ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಹಲಸಂಗಿ ಗ್ರಾಮದಲ್ಲಿ ನಡೆದಿದ್ದ ಚಿನ್ನದಂಗಡಿ ದರೋಡೆ ಪ್ರಕರಣವನ್ನು ಪೊಲೀಸರು ಕೇವಲ 20 ದಿನಗಳಲ್ಲೇ ಭೇದಿಸಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಜನವರಿ 26ರಂದು ಭೂಮಿಕಾ ಜುವೆಲರಿ ಅಂಗಡಿಯಲ್ಲಿ ಗನ್ ಪಾಯಿಂಟ್‌ನಲ್ಲಿ ದರೋಡೆ ನಡೆದಿತ್ತು.ದರೋಡೆಕೋರರು ಅಂಗಡಿ ಮಾಲೀಕ ಮಹಾರುದ್ರ ಅವರ ಹಣೆಗೆ ಬಂದೂಕು ತೋರಿಸಿ ಬೆದರಿಸಿ, ಸುಮಾರು 250 ಗ್ರಾಂ ಚಿನ್ನಾಭರಣ ಮತ್ತು 1.5 ಕೆಜಿ ಬೆಳ್ಳಿ ಆಭರಣ ದೋಚಿ ಪರಾರಿಯಾಗಿದ್ದರು.
ಪ್ರಕರಣದ ತನಿಖೆ ಕೈಗೊಂಡ ಚಡಚಣ ಪೊಲೀಸರು ಮಹಾರಾಷ್ಟ್ರದ ಪುಣೆಯಲ್ಲಿ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರನ್ನು ಹಣಮಂತ ವಾಗೋಲಿ ಮತ್ತು ಶಿವರಾಜ್ ನಾವಿ ಎಂದು ಗುರುತಿಸಲಾಗಿದೆ. ಇಬ್ಬರೂ ಮಹಾರಾಷ್ಟ್ರ ಮೂಲದವರಾಗಿದ್ದಾರೆ.
ಆರೋಪಿಗಳಿಂದ 3 ಕಂಟ್ರಿಮೆಡ್ ಪಿಸ್ತೂಲು, 1 ಏರ್ ಗನ್, 205 ಗ್ರಾಂ ಚಿನ್ನ ಹಾಗೂ 1 ಕೆಜಿ ಬೆಳ್ಳಿ ವಶಪಡಿಸಿಕೊಳ್ಳಲಾಗಿದೆ. ಪೊಲೀಸರು ಮುಂದಿನ ತನಿಖೆಯನ್ನು ಮುಂದುವರೆಸಿದ್ದಾರೆ.
ಏನಿದು ಘಟನೆ.?
ಚಡಚಣ ತಾಲೂಕಿನ ಹಲಸಂಗಿ ಗ್ರಾಮದಲ್ಲಿ ನಡೆದಿದೆ. ಕಂಟ್ರಿ ಪಿಸ್ತೂಲ್ ತೋರಿಸಿ ಬಂಗಾರದ ಅಂಗಡಿಯನ್ನು ಸಂಪೂರ್ಣವಾಗಿ ದೋಚಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.ಅಂಗಡಿಯಲ್ಲಿ ವೃದ್ಧೆಯೋರ್ವರಿಗೂ ಪಿಸ್ತೂಲ್‌ನಿಂದ ಬೆದರಿಸಿದ್ದಾರೆ. ಬುಲೆಟ್ ಬೈಕ್‌ನಲ್ಲಿ ಬಂದಿದ್ದ ಇಬ್ಬರು ಮುಸುಕು ಧಾರಿಗಳು ಈ ಕೃತ್ಯ ಎಸಗಿದ್ದಾರೆ.
ಬುಲೆಟ್ ಬೈಕ್‌ನಲ್ಲಿ ಬಂದು ದರೋಡೆ ಮಾಡಿ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಈ ವೇಳೆ ಆತ್ಮಲಿಂಗ ಹೂಗಾರ ಎಂಬ ಯುವಕನ ಬಲಗಾಲಿಗೆ ಗುಂಡು ಹೊಕ್ಕಿದೆ. ಸ್ಥಳಕ್ಕೆ ಎಸ್‌ಪಿ ನಿಂಬರಗಿ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.