ಅವರಿಗೆ ಹೇಳಿದೆ. ಬಳಿಕ ಅವರು. ನನ್ನ ದೂರನ್ನು ಸ್ವೀಕರಿಸಿ ಒಂದು ಪ್ರತಿ. ನೀಡಿದ್ದಾರೆ' ಎಂದು ಅವರು ಹೇಳಿದರು. ಪಂದ್ಯದ ಬಳಿಕ ಹಾರ್ದಿಕ್ ಪಾಂಡ್ಯ ಅವರು ಗೆಳತಿ ಮಹಿಕಾ ಶರ್ಮಾ ಅವರೊಂದಿಗೆ ಸಂಭ್ರಮಾಚರಣೆ ಮಾಡುತ್ತಿರುವ ವಿಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿವೆ. ಅದರಲ್ಲಿ, ರಾಷ್ಟ್ರಧ್ವಜ ಸುತ್ತಿಕೊಂಡು ಮಲಗಿ ಸಂಭ್ರಮಿಸಿರುವುದಕ್ಕೆ ನೆಟ್ಟಿಗರಿಂದ ಆಕ್ರೋಶ ವ್ಯಕ್ತವಾಗುತ್ತಿದೆ.